
ಸಾಂದರ್ಭಿಕ ಚಿತ್ರ
ಮುಂಬೈ: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ–ಬಾಂಬೆಯ (ಐಐಟಿ) ವಿದ್ಯಾರ್ಥಿಯೊಬ್ಬರು ಹಾಸ್ಟೆಲ್‌ನ ಮಹಡಿಯಿಂದ ಜಿಗಿದು ಬುಧವಾರ ಆತ್ಮೆಹತ್ಯೆ ಮಾಡಿಕೊಂಡಿದ್ದಾರೆ.
ಮೃತ ವಿದ್ಯಾರ್ಥಿಯನ್ನು ರಾಜಸ್ಥಾನದ ಪಿಲಾನಿ ನಿವಾಸಿ ನಮನ್ ಅಗರ್ವಾಲ್ (21) ಎಂದು ಗುರುತಿಸಲಾಗಿದೆ.
ಸಿವಿಲ್ ಎಂಜಿನಿಯರಿಂಗ್ ವಿಭಾಗದಲ್ಲಿ 2ನೇ ವರ್ಷದ ಬಿ.ಟೆಕ್ ವ್ಯಾಸಂಗ ಮಾಡುತ್ತಿದ್ದ ನಮನ್, ಪೊವೈ ಕ್ಯಾಂಪಸ್‌ನ ಹಾಸ್ಟೆಲ್ ಸಂಖ್ಯೆ 4ರಲ್ಲಿ ಉಳಿದುಕೊಂಡಿದ್ದರು. ಅದೇ ಹಾಸ್ಟೆಲ್ ಮಹಡಿಯಿಂದ ಜಿಗಿದು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಆಕಸ್ಮಿಕ ಸಾವು (ಎಡಿಆರ್) ಎಂದು ಪ್ರಕರಣ ದಾಖಲಿಸಿ, ತನಿಖೆ ಆರಂಭಿಸಲಾಗಿದೆ. ಮೃತದೇಹವನ್ನು ರಾಜವಾಡಿ ಆಸ್ಪತ್ರೆಗೆ ಕಳುಹಿಸಲಾಗಿದ್ದು, ಅಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ. ನಮನ್ ಈ ನಿರ್ಧಾರ ತೆಗೆದುಕೊಳ್ಳಲು ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಇತ್ತೀಚೆಗಿನ ವರ್ಷಗಳಲ್ಲಿ ಐಐಟಿ–ಬಾಂಬೆಯಲ್ಲಿ ನಡೆದಿರುವ ಮೂರನೇ ಆತ್ಮಹತ್ಯೆ ಪ್ರಕರಣ ಇದಾಗಿದೆ. 2022ರ ಆಗಸ್ಟ್ 2ರಂದು ರೋಹಿತ್ ಸಿನ್ಹಾ ಎಂಬ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾಗಿದ್ದರು. 2023ರ ಫೆಬ್ರುವರಿ 12ರಂದು ದರ್ಶನ್ ಸೋಲಂಕಿ ಎಂಬ ವಿದ್ಯಾರ್ಥಿ ಜಾತಿ ತಾರತಮ್ಯದ ಕಾರಣ ನೀಡಿ, ಆತ್ಮಹತ್ಯೆ ಮಾಡಿಕೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.