ADVERTISEMENT

ಗುಜರಾತ್‌: ಐಎಎಸ್‌ ಅಧಿಕಾರಿ ಇ.ಡಿ. ವಶಕ್ಕೆ

ಭೂ ಬಳಕೆ ಬದಲಾವಣೆ ಅರ್ಜಿ ಅನುಮೋದನೆಗೆ ಲಂಚದ ಆರೋಪ

ಪಿಟಿಐ
Published 4 ಜನವರಿ 2026, 16:01 IST
Last Updated 4 ಜನವರಿ 2026, 16:01 IST
ಇ.ಡಿ
ಇ.ಡಿ   

ಪಿಟಿಐ

ಅಹಮದಾಬಾದ್‌: ‘ಸುರೇಂದ್ರ ನಗರದ ಮಾಜಿ ಜಿಲ್ಲಾಧಿಕಾರಿಯೂ ಆಗಿರುವ ಐಎಎಸ್‌ ಅಧಿಕಾರಿ ರಾಜೇಂದ್ರ ಕುಮಾರ್‌ ಪಟೇಲ್‌ ಅವರು ಭೂ ಬಳಕೆ ಬದಲಾವಣೆ ಅರ್ಜಿಯನ್ನು ಅನುಮೋದಿಸಲು ಒಂದು ಚದರ ಮೀಟರ್‌ಗೆ ₹5ರಿಂದ ₹10 ಲಂಚ ಪಡೆಯುತ್ತಿದ್ದರು’ ಎಂದು ಜಾರಿ ನಿರ್ದೇಶನಾಲಯ (ಇ.ಡಿ) ಹೇಳಿದೆ.

ಪಟೇಲ್‌ ಅವರನ್ನು ವಶಕ್ಕೆ ನೀಡುವಂತೆ ಜ.2ರಂದು ಇ.ಡಿ ಅಧಿಕಾರಿಗಳು ಪಿಎಂಎಲ್‌ಎ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಜ.7ರವರೆಗೆ ನ್ಯಾಯಾಲಯವು ರಾಜೇಂದ್ರ ಕುಮಾರ್‌ ಅವರನ್ನು ಇ.ಡಿ. ವಶಕ್ಕೆ ನೀಡಿತು. ಅರ್ಜಿಯಲ್ಲಿ ಈ ಎಲ್ಲ ಮಾಹಿತಿಯನ್ನು ವಿವರಿಸಲಾಗಿದೆ. ಪಟೇಲ್‌ ವಿರುದ್ಧದ ಹಣ ಅಕ್ರಮ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದ ಪ್ರಕರಣದ ತನಿಖೆಯನ್ನು ಇ.ಡಿ ನಡೆಸುತ್ತಿದೆ.

ADVERTISEMENT

‘ಅರ್ಜಿಗಳು ತ್ವರಿತವಾಗಿ ಅನುಮೋದನೆಗೊಳ್ಳಬೇಕು ಎಂದಾದರೆ ‘ತ್ವರಿತವಾಗಿ ಹಣ’ ಸಂದಾಯವಾಗಬೇಕಿತ್ತು. ಜಿಲ್ಲಾಧಿಕಾರಿ ಕಚೇರಿಯೇ ಈ ಭ್ರಷ್ಟಾಚಾರ ಜಾಲವನ್ನು ನಿರ್ವಹಿಸುತ್ತಿತ್ತು. ಭೂ ಬಳಕೆ ಬದಲಾವಣೆಯ ಸುಮಾರು 800ಕ್ಕೂ ಅಧಿಕ ಅರ್ಜಿಗಳನ್ನು ಇಲ್ಲಿಯವರೆಗೆ ತನಿಖೆ ಒಳಪಡಿಸಲಾಗಿದೆ. ಇವುಗಳಿಂದ ಸುಮಾರು ₹10 ಕೋಟಿ ಲಂಚವನ್ನು ಪಡೆದುಕೊಳ್ಳಲಾಗಿದೆ. ಪ್ರಕರಣ ಬಹಿರಂಗವಾದ ಬಳಿಕ, ಪಟೇಲ್‌ ಅವರನ್ನು ಕಳೆದ ವಾರ ಜಾಗ ಸೂಚಿಸದೇ ವರ್ಗಾವಣೆ ಮಾಡಲಾಗಿದೆ’ ಎಂದು ಇ.ಡಿ ತಿಳಿಸಿದೆ.

‘ಪಟೇಲ್‌ ಅವರ ಆಪ್ತ ಸಹಾಯಕನ ಮೂಲಕವೇ ಎಲ್ಲ ಕೆಲಸಗಳು ನಡೆಯುತ್ತಿದ್ದವು. ಅರ್ಜಿಯೊಂದರಿಂದ ಪಡೆದ ಲಂಚದ ಶೇ 50ರಷ್ಟು ಹಣವು ಪಟೇಲ್‌ ಅವರಿಗೇ ಸಂದಾಯವಾಗುತ್ತಿತ್ತು. ಮತ್ತು ಇವರೇ ಈ ಜಾಲದ ಸೂತ್ರಧಾರರು. ಶೇ 10ರಷ್ಟು ಹಣವು ಮಧ್ಯವರ್ತಿಗೆ ಸಂದಾಯವಾಗುತ್ತಿದೆ. ಉಳಿದ ಹಣವನ್ನು ಜಿಲ್ಲಾಧಿಕಾರಿ ಕಚೇರಿಯ ಅಧಿಕಾರಿಗಳು ಹಂಚಿಕೊಳ್ಳುತ್ತಿದ್ದರು’ ಎಂದು ಇ.ಡಿ ಹೇಳಿದೆ.

ರಾಜೇಂದ್ರ ಅವರ ಪಿಎ ಜಯರಾಜ್‌ ಸಿನ್ಹಾ ಅವರ ಹೇಳಿಕೆಯನ್ನು ದಾಖಲಿಸಿಕೊಂಡಿರುವ ಇ.ಡಿ ಅಧಿಕಾರಿಗಳು, ಅವರ ಮೊಬೈಲ್‌ನಿಂದ ಹಲವು ಡಿಜಿಟಲ್‌ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.