ADVERTISEMENT

ನವಲಖಾ ಕನ್ನಡಕ ಕಳವು ಆರೋಪ: ಜೈಲು ಅಧಿಕಾರಿಗಳಿಗೆ ಮಾನವೀಯತೆ ಇರಬೇಕು ಎಂದ ಕೋರ್ಟ್‌

ಪಿಟಿಐ
Published 8 ಡಿಸೆಂಬರ್ 2020, 10:26 IST
Last Updated 8 ಡಿಸೆಂಬರ್ 2020, 10:26 IST
ಗೌತಮ್‌ ನವಲಖಾ
ಗೌತಮ್‌ ನವಲಖಾ   

ಮುಂಬೈ: ಮುಂಬೈನ ತಲೋಜಾ ಜೈಲಿನಲ್ಲಿರುವ ಸಾಮಾಜಿಕ ಹೋರಾಟಗಾರ ಗೌತಮ್‌ ನವಲಖಾ ಅವರ ಕನ್ನಡಕವನ್ನು ಕಳುವು ಮಾಡಲಾಗಿದೆ ಎಂಬ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಬಾಂಬೆ ಹೈಕೋರ್ಟ್‌, ಮಾನವೀಯತೆಯನ್ನು ಮರೆಯಬಾರದು ಎಂದಿದೆ.

ಇಂಥ ವಿಷಯಗಳ ಬಗ್ಗೆ ಜೈಲು ಅಧಿಕಾರಿಗಳನ್ನು ಸಂವೇದನಾಶೀಲರನ್ನಾಗಿ ಮಾಡಲು ಶಿಬಿರಗಳನ್ನು ಆಯೋಜಿಸಬೇಕು ಎಂದು ಮಂಗಳವಾರ ಅಭಿಪ್ರಾಯಪಟ್ಟಿದೆ.

ನವಲಖಾ ಅವರು ಎಲ್ಗಾರ್‌ ಪರಿಷದ್‌–ಮಾವೊ ನಡುವೆ ಸಂಪರ್ಕ ಇದೆ ಎಂಬ ಆರೋಪಕ್ಕೆ ಸಂಬಂಧಿಸಿದ ಪ್ರಕರಣದ ಆರೋಪಿಯಾಗಿದ್ದಾರೆ. ಅವರ ಕನ್ನಡಕವನ್ನು ನ. 27ರಂದು ಕಳವು ಮಾಡಲಾಗಿದೆ ಎಂದು ನವಲಖಾ ಕುಟುಂಬದ ಸದಸ್ಯರು ಸೋಮವಾರ ಹೇಳಿದ್ದಾರೆ.

ADVERTISEMENT

ಈ ಕುರಿತ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಸ್‌.ಎಸ್‌.ಶಿಂಧೆ ಹಾಗೂ ಎಂ.ಎಸ್‌.ಕಾರ್ಣಿಕ್‌ ಅವರಿರುವ ವಿಭಾಗೀಯ ನ್ಯಾಯಪೀಠ, ‘ಜೈಲಿನಲ್ಲಿ ಈ ಕನ್ನಡಕವನ್ನು ಹೇಗೆ ಕಳವು ಮಾಡಲಾಗಿದೆ ಎಂದು ತಿಳಿದು ಬಂದಿದೆ. ಹೊಸ ಕನ್ನಡಕವನ್ನು ನವಲಖಾ ಕುಟುಂಬದವರು ಕೊರಿಯರ್‌ ಮೂಲಕ ಕಳಿಸಿದ್ದರೂ ಅದನ್ನು ಜೈಲು ಅಧಿಕಾರಿಗಳು ಸ್ವೀಕರಿಸುತ್ತಿಲ್ಲ ಎಂಬ ಮಾಹಿತಿಯೂ ಇದೆ’ ಎಂದಿತು.

‘ಮಾನವೀಯತೆ ಮುಖ್ಯ. ಇಂಥ ಮೌಲ್ಯಗಳನ್ನೂ ಯಾರೂ ನಿರ್ಲಕ್ಷಿಸಬಾರದು’ ಎಂದೂ ನ್ಯಾಯಪೀಠ ಹೇಳಿತು.

ಈ ಕುರಿತಂತೆ ಪ್ರತಿಕ್ರಿಯೆ ಸಲ್ಲಿಸಲು ಸಮಯ ನೀಡುವಂತೆ ಎನ್‌ಐಎ ಪರ ವಕೀಲ ಸಂದೇಶ ಪಾಟೀಲ ಕೋರಿದರು. ಇದಕ್ಕೆ ಒಪ್ಪಿದ ನ್ಯಾಯಪೀಠ, ವಿಚಾರಣೆಯನ್ನು ಡಿ. 21ಕ್ಕೆ ಮುಂದೂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.