ADVERTISEMENT

ಭಾರತ– ಭೂತಾನ್‌ ಗಡಿ ಪ್ರವೇಶದ್ವಾರಗಳ ಪುನಾರಂಭ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2022, 15:50 IST
Last Updated 24 ಸೆಪ್ಟೆಂಬರ್ 2022, 15:50 IST

ರಂಗಿಯಾ/ಗುವಾಹಟಿ: ಅಸ್ಸಾಂ ಬಳಿ ಭಾರತ–ಭೂತಾನ್‌ ಅಂತರರಾಷ್ಟ್ರೀಯ ಗಡಿಯ ಪ್ರವೇಶದ್ವಾರಗಳನ್ನು ಎರಡೂವರೆ ವರ್ಷಗಳ ಬಳಿಕ ಪ್ರವಾಸಿಗರಿಗಾಗಿ ಶುಕ್ರವಾರ ತೆರೆಯಲಾಯಿತು ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದರು.

ಅಸ್ಸಾಂನ ತಮುಲ್ಪುರ ಜಿಲ್ಲೆಯ ಸಂದ್ರುಪ್‌–ಜೋಂಗ್ಖರ್‌ ಗಡಿ, ಚಿರಂಗ್‌ ಜಿಲ್ಲೆಯ ದಾದ್ಗಿರಿ ಮತ್ತು ಗೆಲೆಫು ಗಡಿ, ಬಾಸ್ಕ ಜಿಲ್ಲೆಯ ಪನ್ಬಾಂಗ್‌ ಗಡಿ ಮತ್ತು ಉದಲ್ಗಿರಿ ಜಿಲ್ಲೆಯ ಸಮ್ರಂಗ್‌ ಗಡಿ ದ್ವಾರಗಳನ್ನು ತೆರೆಯಲಾಗಿದೆ ಎಂದು ಗುವಾಹಟಿಯಲ್ಲಿಯ ಭೂತಾನ್‌ ಕಾನ್ಸುಲ್‌ ಜನರಲ್‌ ಜಿಗ್ಮೆ ಥಿನ್ಲೇ ನಮ್‌ಗ್ಯಾಲ್‌ ಘೋಷಿಸಿದರು. ಪ್ರವೇಶದ್ವಾರಗಳು ಬೆಳಿಗ್ಗೆ 9ರಿಂದ ಸಂಜೆ 5ರ ವರೆಗೆ ತೆರೆದಿರಲಿವೆ ಎಂದರು.

ಕೋವಿಡ್‌–19 ಸಾಂಕ್ರಾಮಿಕದ ಕಾರಣಕ್ಕಾಗಿ ಗಡಿಯ ಪ್ರವೇಶದ್ವಾರಗಳನ್ನು ಮುಚ್ಚಲಾಗಿತ್ತು. ಸುಸ್ಥಿರ ಅಭಿವೃದ್ಧಿ ಶುಲ್ಕ ಸೇರಿ ಇತರ ನಿಯಮಗಳೊಂದಿಗೆ ಪ್ರವೇಶದ್ವಾರಗಳನ್ನು ಪ್ರವಾಸಿಗರಿಗಾಗಿ ತೆರೆಯಲಾಗಿದೆ ಎಂದು ಅವರು ಹೇಳಿದರು.

ADVERTISEMENT

ಪ್ರವಾಸ ಶುಲ್ಕ: ಭೂತಾನ್‌ ಪ್ರವಾಸ ಕೈಗೊಳ್ಳುವ ಭಾರತೀಯರು ದಿನಕ್ಕೆ 1,200 ಶುಲ್ಕ ಭರಿಸಬೇಕು. ಇಮಿಗ್ರೇಷನ್‌ ಕೇಂದ್ರಗಳಲ್ಲಿ ಗುರುತಿನ ಪತ್ರ, ಪಾಸ್ಪೋರ್ಟ್‌ ಅಥವಾ ಇನ್ನಾವುದಾದರೂ ಗುರುತಿನ ಚೀಟಿಯನ್ನು ಒದಗಿಸಬೇಕು. ಜೊತೆಯಲ್ಲಿ ಮಕ್ಕಳಿದ್ದರೆ ಅವರ ಜನನ ಪ್ರಮಾಣ ಪತ್ರವನ್ನು ಒದಗಿಸಬೇಕು.

ಬೇರೆ ದೇಶಗಳ ಪ್ರವಾಸಿಗರು ದಿನಕ್ಕೆ 16,251 (200 ಯುಎಸ್‌ ಡಾಲರ್‌) ಶುಲ್ಕ ಪಾವತಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.