ADVERTISEMENT

ಐಐಟಿ ಬಾಂಬೆ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣ: ಆರೋಪಿ ಅರ್ಮಾನ್‌ ಬಂಧನ

ಪಿಟಿಐ
Published 9 ಏಪ್ರಿಲ್ 2023, 11:13 IST
Last Updated 9 ಏಪ್ರಿಲ್ 2023, 11:13 IST
.
.   

ಮುಂಬೈ: ಐಐಟಿ ಬಾಂಬೆಯ ಪರಿಶಿಷ್ಟ ಜಾತಿ ವಿದ್ಯಾರ್ಥಿ ದರ್ಶನ್‌ ಸೋಲಂಕಿ ಆತ್ಮಹತ್ಯೆ ಪ್ರಕರಣದಲ್ಲಿ ಅದೇ ಕಾಲೇಜಿನ ವಿದ್ಯಾರ್ಥಿ ಅರ್ಮಾನ್‌ ಖಾತ್ರಿ ಎಂಬಾತನನ್ನು ಮುಂಬೈನ ವಿಶೇಷ ತನಿಖಾ ತಂಡ (ಎಸ್‌ಐಟಿ) ಬಂಧಿಸಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

ಹಾಸ್ಟೆಲ್‌ನ ಒಂದೇ ಮಹಡಿಯಲ್ಲಿ ಸೋಲಂಕಿ ಮತ್ತು ಅರ್ಮಾನ್‌ ನೆಲೆಸಿದ್ದರು. ಮಾರ್ಚ್‌ 3ರಂದು ಎಸ್‌ಐಟಿ ಅಧಿಕಾರಿಗಳು ವಶಪಡಿಸಿಕೊಂಡಿದ್ದ ಸೋಲಂಕಿಯ ಮರಣಪತ್ರದಲ್ಲಿ ‘ಅರ್ಮಾನ್‌ ನನ್ನನ್ನು ಕೊಂದಿದ್ದಾನೆ’ ಎಂದು ಬರೆಯಲಾಗಿತ್ತು. ಆ ಪತ್ರವನ್ನು ಕೈಬರಹ ತಜ್ಞರಲ್ಲಿ ಪರಿಶೀಲಿಸಿದಾಗ, ಅದು ಸೋಲಂಕಿ ಬರೆದ ಪತ್ರವೇ ಎಂದು ಖಚಿತವಾಗಿತ್ತು. ಈ ಕಾರಣ ಅರ್ಮಾನ್‌ನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗುಜರಾತಿನ ಅಹಮದಾಬಾದ್‌ ನಿವಾಸಿಯಾಗಿದ್ದ ಸೋಲಂಕಿ, ಐಐಟಿ ಬಾಂಬೆಯಲ್ಲಿ (ಐಐಟಿಬಿ) ಮೊದಲ ವರ್ಷದ ಬಿ.ಟೆಕ್‌ (ಕೆಮಿಕಲ್‌) ವಿದ್ಯಾರ್ಥಿಯಾಗಿದ್ದು, ಫೆ.12ರಂದು ಐಐಟಿಬಿ ಕ್ಯಾಂಪಸ್‌ನಲ್ಲಿರುವ ವಸತಿಗೃಹದ 7ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಅರ್ಮಾನ್‌ ಕೂಡ ಮೊದಲ ವರ್ಷದ ಬಿ.ಟೆಕ್‌ ವಿದ್ಯಾರ್ಥಿ. ಜಾತಿನಿಂದನೆಯಿಂದ ಬೇಸತ್ತು ಮಗ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೋಷಕರು ಆರೋಪಿಸಿದ್ದರು. ಆದರೆ ಇದನ್ನು ಐಐಟಿಬಿ ಅಲ್ಲಗಳೆದಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.