
ಜಗದಾಂಬಿಕಾ ಪಾಲ್
ನವದೆಹಲಿ (ಪಿಟಿಐ): ‘ನೀವು ಈ ಹಿಂದೆ ನನ್ನ ಸಲಹೆ ಕೇಳಿದ್ದರೆ ಇಂದು ವಿರೋಧ ಪಕ್ಷದ ಕುರ್ಚಿಯಲ್ಲಿ ಕುಳಿತುಕೊಳ್ಳುತ್ತಿರಲಿಲ್ಲ’ ಎಂದು ಸ್ಪೀಕರ್ ಸ್ಥಾನದಲ್ಲಿ ಕುಳಿತಿದ್ದ ಜಗದಾಂಬಿಕಾ ಪಾಲ್ ಅವರು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಬುಧವಾರ ಹೇಳಿದರು.
ಕೇಂದ್ರ ಬಜೆಟ್ ಮೇಲಿನ ಚರ್ಚೆಯ ವೇಳೆ ಮಾತನಾಡಿದ ರಾಹುಲ್ ಅವರು, ‘ನಮ್ಮ ಪಕ್ಷದ ಮಾಜಿ ನಾಯಕರಾದ ಜಗದಾಂಬಿಕಾ ಪಾಲ್ ಅವರು ಸ್ಪೀಕರ್ ಕುರ್ಚಿಯಲ್ಲಿ ಕುಳಿತಿದ್ದಾರೆ. ಹೀಗಾಗಿ ಇಂದು ನಾನು ಹೆಚ್ಚು ಆಕ್ರಮಣಕಾರಿಯಾಗಿ ಮಾತನಾಡುವುದಿಲ್ಲ’ ಎಂದರು.
ಅದಕ್ಕೆ ಪಾಲ್ ಅವರು ಪ್ರತಿಕ್ರಿಯಿಸಿ, ‘ಬಜೆಟ್‌ಗೆ ಸಂಬಂಧಿಸದೇ ಇರುವ ವಿಷಯವನ್ನು ಎತ್ತಲು ಸಾಧ್ಯವಿಲ್ಲ. ಸರಿಯಾದ ಹಾದಿಯಲ್ಲಿದ್ದ ನೀವು ಏಕೆ ಹಳಿ ತಪ್ಪುತ್ತಿದ್ದೀರಿ’ ಎಂದು ರಾಹುಲ್ ಅವರನ್ನು ಪ್ರಸ್ನಿಸಿದರು.
ಅದಕ್ಕೆ ಪ್ರತಿಕ್ರಿಯಿಸಿದ ರಾಹುಲ್, ‘ನಮಗೆ ನಿಮ್ಮ ಮೇಲೆ ಪ್ರೀತಿಯಿದೆ. ನೀವು ನಮ್ಮ ಪಕ್ಷದ ಮಾಜಿ ಸದಸ್ಯರು. ಹೀಗಾಗಿ ಇಂದು ನಾನು ಆಕ್ರಮಣಕಾರಿಯಾಗಿ ಮಾತನಾಡುವುದಿಲ್ಲ. ನಿಮ್ಮ ಹೃದಯ ಬಿಜೆಪಿಯಲ್ಲಿ ಇಲ್ಲ ಎಂಬುದು ನನಗೆ ತಿಳಿದಿದೆ ಸರ್’ ಎಂದರು.
‘ಈಗಲೂ ನಿಮಗೆ ಸಲಹೆ ನೀಡುತ್ತಿದ್ದೇನೆ. ನೀವು ಸರಿಯಾದ ಹಾದಿಯಲ್ಲಿ ಸಾಗಿ. ಇನ್ನೂ ಸಮಯವಿದೆ’ ಎಂದು ಪಾಲ್ ಹೇಳಿದರು.
2009ರಲ್ಲಿ 15ನೇ ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದರಾಗಿ ಆಯ್ಕೆಯಾದ ಪಾಲ್ ಅವರು, 2014ರಲ್ಲಿ ಬಿಜೆಪಿ ಸೇರಿದ್ದರು. ಅಲ್ಲಿಂದ ಮೂರು ಬಾರಿ ಬಿಜೆಪಿಯಿಂದ ಲೋಕಸಭೆಗೆ ಮರು ಆಯ್ಕೆಯಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.