ADVERTISEMENT

ಕೋವಿಡ್ ಸಂಬಂಧಿ ಕಾರ್ಯಕ್ಕೆ ವಾಯುಪಡೆ 24 ಗಂಟೆ ಸಿದ್ಧ

ಪ್ರಧಾನಿ ಮೋದಿಗೆ ಮಾಹಿತಿ ನೀಡಿದ ಏರ್ ಚೀಫ್‌ ಮಾರ್ಷಲ್ ಆರ್.‌ಕೆ.ಎಸ್‌‌ ಭದೌರಿಯಾ

ಪಿಟಿಐ
Published 28 ಏಪ್ರಿಲ್ 2021, 14:34 IST
Last Updated 28 ಏಪ್ರಿಲ್ 2021, 14:34 IST
ಏರ್ ಚೀಫ್‌ ಮಾರ್ಷಲ್ ಆರ್.‌ಕೆ.ಎಸ್‌‌ ಭದೌರಿಯಾ
ಏರ್ ಚೀಫ್‌ ಮಾರ್ಷಲ್ ಆರ್.‌ಕೆ.ಎಸ್‌‌ ಭದೌರಿಯಾ   

ನವದೆಹಲಿ: ‘ದೇಶದಾದ್ಯಂತ ಮತ್ತು ವಿದೇಶಗಳಲ್ಲಿ ಕೋವಿಡ್‌–19ಗೆ ಸಂಬಂಧಿಸಿದ ಕಾರ್ಯಗಳನ್ನು ತ್ವರಿತವಾಗಿ ಕೈಗೊಳ್ಳಲು ಭಾರತೀಯ ವಾಯುಪಡೆಯು (ಐಎಎಫ್‌) ವಾರದ ಏಳು ದಿನವೂ 24 ಗಂಟೆಗಳ ಕಾಲ ಸನ್ನದ್ಧವಾಗಿದೆ’ ಎಂದು ಏರ್ ಮಾರ್ಷಲ್ ಚೀಫ್ ಆರ್.ಕೆ.ಎಸ್. ಭದೌರಿಯಾ ಅವರು ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಿಳಿಸಿದ್ದಾರೆ.

ಕೋವಿಡ್‌ಗೆ ಸಂಬಂಧಿಸಿದ ಕಾರ್ಯಾಚರಣೆಗಳಲ್ಲಿ ವಿವಿಧ ಸಚಿವಾಲಯಗಳೊಂದಿಗೆ ಸಮನ್ವಯ ಖಚಿತಪಡಿಸಿಕೊಳ್ಳಲು ಭಾರತೀಯ ವಾಯುಪಡೆಯು ಸ್ಥಾಪಿಸಿರುವ ‘ಕೋವಿಡ್ ಏರ್‌ ಸರ್ಪೋಟ್ ಸೆಲ್’ ಬಗ್ಗೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪ್ರಧಾನಿ ಅವರಿಗೆ ವಿವರಿಸಿದ ಭದೌರಿಯಾ ಅವರು, ಕೋವಿಡ್‌ ಕಾರ್ಯಾಚರಣೆಗಾಗಿ ದೊಡ್ಡ ಮತ್ತು ಮಧ್ಯಮ ಗಾತ್ರದ ವಿಮಾನಗಳನ್ನು ನಿಯೋಜಿಸುವುದಾಗಿಯೂ ಮಾಹಿತಿ ನೀಡಿದರು.

‘ಭಾರತೀಯ ವಾಯುಪಡೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಆಸ್ಪತ್ರೆಗಳು ಕೋವಿಡ್‌–19 ಸೌಲಭ್ಯಗಳನ್ನು ಹೆಚ್ಚಿಸಿವೆ. ಅಗತ್ಯವಿದ್ದ ಕಡೆ ನಾಗರಿಕರಿಗೆ ಚಿಕಿತ್ಸೆ ಪಡೆಯಲು ಅವಕಾಶ ನೀಡುತ್ತಿವೆ’ ಎಂದೂ ಅವರು ತಿಳಿಸಿದ್ದಾರೆ.

ADVERTISEMENT

ಸಭೆಯಲ್ಲಿ ಮಾತನಾಡಿದ ಮೋದಿ, ಆಮ್ಲಜನಕ ಟ್ಯಾಂಕರ್‌ಗಳು ಮತ್ತು ಇತರ ಅಗತ್ಯ ವಸ್ತುಗಳನ್ನು ಸಾಗಿಸುವಲ್ಲಿ ಕಾರ್ಯಾಚರಣೆಗಳ ವೇಗ, ಪ್ರಮಾಣ ಮತ್ತು ಸುರಕ್ಷತೆಯನ್ನು ಹೆಚ್ಚಿಸುವ ಅಗತ್ಯವನ್ನು ಒತ್ತಿ ಹೇಳಿದರು.

ಕೋವಿಡ್ ಕಾರ್ಯಾಚರಣೆಗಳಲ್ಲಿ ತೊಡಗಿರುವ ಭಾರತೀಯ ವಾಯುಪಡೆಯ ಸಿಬ್ಬಂದಿಯು ಸೋಂಕಿನಿಂದ ಸುರಕ್ಷಿತವಾಗಿರುವುದನ್ನು ಖಚಿತಪಡಿಸಿಕೊಳ್ಳುವ ಅಗತ್ಯತೆಯ ಕುರಿತಾಗಿ ಮೋದಿ ಹೇಳಿದರು. ವಾಯುಪಡೆಯ ಸಿಬ್ಬಂದಿ ಮತ್ತು ಅವರ ಕುಟುಂಬಗಳ ಆರೋಗ್ಯದ ಬಗ್ಗೆಯೂ ವಿಚಾರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.