ADVERTISEMENT

ಕೇಜ್ರಿವಾಲ್‌ ಬಿಡುಗಡೆಗೆ ಆಗ್ರಹಿಸಿ ‘ಇಂಡಿಯಾ’ ಪ್ರತಿಭಟನೆ

ಪಿಟಿಐ
Published 30 ಜುಲೈ 2024, 14:46 IST
Last Updated 30 ಜುಲೈ 2024, 14:46 IST
<div class="paragraphs"><p>ಅರವಿಂದ ಕೇಜ್ರಿವಾಲ್‌ ಅವರನ್ನು ಜೈಲಿನಿಂದ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ‘ಇಂಡಿಯಾ’ದ ನಾಯಕರು ಜಂತರ್‌ಮಂತರ್‌ನಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು. ಸುನಿತಾ ಕೇಜ್ರಿವಾಲ್‌ ಮತ್ತು ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ. ರಾಜಾ ಭಾಗಿಯಾಗಿದ್ದರು.</p></div>

ಅರವಿಂದ ಕೇಜ್ರಿವಾಲ್‌ ಅವರನ್ನು ಜೈಲಿನಿಂದ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ‘ಇಂಡಿಯಾ’ದ ನಾಯಕರು ಜಂತರ್‌ಮಂತರ್‌ನಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು. ಸುನಿತಾ ಕೇಜ್ರಿವಾಲ್‌ ಮತ್ತು ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ. ರಾಜಾ ಭಾಗಿಯಾಗಿದ್ದರು.

   

ಪಿಟಿಐ ಚಿತ್ರ

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರ ಆರೋಗ್ಯ ಹದಗೆಡುತ್ತಿದ್ದು, ಕೂಡಲೇ ಅವರನ್ನು ಜೈಲಿನಿಂದ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ವಿರೋಧ ಪಕ್ಷಗಳ ಒಕ್ಕೂಟ ‘ಇಂಡಿಯಾ’ದ ನಾಯಕರು ಜಂತರ್‌ಮಂತರ್‌ನಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

ADVERTISEMENT

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ವಿಪಕ್ಷಗಳ ಧ್ವನಿಯನ್ನು ಹತ್ತಿಕ್ಕುತ್ತಿದೆ ಎಂದು ವಾಗ್ದಾಳಿ ನಡೆಸಿದರು. ‘ಭಾರತ್‌ ಮಾತಾ ಕಿ ಜೈ’ ಮತ್ತು ‘ಸರ್ವಾಧಿಕಾರ ಕೊನೆಯಾಗಲಿ’ ಎಂದು ಘೋಷಣೆ ಕೂಗಿದರು.

ಸಿಪಿಐ(ಎಂಎಲ್‌) ನಾಯಕ ದೀಪಂಕರ್‌ ಭಟ್ಟಾಚಾರ್ಯ ಅವರು, ‘ಎಎಪಿಯ ಹಿರಿಯ ನಾಯಕರಾದ ಕೇಜ್ರಿವಾಲ್‌, ಮನೀಶ್‌ ಸಿಸೋಡಿಯಾ ಮತ್ತು ಸತ್ಯೇಂದರ್‌ ಜೈನ್ ಅವರನ್ನು ರಾಜಕೀಯ ಪಿತೂರಿಯ ಭಾಗವಾಗಿ ಜೈಲಿಗೆ ಕಳುಹಿಸಲಾಗಿದೆ’ ಎಂದು ಆರೋಪಿಸಿದರು.

‘ದೆಹಲಿಯ ಅರಾಜಕತೆಗೆ ಮೋದಿ ನೇತೃತ್ವದ ಸರ್ಕಾರವೇ ಹೊಣೆ. ಈ ಅವ್ಯವಸ್ಥೆಯೇ ಮೂವರು ಯುಪಿಎಸ್‌ಸಿ ಆಕಾಂಕ್ಷಿಗಳ ಪ್ರಾಣ ತೆಗೆದುಕೊಂಡಿದೆ’ ಎಂದು ಕಿಡಿಕಾರಿದರು.

‘ಎಎಪಿಯನ್ನು ನಿರ್ನಾಮ ಮಾಡಿ, ದೆಹಲಿಯಲ್ಲಿ ಸರ್ಕಾರವನ್ನು ದುರ್ಬಲಗೊಳಿಸಲು ಯತ್ನಿಸಿದರು. ಜನರಿಂದ ಆಯ್ಕೆಯಾದ ಮುಖ್ಯಮಂತ್ರಿ ಜೈಲಿನಲ್ಲಿದ್ದಾರೆ. ದೆಹಲಿಯಲ್ಲಿ ಗಲಭೆ ನಡೆಸಿದ ಆರೋಪದ ಮೇಲೆ ಉಮರ್‌ ಖಾಲಿದ್‌ ಸೇರಿ ಅನೇಕ ಸಾಮಾಜಿಕ ಕಾರ್ಯಕರ್ತರು ಸೆರೆವಾಸದಲ್ಲಿದ್ದಾರೆ. ಸಾಮಾಜಿಕ ಹೋರಾಟಗಾರರು ಮತ್ತು ನಾಯಕರ ವಿರುದ್ಧ ದೊಡ್ಡ ಷಡ್ಯಂತ್ರ ನಡೆಯುತ್ತಿದೆ’ ಎಂದು ಹೇಳಿದರು.

