ಬಾಲೇಶ್ವರ: ಮುಂದೊಂದು ದಿನ ಭಾರತೀಯ ಸೇನೆ ಸೇರಿ, ಪಾಕಿಸ್ತಾನದಲ್ಲಿ ಅಡಗಿರುವ ಉಗ್ರಗಾಮಿಗಳನ್ನು ನಾಶ ಮಾಡುವ ಮೂಲಕ ನನ್ನ ತಂದೆಯ ಸಾವಿಗೆ ಸೇಡು ತೀರಿಸಿಕೊಳ್ಳುತ್ತೇನೆ ಎಂದು ಪಹಲ್ಗಾಮ್ ಉಗ್ರ ದಾಳಿಯಲ್ಲಿ ತಂದೆಯನ್ನು ಕಳೆದುಕೊಂಡಿರುವ ಒಂಬತ್ತು ವರ್ಷದ ಬಾಲಕ ತನುಜ್ ಕುಮಾರ್ ಸತ್ಪತಿ ಶಪಥ ಮಾಡಿದ್ದಾರೆ.
ಪಹಲ್ಗಾಮ್‌ನಲ್ಲಿ ಏ.22ರಂದು ನಡೆದ ಉಗ್ರರ ದಾಳಿಯಲ್ಲಿ 26 ಜನರು ಮೃತಪಟ್ಟಿದ್ದರು. ಅದರಲ್ಲಿ ಒಡಿಶಾ ರಾಜ್ಯದ ಬಾಲೇಶ್ವರ ಮೂಲದ ತನುಜ್ ಅವರ ತಂದೆ ಪ್ರಶಾಂತ್ ಸತ್ಪತಿ ಮೃತಪಟ್ಟಿದ್ದರು
ತಂದೆಯ ಸಾವಿನ ನಂತರ ಅವರ ಮೌಲ್ಯ ಏನು ಎಂಬುದು ನನಗೆ ತಿಳಿದಿದೆ. ನನ್ನ ರೀತಿ ಯಾವ ಮಗು ಕೂಡ ತಂದೆಯಿಲ್ಲದೇ ಇರದ ಹಾಗೇ ನೋಡಿಕೊಳ್ಳಿ, ಭಾರತೀಯ ನೆಲದೊಳಗೆ ಉಗ್ರರು ಕಾಲಿಡಲು ಬಿಡದಂತೆ ಮಾಡಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದರೆ ಕೇಳಿಕೊಳ್ಳಬೇಕೆಂದಿದ್ದೇನೆ ಎಂದಿದ್ದಾರೆ.
ಪಹಲ್ಗಾಮ್ ಘಟನೆಯ ನಂತರ ಸೇನೆಯು ನಮ್ಮ ಕುಟುಂಬದ ಜೊತೆಗಿದೆ. ಬುಧವಾರ ಬೆಳಗ್ಗೆಯಿಂದ ಸುದ್ದಿಗಳನ್ನು ನೋಡುತ್ತಿದ್ದು, ಭಾರತೀಯ ಸೇನೆಯು ನಡೆಸಿದ ‘ಆಪರೇಷನ್ ಸಿಂಧೂರ’, ತಾಯಿ ಹಾಗೂ ನನಗೆ ತೃಪ್ತಿಕೊಟ್ಟಿದೆ. ಸೇನೆಯ ಬಗ್ಗೆ ಹೆಮ್ಮೆಯಾಗುತ್ತಿದೆ ಎಂದು ಹೇಳಿದ್ದಾರೆ.
ಭಾರತೀಯ ಸೇನೆಯು ‘ಆಪರೇಷನ್ ಸಿಂಧೂರ’ ಮೂಲಕ ಪ್ರತೀಕಾರ ತೀರಿಸಿಕೊಂಡಿದ್ದು, ನಾನೂ ಕೂಡ ಕಷ್ಟಪಟ್ಟು ಓದಿ, ಭಾರತೀಯ ಸೇನೆಯನ್ನು ಸೇರುತ್ತೇನೆ. ಪಾಕಿಸ್ತಾನ ಹಾಗೂ ಅದರ ಆಶ್ರಯದಲ್ಲಿರುವ ಉಗ್ರರನ್ನು ನಾಶ ಮಾಡುತ್ತೇನೆ ಎಂದಿದ್ದಾರೆ.
ನನ್ನ ಮಗನ ಆಸೆಯನ್ನು ನೆರವೇರಿಸಲು ಏನು ಬೇಕಾದರೂ ಮಾಡುತ್ತೇನೆ. ಅವನು ಸೇನೆ ಸೇರಲು ಬಯಸಿದರೆ, ಅದಕ್ಕೆ ಬೇಕಾದ ವ್ಯವಸ್ಥೆಯನ್ನು ನಾನು ಮಾಡುತ್ತೇನೆ. ಅವನಿಗೆ ಭಾರತೀಯರ ಆಶೀರ್ವಾದವಿರಲಿ ಎಂದು ತನುಜ್ ತಾಯಿ, ಪ್ರಿಯದರ್ಶಿನಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.