ADVERTISEMENT

ನಾನು ಪಕ್ಷ ಹಾಕಿದ ಗೆರೆಯನ್ನು ದಾಟಿಲ್ಲ, ಶಿಸ್ತು ಉಲ್ಲಂಘಿಸಿಲ್ಲ: ತರೂರ್

ಪಿಟಿಐ
Published 5 ಜನವರಿ 2026, 20:34 IST
Last Updated 5 ಜನವರಿ 2026, 20:34 IST
ಶಶಿ ತರೂರ್
ಶಶಿ ತರೂರ್   

ವಯನಾಡ್: ‘ನಾನು ಪಕ್ಷ ಹಾಕಿದ ಗೆರೆಯನ್ನು ದಾಟಿಲ್ಲ. ಅಭಿಪ್ರಾಯ ಹೇಳುವಾಗ ಪಕ್ಷದ ಶಿಸ್ತನ್ನು ಉಲ್ಲಂಘಿಸಿಲ್ಲ’ ಎಂದು ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಸೋಮವಾರ ಹೇಳಿದ್ದಾರೆ.

ಮುಂಬರುವ ವಿಧಾನಸಭೆ ಚುನಾವಣೆಗೆ ಕಾರ್ಯತಂತ್ರ ರೂಪಿಸುವುದಕ್ಕೆ ಸಂಬಂಧಿಸಿ ಚರ್ಚಿಸಲು ಸುಲ್ತಾನ್‌ ಬತೇರಿಯಲ್ಲಿ ಆಯೋಜಿಸಿದ್ದ ಪಕ್ಷದ ಸಭೆ ‘ಲಕ್ಷ್ಯ 2026’ರಲ್ಲಿ ಪಾಲ್ಗೊಂಡ ಬಳಿಕ ಅವರು, ಸುದ್ದಿಗಾರರೊಂದಿಗೆ ಮಾತನಾಡಿದರು.

ತರೂರ್‌ ಅವರು ಇತ್ತೀಚೆಗೆ ಪ್ರಕಟಿಸಿರುವ ಲೇಖನಗಳು, ನೀಡಿದ್ದ ಹೇಳಿಕೆಗಳು ಪಕ್ಷ ಎಚ್ಚರಿಕೆಯ ಹೆಜ್ಜೆ ಇಡುವಂತಹ ಪರಿಸ್ಥಿತಿ ನಿರ್ಮಿಸಿದ್ದವು. ಈ ಹಿನ್ನೆಲೆಯಲ್ಲಿ ತರೂರ್‌ ಅವರು ನೀಡಿರುವ ಈ ಹೇಳಿಕೆಗೆ ಮಹತ್ವ ಬಂದಿದೆ.

ADVERTISEMENT

‘ನಾನು ಪಕ್ಷ ಹಾಕಿದ ಗೆರೆಯನ್ನು ದಾಟಿರುವೆ ಎಂದು ಹೇಳಿದ್ದು ಯಾರು?. ಹಲವಾರು ವಿಚಾರಗಳ ಕುರಿತು ನಾನು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದೇನೆ. ಆದರೆ, ಬಹುತೇಕ ಸಂದರ್ಭಗಳಲ್ಲಿ ನನ್ನ ಮತ್ತು ಪಕ್ಷದ ನಿಲುವು ಒಂದೇ ಆಗಿತ್ತು’ ಎಂದು ಅವರು ಹೇಳಿದ್ದಾರೆ.

‘ಸಂಸತ್‌ನಲ್ಲಿ ಸಚಿವರಿಗೆ ನಾನು ಕೇಳಿರುವ ಪ್ರಶ್ನೆಗಳಲ್ಲಿ ಸ್ಪಷ್ಟತೆ ಇತ್ತು ಹಾಗೂ ಅವುಗಳಿಂದ ಪಕ್ಷವು ಆತಂಕಕ್ಕೆ ಒಳಗಾಗುವ ಅಗತ್ಯ ಇಲ್ಲ’ ಎಂದೂ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.