‘ಇಂಥ ದಬ್ಬಾಳಿಕೆಯನ್ನು ಜನರು ಸಹಿಸುವುದಿಲ್ಲ ಎಂಬುದಕ್ಕೆ ಇತ್ತೀಚಿನ ಚುಣಾವಣಾ ಫಲಿತಾಂಶವೇ ಸಾಕ್ಷಿ. ಹರಿಯಾಣ, ಮಹಾರಾಷ್ಟ್ರ ಮತ್ತು ಜಾರ್ಖಂಡ್‌ನಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದೆ. ಜನರು ಬಿಜೆಪಿಗೆ ತಕ್ಕ ಉತ್ತರ ನೀಡಲಿದ್ದಾರೆ’ ಎಂದು ಹೇಳಿದರು.

ಎಎಪಿ ರಾಜ್ಯ ಘಟಕದ ಸಂಚಾಲಕ ಗೋಪಾಲ್ ರಾಯ್‌ ಅವರು, ‘ಕೇಜ್ರಿವಾಲ್‌ ಅವರ ದೇಹದಲ್ಲಿ ಸಕ್ಕರೆ ಪ್ರಮಾಣ ಇಳಿಕೆಯಾಗುತ್ತಿದೆ. ವಿಚಾರಣಾ ನ್ಯಾಯಾಲಯ ಮತ್ತು ಸುಪ್ರೀಂ ಕೋರ್ಟ್‌ ಅವರಿಗೆ ಜಾಮೀನು ಮಂಜೂರು ಮಾಡಿವೆ. ಆದರೆ ಪಿತೂರಿ ನಡೆಸಿ ಅವರನ್ನು ಮತ್ತೆ ಜೈಲಿನಲ್ಲಿ ಇಡಲಾಗಿದೆ. ವಿರೋಧ ಪಕ್ಷದ ನಾಯಕರನ್ನು ಜೈಲಿಗೆ ಕಳುಹಿಸಲು ಬಿಜೆಪಿ ಏಕೆ ಬಯಸುತ್ತಿದೆ? ಮೂವರು ಐಎಎಸ್‌ ಆಕಾಂಕ್ಷಿಗಳ ಸಾವಿಗೆ ಯಾರು ಹೊಣೆ’ ಎಂದು ಪ್ರಶ್ನಿಸಿದರು.

ಪ್ರತಿಭಟನೆಯಲ್ಲಿ, ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌, ಕಾಂಗ್ರೆಸ್‌ ನಾಯಕ ಗೌರವ್‌ ಗೊಗೊಯ್‌ ಮತ್ತಿತರರು ಭಾಗಿಯಾಗಿದ್ದರು.

ಕೇಜ್ರಿವಾಲ್‌ ಜೀವ ಅಪಾಯದಲ್ಲಿದೆ: ಸುನೀತಾ

ಕೇಜ್ರಿವಾಲ್‌ ಅವರ ಜೀವವು ಅಪಾಯದಲ್ಲಿದೆ ಎಂದು ಪತ್ನಿ ಸುನೀತಾ ಕೇಜ್ರಿವಾಲ್‌ ಆತಂಕ ವ್ಯಕ್ತಪಡಿಸಿದರು. ‘ಕೇವಲ ಒಂದೇ ಒಂದು ಹೇಳಿಕೆ ಆಧರಿಸಿ ಅಬಕಾರಿ ನೀತಿ ಪ್ರಕರಣದಲ್ಲಿ ನನ್ನ ಪತಿಯನ್ನು ಜೈಲಿಗೆ ಕಳುಹಿಸಲಾಗಿದೆ.  ಪಿತೂರಿ ಮತ್ತು ಒತ್ತಡದ ಕಾರಣದಿಂದ ಜಾರಿ ನಿರ್ದೇಶನಾಲಯ(ಇ.ಡಿ) ಕೇಜ್ರಿವಾಲ್ ಅವರನ್ನು ಬಂಧಿಸಿದೆ ಎಂದು ಆರೋಪಿಸಿದರು.

‘ವಿಚಾರಣಾ ನಾಯ್ಯಾಲಯ ಜಾಮೀನು ಮಂಜೂರು ಮಾಡಿದೆ. ಆದರೆ ಇ.ಡಿ ಜಾಮೀನಿಗೆ ತಡೆಯಾಜ್ಞೆ ತಂದಿದೆ ಮತ್ತು ಸಿಬಿಐ ಅವರನ್ನು ಮತ್ತೆ ಬಂಧಿಸಿದೆ. 22 ವರ್ಷಗಳಿಂದ ಅವರು ಮಧುಮೇಹದಿಂದ ಬಳಲುತ್ತಿದ್ದಾರೆ. ಅವರಿಗೆ ಇನ್ಸುಲಿನ್‌ ನೀಡಲು ನಾವು ಕೋರ್ಟ್‌ ಮೆಟ್ಟಿಲೇರಿದೆವು’ ಎಂದು ಹೇಳಿದರು.

ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅವರು ‘ಇದು ಬಿಜೆಪಿಯ ಸರ್ವಾಧಿಕಾರಿ ಧೋರಣೆ ಮತ್ತು ಪಿತೂರಿ ಅಲ್ಲವೇ?  ದೆಹಲಿ ಜನರ ಸೇವೆ ಮಾಡುವುದನ್ನು ತಡೆಯಲು ನಕಲಿ ಪ್ರಕರಣದಲ್ಲಿ ಸಿಲುಕಿಸಿ ಕೇಜ್ರಿವಾಲ್‌ ಅವರನ್ನು ಜೈಲಿಗೆ ಕಳುಹಿಸಲಾಗಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.