ರಾಯಿಟರ್ಸ್ ಚಿತ್ರ
ಮುಂಬೈ: ‘‘ನಾನು ನಿನ್ನನ್ನು ಪ್ರೀತಿಸುತ್ತೇನೆ’ (I love you) ಎನ್ನುವುದು ಭಾವನೆಗಳ ಅಭಿವ್ಯಕ್ತಿಯೇ ಹೊರತು ಅದರಲ್ಲಿ ಲೈಂಗಿಕ ಉದ್ದೇಶ ಇರುವುದಿಲ್ಲ’ ಎಂದು ಬಾಂಬೆ ಹೈಕೋರ್ಟ್‌ನ ನಾಗ್ಪುರ ಪೀಠವು ಅಭಿಪ್ರಾಯಪಟ್ಟಿದೆ.
2015ರಲ್ಲಿ ವ್ಯಕ್ತಿಯೊಬ್ಬ 17 ವರ್ಷದ ಬಾಲಕಿಯೊಬ್ಬಳ ಕೈಹಿಡಿದು ‘ಐ ಲವ್ ಯು’ ಎಂದು ಹೇಳಿದ್ದಕ್ಕೆ ಸಂಬಂಧಿಸಿದಂತೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ಸೆಷನ್ಸ್ ನ್ಯಾಯಾಲಯವು, ತಪ್ಪಿತಸ್ಥ ಎಂದು ಪರಿಗಣಿಸಿ ಪೋಕ್ಸೊ ಕಾಯ್ದೆಯಡಿ 2017ರಲ್ಲಿ ಮೂರು ವರ್ಷಗಳ ಜೈಲು ಶಿಕ್ಷೆ ಪ್ರಕಟಿಸಿತ್ತು.
ಕೆಳಹಂತದ ನ್ಯಾಯಾಲಯದ ಆದೇಶವನ್ನು ವ್ಯಕ್ತಿಯು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಸೆಶನ್ಸ್ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿದ ಹೈಕೋರ್ಟ್, ವ್ಯಕ್ತಿಯ ವಿರುದ್ಧ ಕೇಳಿಬಂದಿರುವ ಆರೋಪದಲ್ಲಿ ಯಾವುದೇ ಲೈಂಗಿಕ ಉದ್ದೇಶ ಕಂಡುಬರುವುದಿಲ್ಲ. ‘ನಾನು ನಿನ್ನನ್ನು ಪ್ರೀತಿಸುತ್ತೇನೆ’ ಎಂದು ಪದಗಳಲ್ಲಿ ಹೇಳಿದರೆ ಅದರಲ್ಲಿ ಯಾವುದೇ ಲೈಂಗಿಕ ಉದ್ದೇಶ ಇರದು ಎಂದು ಪೀಠ ಅಭಿಪ್ರಾಯಪಟ್ಟಿತು.
‘ಅನುಚಿತ ಸ್ಪರ್ಶ, ಬಲವಂತದ ವಸ್ತ್ರಾಪಹರಣ, ಅಸಭ್ಯ ಸನ್ನೆಗಳು ಲೈಂಗಿಕ ಉದ್ದೇಶವಾಗಿದ್ದು, ಇವುಗಳು ಮಹಿಳೆಯ ಘನತೆಗೆ ಅವಮಾನ ಮಾಡಿದಂತೆ. ಐ ಲವ್ ಯು ಎಂದರೆ ಅದು ಲೈಂಗಿಕ ಉದ್ದೇಶದ ಸನ್ನೆ ಎಂದು ಹೇಳಲು ಬೇರೆಯದೇ ವ್ಯಾಖ್ಯಾನದ ಅಗತ್ಯವಿದೆ’ ಎಂದು ನ್ಯಾ. ಊರ್ಮಿಳಾ ಜೋಶಿ ಫಾಲ್ಕೆ ಅವರಿದ್ದ ಪೀಠ ತನ್ನ ಆದೇಶದಲ್ಲಿ ಹೇಳಿದೆ.
ಏನಿದು ಪ್ರಕರಣ..?: ಬಾಲಕಿಯು ಕಾಲೇಜಿನಿಂದ ಮನೆಗೆ ಮರಳುವಾಗ ಆರೋಪಿ ಕೈಹಿಡಿದು ಹೆಸರು ಕೇಳಿದ್ದಾನೆ. ನಂತರ ‘ಐ ಲವ್ ಯು’ ಎಂದಿದ್ದಾನೆ. ಆತನಿಂದ ತಪ್ಪಿಸಿಕೊಂಡು ಮನೆಗೆ ಹೋದ ಬಾಲಕಿ, ತನ್ನ ತಂದೆಗೆ ಮಾಹಿತಿ ನೀಡಿದ್ದಾಳೆ. ನಂತರ ದೂರು ನೀಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.