ADVERTISEMENT

ಹೆಲಿಕಾಪ್ಟರ್‌ ದುರಂತ: ಸೇನಾ ಗೌರವದೊಂದಿಗೆ ವರುಣ್‌ ಸಿಂಗ್ ಅಂತ್ಯಕ್ರಿಯೆ

ಪಿಟಿಐ
Published 17 ಡಿಸೆಂಬರ್ 2021, 11:33 IST
Last Updated 17 ಡಿಸೆಂಬರ್ 2021, 11:33 IST
ಹೆಲಿಕಾಪ್ಟರ್ ದುರಂತದಲ್ಲಿ ಗಾಯಗೊಂಡು ಮೃತಪಟ್ಟ ಗ್ರೂಪ್‌ ಕ್ಯಾಪ್ಟನ್ ವರುಣ್‌ ಸಿಂಗ್‌ ಅವರ ಅಂತ್ಯಕ್ರಿಯೆಗೂ ಮುನ್ನ ಪಾರ್ಥಿವ ಶರೀರಕ್ಕೆ ಅವರ ತಂದೆ, ಕರ್ನಲ್‌ ಕೆ.ಪಿ.ಸಿಂಗ್ (ನಿವೃತ್ತ) ಕೆ.ಪಿ.ಸಿಂಗ್ ಅವರು ಗೌರವ ಸಲ್ಲಿಸಿದರು
ಹೆಲಿಕಾಪ್ಟರ್ ದುರಂತದಲ್ಲಿ ಗಾಯಗೊಂಡು ಮೃತಪಟ್ಟ ಗ್ರೂಪ್‌ ಕ್ಯಾಪ್ಟನ್ ವರುಣ್‌ ಸಿಂಗ್‌ ಅವರ ಅಂತ್ಯಕ್ರಿಯೆಗೂ ಮುನ್ನ ಪಾರ್ಥಿವ ಶರೀರಕ್ಕೆ ಅವರ ತಂದೆ, ಕರ್ನಲ್‌ ಕೆ.ಪಿ.ಸಿಂಗ್ (ನಿವೃತ್ತ) ಕೆ.ಪಿ.ಸಿಂಗ್ ಅವರು ಗೌರವ ಸಲ್ಲಿಸಿದರು   

ಭೋಪಾಲ್‌: ಸೇನಾ ಹೆಲಿಕಾಪ್ಟರ್‌ ಅವಘಡದಲ್ಲಿ ತೀವ್ರವಾಗಿ ಗಾಯಗೊಂಡು, ಬುಧವಾರ ಮೃತ
ಪಟ್ಟಿದ್ದ ಗ್ರೂಪ್‌ ಕ್ಯಾಪ್ಟನ್‌ ವರುಣ್‌ ಸಿಂಗ್‌ ಅಂತ್ಯಕ್ರಿಯೆ ಸೇನಾ ಗೌರವಗಳೊಂದಿಗೆ ಶುಕ್ರವಾರ ಇಲ್ಲಿ ನಡೆಯಿತು.

ತ್ರಿವರ್ಣಧ್ವಜ ಹೊದಿಸಿದ್ದ ಪಾರ್ಥಿವ ಶರೀರವನ್ನು, ಪುಷ್ಪಾಲಂಕೃತ ಸೇನಾ ವಾಹನದಲ್ಲಿ ಮಿಲಿಟರಿ ಆಸ್ಪತ್ರೆಯಿಂದ ಇಲ್ಲಿನ ಬೈರಾಗರ್‌ನಲ್ಲಿರುವ ಸ್ಮಶಾನಕ್ಕೆ ತರಲಾಯಿತು. ಸೇನಾ ಸಿಬ್ಬಂದಿ ಗೌರವವಂದನೆ ಸಲ್ಲಿಸಿದರು.

ಕುಟುಂಬ ಸದಸ್ಯರು, ಬಂಧುಗಳಲ್ಲದೇ ಹೆಚ್ಚಿನ ಸಂಖ್ಯೆಯಲ್ಲಿ ನಾಗರಿಕರು ಸೇರಿದ್ದರು. ‘ಭಾರತ್‌ ಮಾತಾ ಕೀ ಜೈ’, ‘ವರುಣ್‌ ಸಿಂಗ್ ಅಮರ್‌ ರಹೇ‘ ಘೋಷಣೆಗಳು ಈ ಸಂದರ್ಭದಲ್ಲಿ ಕೇಳಿಬಂದವು.ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್‌ ಸಿಂಗ್ ಚೌಹಾಣ್, ಸೇನೆಯ ಹಿರಿಯ ಅಧಿಕಾರಿಗಳು ಸೇರಿದಂತೆ ವಿವಿಧ ಪ್ರಮುಖರು ಗೌರವ ಸಲ್ಲಿಸಿದರು

ADVERTISEMENT

ವರುಣ್‌ ಅವರ ತಂದೆ ಕರ್ನಲ್ ಕೆ.ಪಿ.ಸಿಂಗ್ (ನಿವೃತ್ತ), ತಾಯಿ ಉಮಾ, ಪತ್ನಿ, 11 ವರ್ಷದ ಮಗ, 8 ವರ್ಷದ ಮಗಳು ಹಾಜರಿದ್ದರು. ವರುಣ್‌ ಅವರ ತಮ್ಮ ತನುಜ್‌ ಸಿಂಗ್ ಕೂಡಾ ಸೇನೆಯಲ್ಲಿದ್ದು ನೌಕಾಪಡೆಯಲ್ಲಿ ಲೆಫ್ಟಿನಂಟ್‌ ಕಮಾಂಡರ್ ಆಗಿದ್ದಾರೆ.

ಡಿ. 8ರಂದು ನಡೆದಿದ್ದ ಹೆಲಿಕಾಪ್ಟರ್ ಅವಘಡದಲ್ಲಿ ತೀವ್ರ ಗಾಯಗಳಾಗಿದ್ದವು. ಮೊದಲು ತಮಿಳುನಾಡು ಮತ್ತು ನಂತರ ಬೆಂಗಳೂರಿನ ಮಿಲಿಟರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಅವರು ಮೃತಪಟ್ಟಿದ್ದರು.

ಮೃತರ ಕುಟುಂಬಕ್ಕೆ ಮಧ್ಯಪ್ರದೇಶ ಸರ್ಕಾರವು ₹1 ಕೋಟಿ ಸಮ್ಮಾನ್‌ ನಿಧಿ ಘೋಷಿಸಿದೆ. ಅಲ್ಲದೆ, ಕುಟುಂಬದ ಸಮ್ಮತಿಯನ್ನು ಆಧರಿಸಿ ಅವರ ಪ್ರತಿಮೆಯನ್ನು ಸ್ಥಾಪಿಸುವ ಹಾಗೂ ಸಂಸ್ಥೆಯೊಂದಕ್ಕೆ ಅವರ ಹೆಸರಿಡುವ ಮತ್ತು ಕುಟುಂಬ ಸದಸ್ಯರೊಬ್ಬರಿಗೆ ಸರ್ಕಾರಿ ನೌಕರಿಯನ್ನು ನೀಡುವ ಭರವಸೆಯನ್ನು ಸರ್ಕಾರ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.