ADVERTISEMENT

ಭಾರತದಲ್ಲಿ ರಾಜರ ಆಡಳಿತ ನಡೆಸಲಾಗದು: ಮೋದಿ ಸರ್ಕಾರದ ವಿರುದ್ಧ ರಾಹುಲ್ ಗುಡುಗು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಫೆಬ್ರುವರಿ 2022, 15:38 IST
Last Updated 2 ಫೆಬ್ರುವರಿ 2022, 15:38 IST
ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದ ರಾಹುಲ್‌ ಗಾಂಧಿ
ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದ ರಾಹುಲ್‌ ಗಾಂಧಿ   

ನವದೆಹಲಿ: ಕೇಂದ್ರೀಕರಣಕ್ಕೆ ಸಂಬಂಧಿಸಿದಂತೆ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ಹರಿಹಾಯ್ದಿರುವ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ, ಭಾರತವು ಹಲವು ರಾಜ್ಯಗಳ ಒಕ್ಕೂಟವಾಗಿದೆ ಹಾಗೂ ಇದನ್ನು 'ಅಧಿಪತ್ಯದ' ರೀತಿ ಆಳ್ವಿಕೆ ನಡೆಸಲು ಸಾಧ್ಯವಿಲ್ಲ ಎಂದು ಟೀಕಿಸಿದ್ದಾರೆ.

'ಭಾರತದ ಸಂವಿಧಾನದಲ್ಲಿ ಭಾರತವನ್ನು ರಾಜ್ಯಗಳ ಒಕ್ಕೂಟ ಎಂದು ಹೇಳಲಾಗಿದೆಯೇ ಹೊರತು ರಾಷ್ಟ್ರ ಎಂದು ಅಲ್ಲ. ಭಾರತದಲ್ಲಿ ಒಬ್ಬ ವ್ಯಕ್ತಿ ರಾಜ್ಯಗಳ ಜನತೆಯ ಮೇಲೆ ಆಡಳಿತ ನಡೆಸಲು ಸಾಧ್ಯವಿಲ್ಲ. ಭಿನ್ನ ಭಾಷೆಗಳು ಹಾಗೂ ಸಂಸ್ಕೃತಿಯ ವೈವಿಧ್ಯತೆಯನ್ನು ದಮನಿಸಲು ಸಾಧ್ಯವಿಲ್ಲ. ಇದೊಂದು ಸಹಭಾಗಿತ್ವವೇ ಹೊರತು, ಅಧಿಪತ್ಯ ಅಲ್ಲ' ಎಂದು ರಾಹುಲ್‌ ಗಾಂಧಿ ಗುಡುಗಿದರು.

ಸಂಯುಕ್ತ ವ್ಯವಸ್ಥೆಯಲ್ಲಿ ಸಹಕಾರ, ಮಾತುಕತೆ ಹಾಗೂ ಸಮಾಲೋಚನೆಯ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದ ರಾಹುಲ್‌ ಗಾಂಧಿ, ಹಲವು ದಶಕಗಳಿಂದ ಇದೇ ಮಾರ್ಗದಲ್ಲಿ ಭಾರತದಲ್ಲಿ ಆಡಳಿತ ನಡೆಯುತ್ತಿದೆ ಎಂದರು.

ADVERTISEMENT

'ಕಾಂಗ್ರೆಸ್‌ 1947ರಲ್ಲಿ ರಾಜಾಡಳಿತ ವ್ಯವಸ್ಥೆಯನ್ನು ಇಲ್ಲವಾಗಿಸಿತು. ಆದರೆ, ಅದು ಮತ್ತೆ ಮರಳಿದೆ. ಭಾರತವನ್ನು ಕೇಂದ್ರದ ಕೋಲಿನಿಂದ ಆಳಬಹುದು ಎಂಬ ಕಲ್ಪನೆಯಿದೆ. ಪ್ರತಿ ಬಾರಿಯೂ ಅದು ನಡೆಯುತ್ತಿದೆ ಹಾಗೂ ಕೋಲು ಮುರಿಯುತ್ತಿದೆ' ಎಂದು ಕೇಂದ್ರದ ಧೋರಣೆಯನ್ನು ಮೂದಲಿಸಿದರು.

ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ವೇಳೆ ಲೋಕಸಭೆಯಲ್ಲಿ ರಾಹುಲ್‌ ಗಾಂಧಿ ಮಾತನಾಡಿದರು. 'ಭಾರತದ ಅತ್ಯಂತ ಸಿರಿವಂತರು ಹಾಗೂ ಇತರರ ನಡುವಿನ ಕಂದರದ ಕುರಿತಾದ ಅಂಶವು ರಾಷ್ಟ್ರಪತಿಗಳ ಭಾಷಣದಲ್ಲಿ ಕಾಣೆಯಾಗಿತ್ತು' ಎಂದು ರಾಹುಲ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.