ಮುಂಬೈ: ಮಹಾರಾಷ್ಟ್ರಕ್ಕಾಗಿ ಉದ್ಧವ್ ಠಾಕ್ರೆ ಹಾಗೂ ರಾಜ್ ಠಾಕ್ರೆ ಒಂದಾಗುವುದಾದರೆ ಅದನ್ನು ನಾವೆಲ್ಲರೂ ಹೃದಯ ತುಂಬಿ ಸ್ವಾಗತಿಸುತ್ತೇವೆ ಎಂದು ಎನ್‌ಸಿಪಿ ಸಂಸದೆ ಸುಪ್ರಿಯಾ ಸುಳೆ ಹೇಳಿದ್ದಾರೆ.
‘ಮಹಾರಾಷ್ಟ್ರ ಎಲ್ಲಕ್ಕಿಂತ ಮಿಗಿಲು’ ಎಂದು ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಹಾಗೂ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಸಿ) ಮುಖ್ಯಸ್ಥ ರಾಜ್ ಠಾಕ್ರೆ ಅವರ ಪ್ರತ್ಯೇಕ ಹೇಳಿಕೆಗಳು ಮಹಾರಾಷ್ಟ್ರ ರಾಜಕಾರಣದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ.
ಮಹಾರಾಷ್ಟ್ರದ ಹಿತ ಕಾಯುವುದು ಇಂದಿನ ತುರ್ತು ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಉದ್ಧವ್ ಠಾಕ್ರೆ ಹಾಗೂ ರಾಜ್ ಠಾಕ್ರೆ ಒಂದಾಗುವುದಾದರೆ ಅದನ್ನು ನಾವೆಲ್ಲರೂ ಸ್ವಾಗತಿಸುತ್ತೇವೆ ಎಂದು ಸುಳೆ ಹೇಳಿದ್ದಾರೆ.
ಸುಪ್ರಿಯಾ ಸುಳೆ ಅವರು ಶರದ್ ಪವಾರ್ ಎನ್‌ಸಿಪಿಯ ಪ್ರಬಲ ನಾಯಕಿಯಾಗಿದ್ದಾರೆ.
‘ಮಹಾರಾಷ್ಟ್ರದ ಭಾಷೆ ಮತ್ತು ಸಂಸ್ಕೃತಿಯು ರಾಜಕೀಯ ವೈರತ್ವವನ್ನೂ ಮೀರಿದ್ದು’ ಎಂದು ಈ ಇಬ್ಬರು ನಾಯಕರು ಪ್ರತ್ಯೇಕ ಕಾರ್ಯಕ್ರಮಗಳಲ್ಲಿ ಹೇಳಿದ್ದಾರೆ. ಚಿತ್ರ ನಿರ್ಮಾಪಕ ಮಹೇಶ್ ಮಂಜ್ರೇಕರ್ ಅವರೊಂದಿಗೆ ಪಾಡ್‌ಕಾಸ್ಟ್ ಸಂದರ್ಶನದಲ್ಲಿ ಮಾತನಾಡಿರುವ ರಾಜ್ ಠಾಕ್ರೆ, ‘ನನ್ನ ಮತ್ತು ನನ್ನ ಸೋದರ ಸಂಬಂಧಿ ನಡುವಿನ ಭಿನ್ನಾಪ್ರಾಯವು ಮಹಾರಾಷ್ಟ್ರದ ಹಿತದೃಷ್ಟಿಗೆ ಮಾರಕವಾಗಿವೆ ಎಂಬುದು ಸಾಬೀತಾಗಿವೆ’ ಎಂದಿದ್ದಾರೆ.
‘ನಮ್ಮಿಬ್ಬರ ನಡುವಿನ ಭಿನ್ನಾಭಿಪ್ರಾಯಗಳು ಮಹಾರಾಷ್ಟ್ರ ಮತ್ತು ಮರಾಠಿ ಜನರಿಗೆ ದುಬಾರಿಯಾಗಿವೆ. ಜತೆಗೂಡುವುದು ಅಷ್ಟು ಕಷ್ಟದ ಕೆಲಸವಲ್ಲ. ಆದರೆ ಇಚ್ಛೆಯ ವಿಷಯವಷ್ಟೇ. ನನ್ನ ಆಸೆ ಅಥವಾ ಸ್ವಾರ್ಥಕ್ಕೆ ಇದು ಸಂಬಂಧಿಸಿದ್ದಲ್ಲ. ನಾವು ವಿಶಾಲವಾಗಿ ನೋಡುವ ಅಗತ್ಯವಿದೆ. ಎಲ್ಲಾ ರಾಜಕೀಯ ಪಕ್ಷಗಳ ಮರಾಠಿಗರು ಒಂದಾಗಿ ಒಂದು ಪಕ್ಷವನ್ನು ರಚಿಸುವ ಅಗತ್ಯವಿದೆ’ ಎಂದು ಠಾಕ್ರೆ ಹೇಳಿದ್ದಾರೆ.
ಭಾರತೀಯ ಕಾಮಗಾರ ಸೇನಾ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಉದ್ಧವ್, ‘ಚಿಕ್ಕ ವ್ಯಾಜ್ಯಗಳನ್ನು ಬದಿಗಿಡಲು ನಾನು ಸಿದ್ಧ. ಮಹಾರಾಷ್ಟ್ರದ ಹಿತಕ್ಕಾಗಿ ಎಲ್ಲಾ ಮರಾಠಿಗರೂ ಒಂದಾಗಬೇಕು. ಕೈಗಾರಿಕೆಗಳನ್ನು ಮಹಾರಾಷ್ಟ್ರದಿಂದ ಗುಜರಾತ್‌ಗೆ ಸ್ಥಳಾಂತರಿಸಿದ್ದನ್ನು ಸಂಸತ್ತಿನಲ್ಲಿ ಪ್ರಶ್ನಿಸಿದಾಗ ಎಲ್ಲಾ ಮರಾಠಿಗರೂ ಜತೆಗೂಡಿದ್ದರೆ, ಉತ್ತಮ ಸರ್ಕಾರವನ್ನು ರಚಿಸಬಹುದಾಗಿತ್ತು’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.