ಇಂದೋರ್: ಇ.ಸಿ.ಜಿ (ಎಲೆಕ್ಟ್ರೊಕಾರ್ಡಿಯೊಗ್ರಾಮ್) ಯಂತ್ರ ಹಾಗೂ ಹೃದಯದ ಬಡಿತವನ್ನು ಸುಸ್ಥಿತಿಯಲ್ಲಿಡುವ ಉಪಕರಣಗಳ (ಪೇಸ್‌ಮೇಕರ್ಸ್) ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಸುಧಾರಿತ ತಂತ್ರಜ್ಞಾನವನ್ನು ಇಂದೋರ್‌ನ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಅಭಿವೃದ್ಧಿಪಡಿಸಿದೆ.
ಪ್ರೊ. ಅನಿರ್ಬನ್ ಸೇನ್‌ಗುಪ್ತಾ ನೇತೃತ್ವದ ತಂಡವು ಈ ನವೀನ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದು, ಈ ಸಂಬಂಧ ಹಕ್ಕುಸ್ವಾಮ್ಯವನ್ನೂ (ಪೇಟೆಂಟ್) ಪಡೆದುಕೊಂಡಿದೆ.
‘ಇ.ಸಿ.ಜಿ ಯಂತ್ರ ಹಾಗೂ ಪೇಸ್‌ಮೇಕರ್‌ಗಳಿಗೆ ಈ ಸುಧಾರಿತ ತಂತ್ರಜ್ಞಾನವುಳ್ಳ ಚಿಪ್‌ಗಳನ್ನು ಅಳವಡಿಸಲಾಗುವುದು. ಇದರಿಂದ ಈ ಯಂತ್ರಗಳ ದಕ್ಷತೆ ಸುಧಾರಿಸಲಿದ್ದು, ತಪ್ಪಾಗಿ ರೋಗನಿರ್ಣಯವಾಗುವ ಸಾಧ್ಯತೆಗಳನ್ನು ಕಡಿಮೆ ಮಾಡಲಿದೆ. ಈ ಮೂಲಕ ರೋಗಿಗಳಿಗೆ ಅಸಮರ್ಪಕ ಚಿಕಿತ್ಸೆ ನೀಡುವುದು ತಪ್ಪಲಿದೆ’ ಎಂದು ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.
ಈ ತಂತ್ರಜ್ಞಾನವು ಇ.ಸಿ.ಜಿ ಯಂತ್ರಗಳಲ್ಲಿ ನಕಲಿ ಚಿಪ್‌ಗಳ ಅಳವಡಿಕೆಯನ್ನು ತಪ್ಪಿಸಲಿದೆ. ಹೃದ್ರೋಗಗಳ ಚಿಕಿತ್ಸೆಗೆ ಬಳಸಲಾಗುವ ಉಪಕರಣಗಳ ದಕ್ಷತೆ, ಸುರಕ್ಷತೆ ಹಾಗೂ ವಿಶ್ವಾಸಾರ್ಹತೆಯನ್ನು ಬಲಪಡಿಸಲಿದ್ದು, ನ್ಯೂನತೆಗಳನ್ನು ಸರಿಪಡಿಸಲಿದೆ ಎಂದು ಪ್ರೊ. ಸೇನ್‌ಗುಪ್ತಾ ಪ್ರತಿಕ್ರಿಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.