ADVERTISEMENT

ಮಹಾರಾಷ್ಟ್ರ, ಗುಜರಾತ್‌ನಲ್ಲಿ ಚಂಡಮಾರುತ, ಭಾರಿ ಮಳೆಗೆ ಸಾಧ್ಯತೆ

ಪಿಟಿಐ
Published 14 ಮೇ 2021, 1:48 IST
Last Updated 14 ಮೇ 2021, 1:48 IST
   

ಮುಂಬೈ: ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತಗೊಂಡಿರುವ ಹಿನ್ನೆಲೆಯಲ್ಲಿ ಚಂಡಮಾರುತ ಅಪ್ಪಳಿಸುವ ಸಾಧ್ಯತೆಯಿದ್ದು, ಮಹಾರಾಷ್ಟ್ರ, ಗೋವಾ, ದಕ್ಷಿಣ ಕೊಂಕಣ ಸೇರಿದಂತೆ ಗುಜರಾತ್‌‌ನಲ್ಲಿ ಭಾರಿ ಮಳೆಗೆ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಸಿದೆ.

ಅರೇಬಿಯನ್ ಸಮುದ್ರದ ಆಗ್ನೇಯ ಪ್ರದೇಶದಲ್ಲಿ ಕಡಿಮೆ ಒತ್ತಡದ ಪ್ರದೇಶ ಸೃಷ್ಟಿಯಾಗಿದ್ದು, ಶುಕ್ರವಾರ ಬೆಳಗ್ಗೆ ಲಕ್ಷದ್ವೀಪ ತಲುಪಲಿದೆ. ಮುಂದಿನ 24 ತಾಸಿನಲ್ಲಿ ಮತ್ತಷ್ಟು ತೀವ್ರತೆಯ ಚಂಡಮಾರುತವಾಗಿ ರೂಪುಗೊಳ್ಳಲಿದೆ ಎಂದು ಐಎಂಡಿ ತಿಳಿಸಿದೆ.

ಇದು ಮತ್ತಷ್ಟು ತೀವ್ರಗೊಂಡು ಉತ್ತರ-ವಾಯುವ್ಯ ಗುಜರಾತ್ ಮತ್ತು ಹತ್ತಿರದ ಪಾಕಿಸ್ತಾನ ತೀರಗಳನ್ನು ಚಲಿಸುವ ಸಾಧ್ಯತೆಯಿದೆ. ಮೇ 18ರ ಸಂಜೆ ವೇಳೆಗೆ ಗುಜರಾತ್ ಸಮೀಪ ತಲುಪುವ ನಿರೀಕ್ಷೆಯಿದೆ ಎಂದು ತಿಳಿಸಿದೆ.

ADVERTISEMENT

ಈ ಕಾರಣದಿಂದಾಗಿ ದಕ್ಷಿಣ ಕೊಂಕಣ ಮತ್ತು ಗೋವಾ ಪ್ರದೇಶಗಳಲ್ಲಿ ಶನಿವಾರದಂದು ಮಳೆಯಾಗಲಿದ್ದು, ಭಾನುವಾರ ಹಾಗೂ ಸೋಮವಾರದಂದು ಕೆಲವು ಪ್ರದೇಶಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ.

ಅದೇ ರೀತಿ ಮೇ 17ರಂದು ಗುಜರಾತ್ ಕರಾವಳಿಯಲ್ಲೂ ಮಳೆಯಾಗಲಿದೆ. ಮೇ 18ರ ವೇಳೆಗೆ ಸೌರಾಷ್ಟ್ರ, ಕಚ್ ಪ್ರದೇಶಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ಮೇ 19ರಂದು ನೈಋತ್ಯ ರಾಜಸ್ಥಾನವನ್ನು ತಲುಪಲಿದೆ.

ಈ ಪ್ರದೇಶದಲ್ಲಿ ಮುಂದಿನ 5-6 ದಿನಗಳಲ್ಲಿ ಗಂಟೆಗೆ 50ರಿಂದ 80 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ. ಮುಂಬೈ, ಥಾಣೆ, ರಾಯಗಡ, ರತ್ನಾಗಿರಿ ಮತ್ತು ಸಿಂಧುದುರ್ಗ ಪ್ರದೇಶದಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.