
ನವದೆಹಲಿ: ತ್ವರಿತ ವಲಸೆ ಅನುಮತಿ ಪ್ರಕ್ರಿಯೆಗಾಗಿ ಜಾರಿಗೆ ತರಲಾಗಿರುವ ‘ಫಾಸ್ಟ್ ಟ್ರ್ಯಾಕ್ ವಲಸೆ ವಿಶ್ವಾಸಾರ್ಹ ಪ್ರವಾಸಿ ಕಾರ್ಯಕ್ರಮ" (FTI-TTP) ಯೋಜನೆಯನ್ನು ದೇಶದ ಐದು ವಿಮಾನ ನಿಲ್ದಾಣಗಳಲ್ಲಿ ಅನುಷ್ಠಾನಗೊಳಿಸಲಾಗಿದ್ದು, ಅವುಗಳಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಗುರುವಾರ ಚಾಲನೆ ನೀಡಿದರು.
ಲಖನೌ, ತಿರುವನಂತರಪುರ, ತಿರುಚನಾಪಳ್ಳಿ, ಕೋಯಿಕ್ಕೋಡ್ ಮತ್ತು ಅಮೃತಸರ ವಿಮಾನ ನಿಲ್ದಾಣಗಳಲ್ಲಿ ಇವುಗಳನ್ನು ಅನುಷ್ಠಾನಗೊಳಿಸಲಾಗಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ‘ವೇಗ, ಪ್ರಮಾಣ ಮತ್ತು ವ್ಯಾಪ್ತಿ’ ಪರಿಕಲ್ಪನೆಯಡಿ ಇದನ್ನು ಜಾರಿಗೊಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.
‘FTI-TTP ಯೋಜನೆಯಲ್ಲಿ ವಿದೇಶ ಪ್ರಯಾಣಕ್ಕೆ ಹೊರಟವರಿಗೆ ಉದ್ದನೆಯ ಸರತಿ ಸಾಲು ಅಥವಾ ಸಿಬ್ಬಂದಿಯಿಂದ ತಪಾಸಣೆ ಇರದು. ಬದಲಿಗೆ ಕೇವಲ 30 ಸೆಕೆಂಡುಗಳಲ್ಲಿ ತಡೆರಹಿತವಾಗಿ ವಲಸೆ ಅನುಮತಿ ಸಿಗುವ ಯೋಜನೆ ಇದಾಗಿದೆ. ದೇಶದ 13 ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಈ ವ್ಯವಸ್ಥೆ ಜಾರಿಗೆ ತರಲಾಗಿದೆ. ಒಸಿಐ ಕಾರ್ಡ್ ಹೊಂದಿರುವವರಿಗೆ ಇದರಿಂದ ಹೆಚ್ಚಿನ ಪ್ರಯೋಜನವಾಗಲಿದೆ’ ಎಂದು ಅಮಿತ್ ಶಾ ಹೇಳಿದ್ದಾರೆ.
‘ಕಳೆದ 11 ವರ್ಷಗಳಲ್ಲಿ ವಿದೇಶಗಳಿಗೆ ಪ್ರಯಾಣಿಸುವ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದೆ. ಈಗಾಗಲೇ ಈ ಪೋರ್ಟಲ್‌ಗೆ 3 ಲಕ್ಷ ಜನ ನೋಂದಾಯಿಸಿಕೊಂಡಿದ್ದಾರೆ. 2.65 ಲಕ್ಷ ಜನ ಬಳಕೆ ಮಾಡಿಕೊಂಡಿದ್ದಾರೆ’ ಎಂದು ಅಮಿತ್ ಶಾ ಮಾಹಿತಿ ನೀಡಿದರು
2024ರ ಜುಲೈನಲ್ಲಿ ದೆಹಲಿಯ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇದನ್ನು ಅನುಷ್ಠಾನಗೊಳಿಸಲಾಗಿತ್ತು. ನಂತರ ಮುಂಬೈ, ಚೆನ್ನೈ, ಕೋಲ್ಕತ್ತ, ಬೆಂಗಳೂರು, ಹೈದರಾಬಾದ್, ಕೊಚ್ಚಿ ಮತ್ತು ಅಹಮದಾಬಾದ್‌ನಲ್ಲಿ ಇದನ್ನು ಜಾರಿಗೆ ತರಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.