ನವದೆಹಲಿ: ದಾಂಪತ್ಯ ಜೀವನದಲ್ಲಿ ಪತಿ ಅಥವಾ ಪತ್ನಿ ಸಂಗಾತಿಯಿಂದ ಸ್ವತಂತ್ರವಾಗಿರಲು ಬಯಸುವುದಾಗಿ ಹೇಳುವುದು ‘ಅಸಾಧ್ಯ’ ಎಂದು ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ.
‘ಸಂಗಾತಿಯಿಂದ ಸ್ವತಂತ್ರವಾಗಿರಲು ಬಯಸುವವರು ವೈವಾಹಿಕ ಜೀವನಕ್ಕೆ ಪ್ರವೇಶಿಸಲೇಬಾರದು’ ಎಂದು ನ್ಯಾಯಮೂರ್ತಿಗಳಾದ ಬಿ.ವಿ.ನಾಗರತ್ನ ಮತ್ತು ಆರ್. ಮಹಾದೇವನ್ ಅವರ ಪೀಠ ಎಚ್ಚರಿಸಿದೆ.
‘ಈ ವಿಷಯದಲ್ಲಿ ನಾವು ಸ್ಪಷ್ಟವಾಗಿದ್ದೇವೆ. ವೈವಾಹಿಕ ಜೀವನ ಮುಂದುವರಿಯುತ್ತಿರುವಾಗ ಯಾವುದೇ ಪತಿ ಅಥವಾ ಪತ್ನಿ ತನ್ನ ಸಂಗಾತಿಯಿಂದ ಸ್ವತಂತ್ರರಾಗಿರಲು ಬಯಸುತ್ತೇನೆ ಎಂದು ಹೇಳಲು ಸಾಧ್ಯವಿಲ್ಲ. ವಿವಾಹವು ಎರಡು ಆತ್ಮ ಮತ್ತು ವ್ಯಕ್ತಿಗಳನ್ನು ಒಟ್ಟಿಗೆ ಸೇರಿಸುತ್ತದೆ. ಇಲ್ಲಿ ನೀವು ಹೇಗೆ ಸ್ವತಂತ್ರರಾಗಲು ಸಾಧ್ಯ’ ಎಂದು ಪೀಠ ಅರ್ಜಿದಾರರನ್ನು ಪ್ರಶ್ನಿಸಿತು.
ಅಪ್ರಾಪ್ತ ವಯಸ್ಸಿನ ಇಬ್ಬರು ಮಕ್ಕಳಿಂದ ದೂರವಿರುವ ದಂಪತಿಯ ಪ್ರಕರಣವನ್ನು ಪೀಠ ವಿಚಾರಣೆ ನಡೆಸಿತು.
‘ಮಕ್ಕಳನ್ನು ಖುಷಿಯಾಗಿಡಿ’: ‘ಮಕ್ಕಳು ಇನ್ನೂ ಚಿಕ್ಕವರಿದ್ದಾರೆ. ಅವರು ಬಿರುಕು ಬಿದ್ದಿರುವ ಕುಟುಂಬವನ್ನು ನೋಡವುದು ಸರಿಯಲ್ಲ. ಹೀಗಾಗಿ ನೀವಿಬ್ಬರೂ ಒಟ್ಟಾಗಿದ್ದರೆ ಮಕ್ಕಳೂ ಖುಷಿಯಿಂದ ಇರುತ್ತಾರೆ’ ಎಂದು ಪೀಠ ದಂಪತಿಗೆ ಕಿವಿಮಾತು ಹೇಳಿತು.
ವಾದಿ, ಪ್ರತಿವಾದಿಗಳು ತಮ್ಮಲ್ಲಿನ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳುವಂತೆ ಸಲಹೆ ನೀಡಿದ ಪೀಠವು, ದಾಂಪತ್ಯ ಜೀವನದಲ್ಲಿ ಪ್ರತಿ ಪತಿ ಮತ್ತು ಪತ್ನಿಯರು ಪರಸ್ಪರ ಭಿನ್ನಾಭಿಪ್ರಾಯ ಅಥವಾ ವಿವಾದಗಳನ್ನು ಹೊಂದಿರುತ್ತಾರೆ ಎಂದು ತಿಳಿಸಿತು.
