ADVERTISEMENT

ಹಿಂದಿ ಹೇರಿಕೆ ಪ್ರಾದೇಶಿಕ ಭಾಷೆಗಳಿಗೆ ಹಾನಿಯುಂಟು ಮಾಡಲಿದೆ: ಸುಮಲತಾ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2020, 13:29 IST
Last Updated 19 ಸೆಪ್ಟೆಂಬರ್ 2020, 13:29 IST
ಸುಮಲತಾ 
ಸುಮಲತಾ    

ನವದೆಹಲಿ: ಪ್ರಾದೇಶಿಕ ಭಾಷೆಗಳನ್ನೇ ಮಾತನಾಡುವ ರಾಜ್ಯಗಳ ಮೇಲೆ ಹಿಂದಿ ಹೇರಿಕೆಯು, ಕೇಂದ್ರ ಸರ್ಕಾರದ ಕ್ಷೇಮಾಭಿವೃದ್ಧಿ ಯೋಜನೆಗಳ ಅನುಷ್ಠಾನದ ಮೇಲೆ ಅಡಚಣೆ ಉಂಟುಮಾಡಲಿದೆ ಎಂದು ಮಂಡ್ಯ ಲೋಕಸಭೆ ಸಂಸದೆ ಸುಮಲತಾ ಹೇಳಿದರು.

ಲೋಕಸಭೆಯಲ್ಲಿ ಶೂನ್ಯವೇಳೆಯಲ್ಲಿ ‘ಹಿಂದಿ ಹೇರಿಕೆ’ ವಿಷಯ ಪ್ರಸ್ತಾಪಿಸಿದ ಅವರು, ‘ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಬ್ಯಾಂಕ್‌ಗಳು, ಕೇಂದ್ರ ಸರ್ಕಾರಿ ಕಚೇರಿಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ಕನ್ನಡ ತಿಳಿದಿಲ್ಲ. ಇದರಿಂದಾಗಿ ಕೇವಲ ಕನ್ನಡವನ್ನಷ್ಟೇ ತಿಳಿದಿರುವ ಜನರಿಗೆ ಸಮಸ್ಯೆ ಆಗುತ್ತಿದೆ. ಇದು ಖಂಡಿತವಾಗಿಯೂ ಸಾಮಾನ್ಯ ವ್ಯಕ್ತಿಯೊಬ್ಬನಿಗೆ ಕೇಂದ್ರ ಸರ್ಕಾರದ ಯೋಜನೆಗಳ ಲಾಭ ಪಡೆಯಲು ಅಡ್ಡಿಯಾಗಲಿದೆ’ ಎಂದರು.

‘ನಾನು ಹಿಂದಿ ಭಾಷೆಯ ವಿರುದ್ಧವಾಗಿಲ್ಲ. ಆದರೆ ಪ್ರಾದೇಶಿಕ ಭಾಷೆಗಳ ಮೇಲೆ ಹಿಂದಿ ಹೇರಿಕೆಯನ್ನು ವಿರೋಧಿಸುತ್ತೇನೆ’ ಎಂದರು. ‘ಕನ್ನಡ ಪ್ರಾಚೀನ ಭಾಷೆಯಾಗಿದ್ದು, ಕೇಂದ್ರ ಸರ್ಕಾರವು ಇದಕ್ಕೆ ಶಾಸ್ತ್ರೀಯ ಭಾಷೆಯ ಮಾನ್ಯತೆ ನೀಡಿದೆ. ಇಂಥ ಸಂದರ್ಭದಲ್ಲಿ ಹಿಂದಿ ಹೇರಿಕೆ ಜನರ ಭಾವನೆಗಳಿಗೆ ನೋವು ಉಂಟುಮಾಡಲಿದೆ’ ಎಂದು ಹೇಳಿದರು.

ADVERTISEMENT

ಕೇಂದ್ರ ಸರ್ಕಾರದ ತ್ರಿಭಾಷಾ ನೀತಿಯನ್ನು ವಿರೋಧಿಸಿದ ಸಂಸದೆ, ‘ಪ್ರಾದೇಶಿಕ ಭಾಷೆಗಳ ಮೇಲೆ ಹಿಂದಿ ಹೇರಿಕೆಯೇ ಈ ನೀತಿಯ ಉದ್ದೇಶ ಎಂಬಂತಿದೆ. ಇದನ್ನು ಒಪ್ಪಲು ಸಾಧ್ಯವಿಲ್ಲ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.