ಹಿಂಡೊನ್ (ಉತ್ತರಪ್ರದೇಶ): ಕಳೆದ ವರ್ಷ ಪೂರ್ವ ಲಡಾಖ್ ಗಡಿಭಾಗದಲ್ಲಿ ನಡೆದ ಬೆಳವಣಿಗೆಗಳಿಗೆ ಪ್ರತಿಕ್ರಿಯೆಯಾಗಿ ಭಾರತೀಯ ವಾಯು ಪಡೆಯ ತ್ವರಿತ ಕ್ರಮಗಳನ್ನು ಕೈಗೊಂಡಿದ್ದು, ಇದು ಸೇನೆ ಯುದ್ಧಕ್ಕೆ ಸಿದ್ಧವಾಗಿರುವುದಕ್ಕೆ ಸಾಕ್ಷಿ ಎಂದು ವಾಯುಪಡೆ ಏರ್ ಚೀಫ್ ಮಾರ್ಷಲ್ ವಿ.ಆರ್.ಚೌಧರಿ ಶುಕ್ರವಾರ ಹೇಳಿದ್ದಾರೆ.
ದೆಹಲಿಯ ಹೊರವಲಯದ ಹಿಂಡೊನ್ ವಾಯುನೆಲೆಯಲ್ಲಿ ಶುಕ್ರವಾರ ನಡೆದ 89ನೇ ವಾಯುಪಡೆಯ ದಿನಾಚರಣೆಯಲ್ಲಿ ಯೋಧರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಬಾಹ್ಯ ಶಕ್ತಿಗಳು ನಮ್ಮ ಪ್ರದೇಶವನ್ನು ಅತಿಕ್ರಮಿಸಲು ಬಿಡುವುದಿಲ್ಲ‘ ಎಂಬುದನ್ನು ಭಾರತೀಯ ವಾಯುಪಡೆ, ರಾಷ್ಟ್ರಕ್ಕೆ ತೋರಿಸಲೇಬೇಕಾಗಿದೆ ಎಂದರು.
‘ನಮ್ಮ ಸವಾಲುಗಳು ಹೆಚ್ಚುತ್ತಿರುವಂತೆಯೇ, ಅದನ್ನು ಎದುರಿಸಲು ನಮ್ಮ ಬಲದ ಜೊತೆಗೆ, ವಾಯುಪಡೆಯ ಶಕ್ತಿಯನ್ನು ಸಮರ್ಥವಾಗಿ ಬಳಸಿಕೊಳ್ಳುವ ಸಂಕಲ್ಪವೂ ಹೆಚ್ಚುತ್ತಿದೆ. ಹಾಗೆಯೇ, ನಮ್ಮ ದೇಶದ ಭದ್ರತಾ ವ್ಯವಸ್ಥೆಯನ್ನು ನೋಡಿದಾಗ, ನಾನು ನಿರ್ಣಾಯಕ ಸಮಯದಲ್ಲಿ ಜವಾಬ್ದಾರಿ ವಹಿಸಿಕೊಂಡಿದ್ದೇನೆ ಎಂಬುದನ್ನೂ ಅರಿತಿದ್ದೇನೆ‘ ಎಂದು ಅವರು ಹೇಳಿದರು.
‘ನಮ್ಮ ದೇಶದೊಳಗೆ ಬಾಹ್ಯಶಕ್ತಿಗಳು ಅತಿಕ್ರಮಿಸಲು ಬಿಡುವುದಿಲ್ಲ‘ ಎಂಬದನ್ನು ನಾವು ರಾಷ್ಟ್ರಕ್ಕೆ ತೋರಿಸಬೇಕಿದೆ. ಇದಕ್ಕೆ ಬೇಕಾದ ಸೂಕ್ತ ನಿರ್ದೇಶನ, ಉತ್ತಮ ನಾಯಕತ್ವ ಮತ್ತು ನನಗೆ ಸಾಧ್ಯವಾಗುವಷ್ಟು ಎಲ್ಲ ರೀತಿಯ ಅತ್ಯುತ್ತಮ ಸಂಪನ್ಮೂಲಗಳನ್ನು ಒದಗಿಸುವ ಪ್ರಯತ್ನ ಮಾಡುತ್ತೇನೆ‘ ಎಂದು ಭರವಸೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.