ಬಂಧನ
(ಸಾಂದರ್ಭಿಕ ಚಿತ್ರ)
ಜೈಪುರ: ಅಜ್ಮೀರ್‌ನಲ್ಲಿ ಅಕ್ರಮವಾಗಿ ವಾಸ ಮಾಡುತ್ತಿದ್ದ 6 ಬಾಂಗ್ಲಾದೇಶಿ ಪ್ರಜೆಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶನಿವಾರ ಹೇಳಿದ್ದಾರೆ.
ಅಜ್ಮೀರ್‌ನಲ್ಲಿ 2 ಸಾವಿರ ಮಂದಿಯ ದಾಖಲೆಗಳನ್ನು ಪರೀಶಿಲನೆ ನಡೆಸುವಾಗ 6 ಮಂದಿ ಅಕ್ರಮವಾಗಿ ನೆಲೆಸಿದ್ದು ಪತ್ತೆಯಾಗಿದೆ.
ಮುಖ್ಯಮಂತ್ರಿ ಭಜನಲ್‌ಲಾಲ್ ಶರ್ಮಾ ಅವರ ನಿರ್ದೇಶನದಂತೆ ಅಕ್ರಮ ವಲಸಿಗರ ವಿರುದ್ಧ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದರು. ರಾಜ್ಯದಲ್ಲಿ ಅಕ್ರಮವಾಗಿ ನೆಲೆಸುತ್ತಿರುವ ಬಾಂಗ್ಲಾದೇಶದ ನಾಗರಿಕರನ್ನು ಪತ್ತೆ ಮಾಡಬೇಕು ಎಂದು ಬುಧವಾರ ನಡೆಸಿದ ಸಭೆಯಲ್ಲಿ ಪೊಲೀಸರಿಗೆ ನಿರ್ದೇಶಿಸಿದ್ದರು.
ಶನಿವಾರದ ಕಾರ್ಯಾಚರಣೆಯಲ್ಲಿ 2,125 ಶಂಕಿತರ ದಾಖಲೆಗಳನ್ನು ಪರಿಶೀಲನೆ ಮಾಡಲಾಗಿದ್ದು, ಈ ಪೈಕಿ ಅಕ್ರಮವಾಗಿ ವಾಸವಿದ್ದ 6 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಕ್ರಮವಾಗಿ ವಾಸಿಸುತ್ತಿರುವ ರೋಹಿಂಗ್ಯಾಗಳು, ಬಾಂಗ್ಲಾದೇಶಿ ನಾಗರಿಕರು ಮತ್ತು ಇತರ ಅನುಮಾನಾಸ್ಪದ ವ್ಯಕ್ತಿಗಳ ವಿರುದ್ಧದ ಕಾರ್ಯಾಚರಣೆ ನಡೆಸಲು ಎಲ್ಲಾ ಪೊಲೀಸ್ ವೃತ್ತ ಪ್ರದೇಶಗಳಲ್ಲಿ ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿದೆ ಎಂದು ಎಸ್‌ಪಿ ವಂದಿತಾ ರಾಣಾ ಹೇಳಿದ್ದಾರೆ.
ಹೋಟೆಲ್‌ಗಳು, ಧರ್ಮಶಾಲೆಗಳು, ರೈಲು ನಿಲ್ದಾಣಗಳು, ಬಸ್ ನಿಲ್ದಾಣಗಳು, ಕಾರ್ಖಾನೆಗಳು, ಕೊಳೆಗೇರಿಗಳು, ದರ್ಗಾ ಪ್ರದೇಶ, ತಾರಾಗಢ ಬೆಟ್ಟ ಮತ್ತು ಇತರ ಪ್ರದೇಶಗಳಲ್ಲಿ ತೀವ್ರ ಶೋಧ ಕಾರ್ಯಾಚರಣೆಗಳನ್ನು ನಡೆಸಲಾಯಿತು ಎಂದು ಎಸ್ಪಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.