
ಹೈದರಾಬಾದ್: ಅಂತರರಾಜ್ಯ ಮಾನವ ಕಳ್ಳಸಾಗಣೆ ತಂಡದ 11 ಮಂದಿಯನ್ನು ಇಲ್ಲಿ ಬಂಧಿಸಲಾಗಿದ್ದು, ಅವರಿಂದ ಎರಡು ನವಜಾತ ಶಿಶುಗಳನ್ನು ರಕ್ಷಿಸಲಾಗಿದೆ ಎಂದು ಪೊಲೀಸರು ಬುಧವಾರ ಹೇಳಿದ್ದಾರೆ.
ವಿಶ್ವಾಸಾರ್ಹ ಮಾಹಿತಿಗಳ ಆಧಾರದ ಮೇಲೆ, ಶಿಶುಗಳನ್ನು ಮಾರಾಟ ಮಾಡುತ್ತಿರುವಾಗಲೇ ಆರೋಪಿಗಳನ್ನು ಬಂಧಿಸಲಾಗಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಮಾಧಾಪುರ ವಲಯ ಉಪ ಪೊಲೀಸ್ ಆಯುಕ್ತ ರಿತಿರಾಜ್, ‘ಆರೋಪಿಗಳು ಆಂಧ್ರಪ್ರದೇಶ, ತೆಲಂಗಾಣ ಮತ್ತು ಬಿಹಾರದವರಾಗಿದ್ದು, ತಮ್ಮ ಕೃತ್ಯಗಳಿಗಾಗಿ ಸಂಘಟಿತ ತಂಡವನ್ನು ರಚಿಸಿಕೊಂಡಿದ್ದರು. ಪ್ರಮುಖ ಆರೋಪಿಗಳನ್ನು ಅವರ ಸಹಚರರೊಂದಿಗೆ ಮಿಯಾಪುರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಗರದ ವಿವಿಧ ಭಾಗಗಳಿಂದ ಬಂಧಿಸಲಾಗಿದೆ’ ಎಂದು ಹೇಳಿದ್ದಾರೆ.
ಪ್ರಮುಖ ಆರೋಪಿ ವಿ.ಬಾಬು ರೆಡ್ಡಿ ಐವಿಎಫ್ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.
‘ಆರೋಪಿಗಳು ದೇಶದ ವಿವಿಧ ಭಾಗಗಳ ಬಡ ಕುಟುಂಬಗಳನ್ನು ಗುರುತಿಸಿ, ಅವರಿಗೆ ಆಕರ್ಷಕ ಮೊತ್ತವನ್ನು ನೀಡಿ, ಅವರಿಂದ ನವಜಾತ ಶಿಶುಗಳನ್ನು ಅಕ್ರಮವಾಗಿ ಪಡೆಯುತ್ತಿದ್ದರು. ಈ ಶಿಶುಗಳನ್ನು ತಂಡದ ಮೂಲಕ ಶ್ರೀಮಂತ ಕುಟುಂಬಗಳಿಗೆ ದೊಡ್ಡ ಮೊತ್ತಕ್ಕೆ ಮಾರಾಟ ಮಾಡುತ್ತಿದ್ದರು’ ಎಂದು ಡಿಸಿಪಿ ಹೇಳಿದ್ದಾರೆ.
ಪ್ರಸ್ತುತ ಪ್ರಕರಣದಲ್ಲಿ ಶಿಶುಗಳನ್ನು ಅವರ ಹೆತ್ತವರಿಗೆ ಮಧ್ಯವರ್ತಿಗಳ ಮೂಲಕ ಹಣ ಪಾವತಿಸಿ ಗುಜರಾತ್‌ನ ಅಹಮದಾಬಾದ್ ಮತ್ತು ತೆಲಂಗಾಣದ ಸಿದ್ದಿಪೇಟದ ರಮಣಪೇಟದಿಂದ ಕಳ್ಳಸಾಗಣೆ ಮಾಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.