ವಿಶ್ವಸಂಸ್ಥೆ: ಗಾಜಾದಲ್ಲಿನ ಮಾನವೀಯ ಬಿಕ್ಕಟ್ಟಿನ ಕುರಿತು ಕಳವಳ ವ್ಯಕ್ತಪಡಿಸಿರುವ ಭಾರತವು, ‘ಗಾಜಾದಲ್ಲಿ ಕದನ ವಿರಾಮ ಘೋಷಿಸಬೇಕು. ಅಲ್ಲಿನ ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಮಧ್ಯಂತರ ಕದನ ವಿರಾಮವು ಸಾಕಾಗುವುದಿಲ್ಲ’ ಎಂದು ಹೇಳಿದೆ.
ವಿಶ್ವಸಂಸ್ಥೆಯು ‘ಪ್ಯಾಲೆಸ್ಟೀನ್ ಮತ್ತು ಮಧ್ಯಪ್ರಾಚ್ಯದಲ್ಲಿನ ಪರಿಸ್ಥಿತಿ’ ಕುರಿತ ಬಹಿರಂಗ ಚರ್ಚಾಸಭೆ ನಡೆಸಿತು. ಅದರಲ್ಲಿ ವಿಶ್ವಸಂಸ್ಥೆಯಲ್ಲಿನ ಭಾರತದ ಕಾಯಂ ಪ್ರತಿನಿಧಿ ಪರ್ವತನೇನಿ ಹರೀಶ್ ಬುಧವಾರ ಮಾತನಾಡಿದರು.
‘ಗಾಜಾದಲ್ಲಿನ ಜನರು ಆಹಾರ, ವೈದ್ಯಕೀಯ ಸೇವೆ ಹಾಗೂ ಇಂಧನ ಸೇರಿದಂತೆ ಮೂಲಸೌಕರ್ಯಗಳ ಅಭಾವ ಎದುರಿಸುತ್ತಿದ್ದಾರೆ. ಅಲ್ಲಿನ ಮಕ್ಕಳು ಶಿಕ್ಷಣದಿಂದಲೂ ಹೊರಗುಳಿದಿದ್ದಾರೆ. ಹೀಗಿರುವಾಗ ಅವರ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಎದುರಿಸಲು, ಕಡಿಮೆ ಅವಧಿಯ ಮಧ್ಯಂತರ ಕದನ ವಿರಾಮಗಳು ಸಾಕಾಗುವುದಿಲ್ಲ. ಸಂಪೂರ್ಣ ಕದನ ವಿರಾಮ ಘೋಷಿಸುವ ಅಗತ್ಯವಿದೆ’ ಎಂದು ಒತ್ತಿಹೇಳಿದರು.
‘ಮುಂದಿನ ದಾರಿ ಸ್ಪಷ್ಟವಾಗಿದೆ. ಈ ನಿಟ್ಟಿನಲ್ಲಿ ಭಾರತ ದೃಢವಾದ ನಿಲುವು ಹೊಂದಿದೆ. ಗಾಜಾದ ಜನರು ಎದುರಿಸುತ್ತಿರುವ ಸಮಸ್ಯೆಗಳು ಮುಂದುವರಿಯಲು ಬಿಡಬಾರದು. ನಿರಂತರ ಮತ್ತು ಸುರಕ್ಷಿತವಾಗಿ ಮಾನವೀಯ ನೆರವನ್ನು ನೀಡಬೇಕಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.