ADVERTISEMENT

‘ಜನರ ಸಮಸ್ಯೆ ಪರಿಹರಿಸಲು ಮೊದಲ ನೂರು ದಿನ ಮೀಸಲು’

ಪಿಟಿಐ
Published 25 ಜನವರಿ 2021, 11:40 IST
Last Updated 25 ಜನವರಿ 2021, 11:40 IST
ಎಂ.ಕೆ.ಸ್ಟಾಲಿನ್‌
ಎಂ.ಕೆ.ಸ್ಟಾಲಿನ್‌   

ಚೆನ್ನೈ: ‘ಮುಂಬರುವ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಜನರು ನಮ್ಮ ಪಕ್ಷವನ್ನು ಅಧಿಕಾರಕ್ಕೆ ತಂದರೆ, ಮೊದಲ ನೂರು ದಿನಗಳನ್ನು ಜನರ ಸಮಸ್ಯೆಗಳನ್ನು ತಕ್ಷಣದಲ್ಲೇ ಪರಿಹರಿಸುವುದಕ್ಕೆ ಮೀಸಲಿರಿಸುವುದಾಗಿ’ ಡಿಎಂಕೆ ಮುಖ್ಯಸ್ಥ ಎಂ.ಕೆ.ಸ್ಟಾಲಿನ್‌ ಸೋಮವಾರ ಭರವಸೆ ನೀಡಿದ್ದಾರೆ.

2011ರ ನಂತರ ಸತತ ಎರಡು ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಡಿಎಂಕೆ ವಿಫಲವಾಗಿದೆ. ಇದೀಗ ಏಪ್ರಿಲ್‌–ಮೇ ತಿಂಗಳಲ್ಲಿ ನಡೆಯಲಿರುವ ಚುನಾವಣೆ ಮುಖಾಂತರ ಅಧಿಕಾರಕ್ಕೆ ಮರಳಲು ಪ್ರಚಾರಕ್ಕೆ ಡಿಎಂಕೆ ಚುರುಕು ನೀಡಿದೆ. ‘ಜ.29ರಿಂದ ರಾಜ್ಯದಲ್ಲಿರುವ ಎಲ್ಲ 234 ವಿಧಾನಸಭಾ ಕ್ಷೇತ್ರಗಳಿಗೆ 30 ದಿನಗಳ ಪ್ರವಾಸ ಕೈಗೊಳ್ಳುವುದಾಗಿ’ ಇದೇ ವೇಳೆ ಸ್ಟಾಲಿನ್‌ ತಿಳಿಸಿದ್ದಾರೆ.

‘ಜನರ ಸಮಸ್ಯೆಗಳನ್ನು ಬಗೆಹರಿಸುವುದು ನನ್ನ ಆದ್ಯತೆ. ಅಧಿಕಾರಕ್ಕೆ ಬಂದರೆ ಸರ್ಕಾರದ ಮೊದಲ ನೂರು ದಿನಗಳನ್ನು ಇದಕ್ಕಾಗಿ ಮೀಸಲಿರಿಸಲಾಗುವುದು. ವಿಧಾನಸಭಾ ಕ್ಷೇತ್ರಗಳಿಗೆ ಭೇಟಿ ನೀಡುವ ಸಂದರ್ಭದಲ್ಲಿ ಜನರಿಂದ ಅರ್ಜಿಗಳನ್ನು ಸ್ವೀಕರಿಸುತ್ತೇನೆ. ಈ ಸಭೆಗಳಿಗೆ ಹಾಜರಾಗಲು ಸಾಧ್ಯವಾಗದೇ ಇದ್ದವರು ಆನ್‌ಲೈನ್‌ ಮೂಲಕವೂ ಅರ್ಜಿ ಸಲ್ಲಿಸಬಹುದು. ಅಧಿಕಾರಕ್ಕೆ ಬಂದರೆ, ಈ ಸಮಸ್ಯೆಗಳನ್ನು ಪರಿಹರಿಸುವುದಕ್ಕಾಗಿ ನನ್ನ ನೇತೃತ್ವದಲ್ಲೇ ಒಂದು ಪ್ರತ್ಯೇಕ ಇಲಾಖೆ ರಚಿಸುತ್ತೇನೆ. ಈ ಇಲಾಖೆ ಈ ಅರ್ಜಿಗಳನ್ನು ಪರಿಶೀಲಿಸಿ ಪರಿಹಾರ ಒದಗಿಸಲಿದೆ’ ಎಂದರು.

ADVERTISEMENT

‘ಚುನಾವಣೆ ದಿನಾಂಕ ಪ್ರಕಟವಾದ ಬಳಿಕ ಮೈತ್ರಿ ಕುರಿತ ವಿಷಯಗಳು ಚರ್ಚೆಯಾಗಲಿವೆ’ ಎಂದು ಇದೇ ವೇಳೆ ಸ್ಟಾಲಿನ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.