ADVERTISEMENT

39 ನಾವಿಕರ ನೆರವಿಗೆ ಭಾರತ ಮನವಿ

ಚೀನಾ ಕಡಲಲ್ಲಿ ಲಂಗರು ಹಾಕಿರುವ ಎರಡು ಹಡಗುಗಳಲ್ಲಿ ಸಿಲುಕಿರುವ ಭಾರತೀಯರು

ಪಿಟಿಐ
Published 1 ಜನವರಿ 2021, 15:07 IST
Last Updated 1 ಜನವರಿ 2021, 15:07 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಚೀನಾ ವ್ಯಾಪ್ತಿಯ ಸಮುದ್ರದಲ್ಲಿ ಸಾಗುತ್ತಿರುವ ಎರಡು ಹಡಗುಗಳಲ್ಲಿ ಸಿಲುಕಿರುವ ಭಾರತೀಯ ನಾವಿಕರಿಗೆ ತುರ್ತು ನೆರವು ನೀಡುವಂತೆ ಭಾರತ ಶುಕ್ರವಾರ ಮನವಿ ಮಾಡಿದೆ.

‘ಸರಕು ಸಾಗಣೆಯ ಭಾರತದ ಹಡಗು ಎಂವಿ ಜಗ್‌ ಆನಂದ್‌ ಚೀನಾದ ಹೆಬೆ ಪ್ರಾಂತ್ಯದ ಜಿಂಗ್‌ತಾಂಗ್‌ ಬಂದರು ಬಳಿಕಳೆದ ಜೂನ್‌ 13ರಂದು ಲಂಗರು ಹಾಕಿದೆ. ಇದರಲ್ಲಿ 23 ಭಾರತೀಯ ನಾವಿಕರು ಸಿಲುಕಿದ್ದಾರೆ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅನುರಾಗ್‌ ಶ್ರೀವಾಸ್ತವ ತಿಳಿಸಿದರು.

‘ಎಂವಿ ಅನಸ್ತೇಸಿಯಾ ಹೆಸರಿನ ಮತ್ತೊಂದು ಹಡಗಿನಲ್ಲಿ 16 ಜನ ಭಾರತೀಯರಿದ್ದಾರೆ. ಚೀನಾದ ಕ್ಯಾಫಿಡಿಯನ್‌ ಬಂದರು ಬಳಿ ಕಳೆದ ಸೆಪ್ಟೆಂಬರ್‌ 20ರಿಂದ ಲಂಗರು ಹಾಕಿದೆ’ ಎಂದೂ ತಿಳಿಸಿದರು.

ADVERTISEMENT

‘ಈ ಎರಡೂ ಹಡಗುಗಳಲ್ಲಿರುವ ಸರಕನ್ನು ಇಳಿಸಲು ಅನುಮತಿ ದೊರೆಯದ ಕಾರಣ ಅವುಗಳಲ್ಲಿರುವ 39 ಜನ ಭಾರತೀಯರು ಸಂಕಷ್ಟಕ್ಕೆ ಸಿಲುಕಿದ್ದಾರೆ’ ಎಂದರು.

‘ಬೀಜಿಂಗ್‌ನಲ್ಲಿರುವ ಭಾರತದ ರಾಯಭಾರಿ ಕಚೇರಿಯು ಬೀಜಿಂಗ್‌, ಹೆಬೆ ಹಾಗೂ ತಿಯಾನ್‌ಜಿನ್‌ನಲ್ಲಿರುವ ಚೀನಾ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದು, ಸಂಕಷ್ಟದಲ್ಲಿರುವ ಭಾರತೀಯರ ನೆರವಿಗೆ ಶ್ರಮಿಸುತ್ತಿದ್ದಾರೆ’ ಎಂದು ಸುದ್ದಿಗಾರರಿಗೆ ತಿಳಿಸಿದರು.

‘ನಾವಿಕರ ನೆರವಿಗೆ ಧಾವಿಸುವುದಾಗಿ ಚೀನಾ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಮಾನವೀಯ ನೆಲೆಯಲ್ಲಿ ತುರ್ತಾಗಿ ನೆರವು ನೀಡುವಂತೆ ಮನವಿ ಮಾಡಲಾಗಿದೆ. ಕೋವಿಡ್‌–19 ಹಿನ್ನೆಲೆಯಲ್ಲಿ ಕಠಿಣ ನಿರ್ಬಂಧಗಳನ್ನು ಹೇರಲಾಗಿದೆ. ಹೀಗಾಗಿ ನಾವಿಕರನ್ನು ಬದಲಾಯಿಸಲು ‍ಪ್ರಾಂತೀಯ ಸರ್ಕಾರಗಳು ಅನುಮತಿ ನೀಡುತ್ತಿಲ್ಲ ಎಂಬುದಾಗಿ ಅಧಿಕಾರಿಗಳು ತಿಳಿಸಿದ್ದಾರೆ’ ಎಂದು ಶ್ರೀವಾಸ್ತವ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.