ADVERTISEMENT

ಆನ್‌ಲೈನ್‌ ಗ್ಯಾಂಬ್ಲಿಂಗ್‌, ಜೂಜು ಗಂಭೀರ ವಿಚಾರ: ಸುಪ್ರೀಂ ಕೋರ್ಟ್‌

ಪ್ರತಿಕ್ರಿಯೆ ನೀಡುವಂತೆ ಕೇಂದ್ರಕ್ಕೆ ನಿರ್ದೇಶನ ನೀಡಿದ ‘ಸುಪ್ರೀಂ’

ಪಿಟಿಐ
Published 17 ಅಕ್ಟೋಬರ್ 2025, 14:43 IST
Last Updated 17 ಅಕ್ಟೋಬರ್ 2025, 14:43 IST
   

ನವದೆಹಲಿ: ಸಾಮಾಜಿಕ ಮತ್ತು ಇ–ಸ್ಪೋರ್ಟ್ಸ್ ಗೇಮ್‌ಗಳ ಸೋಗಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಆನ್‌ಲೈನ್‌ ಜೂಜು ಮತ್ತು ಜೂಜು ಆ‍್ಯಪ್‌ಗಳನ್ನು ನಿಷೇಧಿಸುವಂತೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌, ‘ಇದು ಗಂಭೀರ ವಿಚಾರ’ ಎಂದು ಶುಕ್ರವಾರ ಅಭಿಪ್ರಾಯಪಟ್ಟಿದೆ.

ಅರ್ಜಿಯ ಒಂದು ಪ್ರತಿಯನ್ನು ಸರ್ಕಾರದ ಪರ ವಕೀಲರಿಗೆ ನೀಡುವಂತೆ ನ್ಯಾಯಮೂರ್ತಿಗಳಾದ ಜೆ.ಬಿ ಪಾರ್ದೀವಾಲಾ ಮತ್ತು ಕೆ.ವಿ ವಿಶ್ವನಾಥನ್‌ ಅವರ ಪೀಠವು ಅರ್ಜಿದಾರರ ಪರ ವಕೀಲರಿಗೆ ಸೂಚಿಸಿದೆ.

‘ಆ ಅರ್ಜಿಯನ್ನು ಪರಿಶೀಲಿಸಿ, ಸರ್ಕಾರದ ಪರ ವಕೀಲರು ಮುಂದಿನ ವಿಚಾರಣೆಯಲ್ಲಿ ಪ್ರತಿಕ್ರಿಯಿಸಬೇಕು. ಆ ಬಳಿಕ ನಾವು ತೀರ್ಪು ನೀಡುತ್ತೇವೆ’ ಎಂದು ನ್ಯಾಯಾಲಯ ತಿಳಿಸಿದೆ.

ADVERTISEMENT

ದೇಶದಾದ್ಯಂತ ಆರ್ಥಿಕ ಮತ್ತು ಸಾಮಾಜಿಕವಾಗಿ ಪರಿಣಾಮ ಬೀರುತ್ತಿರುವ ಜೂಜು ಮತ್ತು ಜೂಜು ಆ‍್ಯಪ್‌ಗಳನ್ನು ನಿಷೇಧಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ‘ಸೆಂಟರ್‌ ಫಾರ್‌ ಅಕೌಂಟೆಬಿಲಿಟಿ ಮತ್ತು ಸಿಸ್ಟೆಮ್ಯಾಟಿಕ್‌ ಚೇಂಜ್‌’ ಮತ್ತು ಶೌರ್ಯ ತಿವಾರಿ ಅವರು ಅರ್ಜಿ ಸಲ್ಲಿಸಿದ್ದರು.

‘ಆನ್‌ಲೈನ್‌ ಗೇಮಿಂಗ್‌ ಕಾಯ್ದೆ 2025ರಲ್ಲಿರುವ ಕೆಲ ಲೋಪಗಳಿಂದಾಗಿ ದೇಶದ 15 ಕೋಟಿ ಮಕ್ಕಳನ್ನು ರಕ್ಷಿಸುವ ಉದ್ದೇಶದಿಂದ ಈ ಅರ್ಜಿ ಸಲ್ಲಿಸಲಾಗಿದೆ’ ಎಂದು ಅರ್ಜಿದಾರರ ಪರ ವಕೀಲರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.