‘ಸಿಂಗಪುರದದಲ್ಲಿ ವಾಸಿಸುತ್ತಿರುವ, ಸದ್ಯ ಭಾರತದಲ್ಲಿರುವ ನನ್ನ ಪತಿಗೆ ಸಮಸ್ಯೆ ಬಗೆಹರಿಸಿಕೊಳ್ಳುವುದು ಬೇಕಿಲ್ಲ. ಅವರಿಗೆ ಮಕ್ಕಳ ಭೇಟಿಯ ಹಕ್ಕು ಮತ್ತು ಪಾಲನೆಯ ಹಕ್ಕು ಮಾತ್ರ ಬೇಕಿದೆ’ ಎಂದು ವಿಡಿಯೊ ಕಾನ್ಫರೆನ್ಸ್ ಮೂಲಕ ಹಾಜರಾದ ಮಹಿಳೆ ಪೀಠಕ್ಕೆ ತಿಳಿಸಿದರು. ಮಹಿಳೆ ಹೈದರಾಬಾದ್‌ನಲ್ಲಿ ನೆಲಸಿದ್ದಾರೆ.
‘ಸಿಂಗಪುರಕ್ಕೆ ಮಕ್ಕಳೊಂದಿಗೆ ನೀವೇಕೆ ಹೋಗುತ್ತಿಲ್ಲ? ಯಾವ ಸಮಸ್ಯೆ ನಿಮ್ಮನ್ನು ಕಾಡುತ್ತಿದೆ’ ಎಂದು ಪೀಠವು ಮಹಿಳೆಯನ್ನು ಪ್ರಶ್ನಿಸಿತು.
ಸಿಂಗಪುರದಲ್ಲಿ ಪತಿಯ ವರ್ತನೆಯಿಂದ ತೊಂದರೆಗೆ ಸಿಲುಕಿದ್ದಾಗಿ ಮಹಿಳೆ ಉತ್ತರಿಸಿದರು. ಜೀವನೋಪಾಯಕ್ಕಾಗಿ ಅಲ್ಲಿ ಉದ್ಯೋಗದ ಅವಶ್ಯಕತೆ, ಒಂಟಿ ತಾಯಿಯ ಕಷ್ಟಗಳ ಬಗ್ಗೆ ಅಲವತ್ತುಕೊಂಡರು. ಪತಿಯಿಂದ ಯಾವುದೇ ಜೀವನಾಂಶ ಪಡೆದಿಲ್ಲ ಎಂದೂ ಮಹಿಳೆ ಈ ವೇಳೆ ತಿಳಿಸಿದರು.
ಸಲಹುವುದು ಪತಿಯ ಜವಾಬ್ದಾರಿ: ‘ನಿಮಗೆ ಉದ್ಯೋಗ ಸಿಗಲಿ ಅಥವಾ ಸಿಗದಿರಲಿ. ನಿಮ್ಮನ್ನು ಮತ್ತು ಮಕ್ಕಳನ್ನು ಸಲಹಬೇಕಾದ ಜವಾಬ್ದಾರಿ ಪತಿಯದ್ದಾಗಿದೆ’ ಎಂದ ಪೀಠವು, ‘ಪತ್ನಿ ಮತ್ತು ಮಕ್ಕಳ ಜೀವನಕ್ಕಾಗಿ ಸ್ವಲ್ಪ ಹಣವನ್ನು ಠೇವಣಿಯಿಡಿ’ ಎಂದು ಪತಿಗೆ ಸಲಹೆ ನೀಡಿತು.
ಆಗ ಪತ್ನಿ, ‘ನಾನು ಯಾರನ್ನೂ ಅವಲಂಬಿಸಲು ಬಯಸುವುದಿಲ್ಲ’ ಎಂದು ಹೇಳಿದರು.
ಆಗ ಪೀಠವು, ‘ನೀವು ಹಾಗೆಲ್ಲ ಮಾತನಾಡಬಾರದು. ಒಮ್ಮೆ ವಿವಾಹವಾದ ಮೇಲೆ ಪರಸ್ಪರರು ಒಬ್ಬರಿಗೊಬ್ಬರು ಅವಲಂಬಿತರಾಗಿರುತ್ತಾರೆ. ಅವಲಂಬಿತರಲ್ಲ ಎನ್ನುವುದಾದರೆ ವಿವಾಹ ಏಕೆ ಆಗಬೇಕಿತ್ತು’ ಎಂದು ಹೇಳಿತು.
ಪತ್ನಿ ಮತ್ತು ಮಕ್ಕಳ ಜೀವನಕ್ಕಾಗಿ ₹ 5 ಲಕ್ಷ ಠೇವಣಿಯಿರಿಸುವಂತೆ ಪತಿಗೆ ಸೂಚಿಸಿದ ಪೀಠವು, ವಿಚಾರಣೆಯನ್ನು ಸೆಪ್ಟೆಂಬರ್ 16ಕ್ಕೆ ಮುಂದೂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.