ADVERTISEMENT

ಜಾರ್ಖಂಡ್‌ನಲ್ಲಿ ವಶಪಡಿಸಿಕೊಂಡಿದ್ದು 'ವಿಕಿರಣಶೀಲ' ವಸ್ತುವಲ್ಲ: ಭಾರತ

ಪಿಟಿಐ
Published 11 ಜೂನ್ 2021, 2:45 IST
Last Updated 11 ಜೂನ್ 2021, 2:45 IST
ಅರಿಂದಮ್ ಬಾಗ್ಚಿ
ಅರಿಂದಮ್ ಬಾಗ್ಚಿ   

ನವದೆಹಲಿ: ಜಾರ್ಖಂಡ್‌ನ ಬೊಕಾರೊದಲ್ಲಿ ಇತ್ತೀಚೆಗೆ ವಶಪಡಿಸಿಕೊಂಡ ಕೆಲವು ವಸ್ತುಗಳು ಯುರೇನಿಯಂ ಎಂದು ಆಧಾರರಹಿತ ಹೇಳಿಕೆ ನೀಡಿದ್ದ ಪಾಕಿಸ್ತಾನಕ್ಕೆಭಾರತವು ಗುರುವಾರ ತಿರುಗೇಟು ನೀಡಿದ್ದು, ಇದು ದೇಶವನ್ನು ಕೆಟ್ಟದಾಗಿ ಬಿಂಬಿಸುವ ಪ್ರಯತ್ನ ಎಂದು ಕಿಡಿಕಾರಿದೆ.

ವಶಪಡಿಸಿಕೊಂಡ ವಸ್ತುಗಳು ಯುರೇನಿಯಂ ಅಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (ಎಂಇಎ) ಹೇಳಿದೆ. ಭಾರತವು ಅಂತರರಾಷ್ಟ್ರೀಯ ಮಟ್ಟದಲ್ಲಿ ನಿಯಂತ್ರಿತ ವಸ್ತುಗಳಿಗೆ ಕಠಿಣ ಕಾನೂನು ಆಧಾರಿತ ನಿಯಂತ್ರಣ ವ್ಯವಸ್ಥೆಯನ್ನು ನಿರ್ವಹಿಸುತ್ತಿದೆ ಎಂದು ಪ್ರತಿಪಾದಿಸಿದೆ.

‘ಭಾರತದ ಪರಮಾಣು ಇಂಧನ ಇಲಾಖೆ, ವಸ್ತು ಮಾದರಿಯ ಸರಿಯಾದ ಮೌಲ್ಯಮಾಪನ ಮತ್ತು ಪ್ರಯೋಗಾಲಯ ವಿಶ್ಲೇಷಣೆಯ ನಂತರ, ಕಳೆದ ವಾರ ವಶಪಡಿಸಿಕೊಂಡ ವಸ್ತುಗಳು ಯುರೇನಿಯಂ ಅಲ್ಲ ಮತ್ತು ಅವುಗಳು ವಿಕಿರಣಶೀಲವಲ್ಲ ಎಂದು ಹೇಳಿದೆ’ ಎಂದು ಎಂಇಎ ವಕ್ತಾರ ಅರಿಂದಮ್ ಬಾಗ್ಚಿ ಹೇಳಿದ್ದಾರೆ.

ADVERTISEMENT


‘ಮಾಧ್ಯಮ ವರದಿ ಉಲ್ಲೇಖಿಸಿ ಪಾಕಿಸ್ತಾನದ ವಿದೇಶಾಂಗ ಸಚಿವಾಲಯವು ಭಾರತದ ಬಗ್ಗೆ ಮಾಡಿದ ಅನಪೇಕ್ಷಿತ ಹೇಳಿಕೆಗಳು, ಸತ್ಯವನ್ನು ಪರಿಶೀಲಿಸದೆ ಭಾರತದ ವಿರುದ್ಧ ಅಪಚಾರ ಮಾಡುವ ಅವರ ನಿಲುವನ್ನು ಸೂಚಿಸುತ್ತದೆ’ ಎಂದು ಅವರು ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.

ಕಳೆದ ವಾರ ಬೊಕಾರೊದಲ್ಲಿ ಅನುಮಾನಾಸ್ಪದ ವಸ್ತುಗಳನ್ನು ವಶಪಡಿಸಿಕೊಂಡಿರುವ ಮಾಧ್ಯಮ ವರದಿಗೆ ಪ್ರತಿಕ್ರಿಯೆಯಾಗಿ ಪಾಕಿಸ್ತಾನದ ಅಧಿಕೃತ ಹೇಳಿಕೆಗಳ ಪ್ರಶ್ನೆಗೆ ಬಾಗ್ಚಿ ಉತ್ತರಿಸಿದರು.

‘ಅಂತರರಾಷ್ಟ್ರೀಯ ಮಟ್ಟದಲ್ಲಿ ನಿಯಂತ್ರಿತ ವಸ್ತುಗಳಿಗೆ ಭಾರತವು ಕಠಿಣ ಕಾನೂನು ಆಧಾರಿತ ನಿಯಂತ್ರಕ ವ್ಯವಸ್ಥೆಯನ್ನು ನಿರ್ವಹಿಸುತ್ತಿದೆ ಎಂದು ನಾನು ಪುನರುಚ್ಚರಿಸುತ್ತೇನೆ’ ಎಂದು ಅವರು ಹೇಳಿದರು.

ಕಳೆದ ವಾರ, ಜಾರ್ಖಂಡ್‌ನಲ್ಲಿ ಪರಮಾಣು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಈ ಬಗ್ಗೆ ತನಿಖೆ ನಡೆಸಬೇಕೆಂದು ಮಾಧ್ಯಮ ವರದಿ ಉಲ್ಲೇಖಿಸಿ ಪಾಕಿಸ್ತಾನ ವಿದೇಶಾಂಗ ಸಚಿವಾಲಯ ಒತ್ತಾಯಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.