ADVERTISEMENT

ಕೋವಿಡ್-19 ರೋಗದಿಂದ 99 ವೈದ್ಯರು ಸಾವು; ಎಚ್ಚರ ವಹಿಸುವಂತೆ ಐಎಂಎ ಸೂಚನೆ

ಪಿಟಿಐ
Published 16 ಜುಲೈ 2020, 2:50 IST
Last Updated 16 ಜುಲೈ 2020, 2:50 IST
ಪ್ರಾತಿನಿಧಿಕ ಚಿತ್ರ (ಕೃಪೆ: ಪಿಟಿಐ)
ಪ್ರಾತಿನಿಧಿಕ ಚಿತ್ರ (ಕೃಪೆ: ಪಿಟಿಐ)   

ನವದೆಹಲಿ:ದೇಶದಲ್ಲಿ ಇಲ್ಲಿಯವರೆಗೆ 99 ವೈದ್ಯರು ಕೋವಿಡ್-19 ರೋಗದಿಂದ ಮೃತಪಟ್ಟಿದ್ದಾರೆ ಎಂದು ಇಂಡಿಯಲ್ ಮೆಡಿಕಲ್ ಅಸೋಸಿಯೇಷನ್ (ಐಎಂಎ) ಹೇಳಿದ್ದು, ಆರೋಗ್ಯ ಕಾರ್ಯಕರ್ತರು ಹೆಚ್ಚಿನ ಮುಂಜಾಗ್ರತೆ ವಹಿಸಲು ಸೂಚಿಸಿದೆ.

ಐಎಂಎ ರಾಷ್ಟ್ರೀಯ ಕೋವಿಡ್ ಅಂಕಿಅಂಶಗಳ ಪ್ರಕಾರ ಇಲ್ಲಿಯವರೆಗೆ 1,302 ವೈದ್ಯರಿಗೆ ಕೊರೊನಾವೈರಸ್ ಸೋಂಕು ತಗುಲಿದೆ. ಇದರಲ್ಲಿ 99 ಮಂದಿ ಮೃತಪಟ್ಟಿದ್ದಾರೆ.ಸಾವಿಗೀಡಾದವರಲ್ಲಿ 73 ಮಂದಿ 50 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದಾರೆ. 35-50 ವಯಸ್ಸಿನ ನಡುವೆ ಇರುವ 19 ಮಂದಿ ಮತ್ತು 35 ವಯಸ್ಸಿಗಿಂತ ಕಡಿಮೆ ವಯಸ್ಸಿನ 7 ಮಂದಿ ಮೃತಪಟ್ಟಿದ್ದಾರೆ.

ಹೆಚ್ಚಿನ ಮುಂಜಾಗ್ರತಾ ಕ್ರಮಗಳನ್ನು ವಹಿಸಿ ಎಂದು ಐಎಂಎ ವೈದ್ಯರಿಗೆ ಮತ್ತು ವೈದ್ಯಕೀಯ ಆಡಳಿತಾಧಿಕಾರಿಗಳಿಗೆ ಸೂಚನೆ ನೀಡಿದೆ.ಅದೇ ವೇಳೆ ವೈದ್ಯರು ವೈಜ್ಞಾನಿಕ ಕ್ರಮಗಳನ್ನು ಅನುಸರಿಸುತ್ತಿದ್ದಾರೆ ಎಂದು ಐಎಂಎ ಹೇಳಿದೆ.

ADVERTISEMENT

ಆಸ್ಪತ್ರೆಗಳಲ್ಲಿ ಎಲ್ಲ ರೀತಿಯ ವ್ಯವಸ್ಥೆಗಳನ್ನು ಮಾಡಬೇಕಾದರೆ ಸಾಕಷ್ಟು ತಯಾರಿ ನಡೆಸಬೇಕು. ಸೋಂಕು ಹರಡದಂತೆ ನಿಯಂತ್ರಿಸಲು ಮುಂಜಾಗ್ರತೆ ವಹಿಸಬೇಕು. ವೈದ್ಯರಿಗೆ, ನರ್ಸ್ ಮತ್ತು ಇತರ ಸಿಬ್ಬಂದಿಗಳು ಸಾಕಷ್ಟು ಜಾಗರೂಕರಾಗಿರಬೇಕು ಎಂದು ಐಎಂಎ ತಮ್ಮ ಪ್ರಕಟಣೆಯಲ್ಲಿ ಹೇಳಿದೆ.

ವೈದ್ಯರು, ಸಿಬ್ಬಂದಿ ಮತ್ತು ಸಾರ್ವಜನಿಕರಿಗೆ ಅಗತ್ಯವಿರುವ ವ್ಯವಸ್ಥೆಗಳ ಬಗ್ಗೆ ಗಮನ ಹರಿಸಬೇಕು. ಸ್ವಚ್ಛತೆ ಮತ್ತು ಸ್ಯಾನಿಟೈಜ್ ಮಾಡುವುದನ್ನು ತಪ್ಪದೇ ಪಾಲಿಸಬೇಕು.

ಹಿರಿಯ ಮತ್ತು ಕಿರಿಯ ವೈದ್ಯರಿಗೆ ಕೊರೊನಾ ಸೋಂಕು ತಗಲುತ್ತಿದೆ. ಆದರೆ ಸಾವಿಗೀಡಾದವರಲ್ಲಿ ಹಿರಿಯರೇ ಹೆಚ್ಚು.ಹಾಗಾಗಿ ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಬೇಕು ಮತ್ತು ಆಸ್ಪತ್ರೆಯ ಒಳಗೆ ಸಾಕಷ್ಟು ಜಾಗರೂಕರಾಗಿರಬೇಕು ಎಂದು ಐಎಂಎ ಹೇಳಿದೆ.

ಈ ಜಾಗತಿಕ ಪಿಡುಗಿನಿಂದ ಕಾಪಾಡಲು ವೈದ್ಯರೇ ಆಶಾಕಿರಣವಾಗಿದ್ದಾರೆ.ಕೋವಿಡ್-19 ನಿಂದ ವೈದ್ಯರು ಸಾವಿಗೀಡಾಗುತ್ತಿರುವುದು ಆತಂಕದ ಸಂಗತಿ. ರೋಗ ಬಾರದಂತೆ ಸ್ವಯ ರಕ್ಷಣೆ ಮಾಡಿಕೊಳ್ಳುವ ಜತೆಗೆ ಕುಟುಂಬ ಮತ್ತು ಸಹೋದ್ಯೋಗಿಗಳಿಗೂ ಸುರಕ್ಷಿತರಾಗಿರುವಂತೆ ನೋಡಿಕೊಳ್ಳಬೇಕು ಎಂದು ಐಎಂಎ ಅಧ್ಯಕ್ಷ ಡಾ. ರಾಜನ್ ಶರ್ಮಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.