ಜಮ್ಮು: ‘ದೇಶದ ಗಡಿ ಭಾಗದಲ್ಲಿ ಹುಟ್ಟಿಕೊಳ್ಳುವ ಉಗ್ರರ ಜಾಲಗಳನ್ನು ಬಗ್ಗು ಬಡಿಯಲು ಭಾರತವು ಶಕ್ತಿಯುತವಾಗಿದ್ದು, ಸಾರ್ವಭೌಮತ್ವಕ್ಕೆ ಧಕ್ಕೆಯಾದರೆ ಸಹಿಸಿಕೊಳ್ಳುವುದಿಲ್ಲ’ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಇಲ್ಲಿನ ಜಮ್ಮು ವಿಶ್ವವಿದ್ಯಾಲಯದಲ್ಲಿ ಸೋಮವಾರ ನಡೆದ ರಾಷ್ಟ್ರೀಯ ಭದ್ರತಾ ಸಮಾವೇಶದಲ್ಲಿ ಮಾತನಾಡಿದ ಅವರು, ‘ವಿಶ್ವದ ಮುಸ್ಲಿಂ ದೇಶಗಳು ಭಯೋತ್ಪಾದನೆ ವಿರುದ್ಧ ಒಗ್ಗೂಡುತ್ತಿವೆ. ಆರ್ಥಿಕ ಮುಗ್ಗಟ್ಟಿನಿಂದ ನಲುಗುತ್ತಿರುವ ಪಾಕಿಸ್ತಾನದ ಪಾಲಿಗೆ ಕಾಶ್ಮೀರವು ಪಂಜರದಲ್ಲಿರುವ ಗಿಳಿಯಷ್ಟೇ. ಇದರಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ’ ಎಂದು ಚಾಟಿ ಬೀಸಿದರು.
ಭಯೋತ್ಪಾದಕರ ವಿರುದ್ಧ ರಕ್ಷಣಾ ಪಡೆಗಳು ತಟಸ್ಥವಾಗಿಲ್ಲ. ನಿರ್ನಾಮಕ್ಕೂ ಸಿದ್ಧವಾಗಿವೆ. ಭಯೋತ್ಪಾದನೆ ವಿರುದ್ಧ ಭಾರತ ಕೈಗೊಂಡಿರುವ ಕ್ರಮಗಳನ್ನು ಇಡೀ ವಿಶ್ವವೇ ಗಮನಿಸುತ್ತಿದೆ ಎಂದರು.
ಸರ್ಕಾರವು ಭಯೋತ್ಪಾದನೆ ವಿರುದ್ಧ ಕಠಿಣ ಕ್ರಮಕೈಗೊಂಡಿದೆ ಎಂದ ಅವರು, ಉಗ್ರರ ವಿರುದ್ಧ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಕೈಗೊಂಡಿರುವ ಸರ್ಜಿಕಲ್ ಸ್ಟ್ರೈಕ್ ಮತ್ತು ಬಾಲಾಕೋಟ್ ವೈಮಾನಿಕ ದಾಳಿಯನ್ನು ಅವರು ಉದಾಹರಿಸಿದರು.
ಯುಪಿಎ ಸರ್ಕಾರವು ಪಾಕ್ ಪ್ರಾಯೋಜಿತ ಭಯೋತ್ಪಾದನೆ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಲಿಲ್ಲ. ಆ ದೇಶದ ನೀಚತನದಿಂದ ಸಾವಿರಾರು ಮುಗ್ಧರು ಜೀವ ಕಳೆದುಕೊಳ್ಳುವಂತಾಯಿತು ಎಂದರು.
ಚೀನಾಕ್ಕೆ ಸಂದೇಶ ರವಾನೆ: ಭಾರತವು ಗಡಿಯಲ್ಲಿ ಶಾಂತಿ ಬಯಸುತ್ತದೆ. ಈ ನಿಟ್ಟಿನಲ್ಲಿ ಚೀನಾ ಜೊತೆ ರಾಜತಾಂತ್ರಿಕ ಮಾತುಕತೆಗಳ ನಡೆಯುತ್ತಿವೆ ಎಂದು ಹೇಳಿದರು.
ಚೀನಾವು ಪೂರ್ವ ಲಡಾಕ್‌ನಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವುದನ್ನು ಏಕಪಕ್ಷೀಯವಾಗಿ ಉಲ್ಲಂಘಿಸಿದೆ. ಗಾಲ್ವನ್ ಕಣಿವೆ ಸಂಘರ್ಷ ಇದಕ್ಕೆ ನಿದರ್ಶನವಾಗಿದೆ. ಆದರೆ, ಭಾರತೀಯ ಯೋಧರು ಚೀನಾಕ್ಕೆ ತಕ್ಕ ಉತ್ತರ ನೀಡಿದ್ದಾರೆ ಎಂದರು.
‘ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದಲ್ಲಿ ಉಗ್ರವಾದದ ಛಾಯೆ ಬದಲು ಶಾಶ್ವತವಾಗಿ ಶಾಂತಿ ಮತ್ತು ಸುರಕ್ಷತೆಯ ವಾತಾವರಣ ನೆಲೆಸಿದರೆ ಸಶಸ್ತ್ರ ಪಡೆಗಳ(ವಿಶೇಷ ಅಧಿಕಾರ) ಕಾಯ್ದೆಯನ್ನು (ಆಫ್‌ಸ್ಪ) ವಾಪಸ್ ಪಡೆಯಲಾಗುವುದು’ ಎಂದು ರಾಜನಾಥ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.
‘ಭಾರತದ ಸಾರ್ವಭೌಮತ್ವದ ರಕ್ಷಣೆಗೆ ಸಂಬಂಧಿಸಿದಂತೆ ಯಾವುದೇ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ’ ಎಂದು ಘೋಷಿಸಿದರು.
‘ಪ್ರಸ್ತುತ ಈಶಾನ್ಯ ಭಾರತದ ಹೆಚ್ಚಿನ ಪ್ರದೇಶದಲ್ಲಿ ಆಫ್‌ಸ್ಪ ರದ್ದುಗೊಂಡಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಶ್ವತವಾಗಿ ಶಾಂತಿ ನೆಲೆಗೊಳ್ಳುವುದನ್ನು ನಾನು ಎದುರು ನೋಡುತ್ತಿದ್ದೇನೆ. ನೆಮ್ಮದಿ ವಾತಾವರಣ ಮೂಡಿಸಿದರೆ ಕಾಯ್ದೆಯನ್ನು ವಾಪಸ್ ಪಡೆಯಲಾಗುವುದು’ ಎಂದರು.
‘ಅಮೆರಿಕದ ಜನರಲ್ ಅಟೊಮಿಕ್ ಸಂಸ್ಥೆಯಿಂದ ಶಸ್ತ್ರಸಜ್ಜಿತ ‘ಎಂಕ್ಯೂ 9ಬಿ’ ಡ್ರೋನ್‌ಗಳ ಖರೀದಿಯಲ್ಲಿ ಯಾವುದೇ ನಿಯಮಾವಳಿಗಳು ಉಲ್ಲಂಘನೆಯಾಗಿಲ್ಲ. ರಕ್ಷಣಾ ಸಾಮಗ್ರಿಗಳ ಖರೀದಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಚಾಲ್ತಿಯಲ್ಲಿರುವ ಎಲ್ಲಾ ಮಾನದಂಡಗಳನ್ನು ಪಾಲಿಸಲಾಗಿದೆ’ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.
ಡ್ರೋನ್ ಖರೀದಿಯ ವೆಚ್ಚ ಕುರಿತು ಸಾಮಾಜಿಕ ಜಾಲತಾಣಗಳಲ್ಲಿನ ಊಹಾಪೋಹದ ವರದಿಗಳನ್ನು ತಳ್ಳಿ ಹಾಕಿರುವ ಕೇಂದ್ರ ರಕ್ಷಣಾ ಸಚಿವಾಲಯವು ವೆಚ್ಚವನ್ನು ಅಂತಿಮಗೊಳಿಸಿರುವ ಬೆನ್ನಲ್ಲೇ ರಾಜನಾಥ್ ಈ ಸ್ಪಷ್ಟನೆ ನೀಡಿದ್ದಾರೆ.
ಅಟೊಮಿಕ್ ಸಂಸ್ಥೆಯು ಇತರ ದೇಶಗಳಿಗೂ ಡ್ರೋನ್‌ಗಳನ್ನು ಪೂರೈಸುತ್ತಿದೆ. ಈ ದರವನ್ನು ಹೋಲಿಕೆ ಮಾಡಿಯೇ ಅತ್ಯುತ್ತಮ ಬೆಲೆಗೆ ಖರೀದಿಸಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.