ADVERTISEMENT

13 ಹೊಸ ಸೇನಾ ನೆಲೆ ನಿರ್ಮಿಸಿದ ಚೀನಾ: ಉಪಗ್ರಹ ಚಿತ್ರಗಳ ಆಧಾರ

ಸ್ಟ್ರಾಟ್‌ಫಾರ್ ವರ್ಲ್ಡ್‌ವೈಡ್ ವರದಿಯಲ್ಲಿ ಉಲ್ಲೇಖ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2020, 19:47 IST
Last Updated 22 ಸೆಪ್ಟೆಂಬರ್ 2020, 19:47 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಭಾರತ ಚೀನಾ ನಡುವಣ ವಾಸ್ತವ ನಿಯಂತ್ರಣ ರೇಖೆಯ (ಎಲ್‌ಎಸಿ) ಉದ್ದಕ್ಕೂ ಚೀನಾ ಹಲವು ಸೇನಾ ನೆಲೆಗಳನ್ನು ಸ್ಥಾಪಿಸಿದೆ ಎಂದು ಸ್ಟ್ರಾಟ್‌ಫಾರ್ ವರದಿ ಮಾಡಿದೆ. 2017ರಲ್ಲಿ ದೋಕಲಾ ಸಂಘರ್ಷ ನಡೆದ ನಂತರ, ಚೀನಾ ಸೇನೆಯು ಎಲ್‌ಎಸಿಯ ಉದ್ದಕ್ಕೂ ವಾಯುನೆಲೆ, ವಾಯಪಡೆ ದಾಳಿ ಘಟಕಗಳು ಮತ್ತು ಹಲವು ಹೆಲಿಪೋರ್ಟ್‌ಗಳನ್ನು ನಿರ್ಮಿಸಿದೆ. ಮೇನಲ್ಲಿ ನಡೆದ ಗಾಲ್ವನ್ ಸಂಘರ್ಷದ ನಂತರ ನಾಲ್ಕು ಹೊಸ ಹೆಲಿಪಾಡ್‌ಗಳನ್ನು ನಿರ್ಮಿಸುತ್ತಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಉಪಗ್ರಹ ಚಿತ್ರಗಳನ್ನು ಆಧರಿಸಿ ಈ ವರದಿ ಸ್ಟ್ರಾಟ್‌ಫಾರ್ ಸಿದ್ಧಪಡಿಸಿದೆ. ‘ಲಡಾಖ್‌ ಸಂಘರ್ಷಕ್ಕೂ ಮುನ್ನವೇ ಚೀನಾ ಸೇನೆಯು ಇಲ್ಲಿ ತನ್ನ ನೆಲೆಗಳ ಸಂಖ್ಯೆ ಹೆಚ್ಚಿಸಿಕೊಂಡಿತ್ತು. ಸೇನೆಯ ಇರುವನ್ನು ಇಲ್ಲಿ ಹೆಚ್ಚಿಸುವ ಕಾಮಗಾರಿ ಈಗಲೂ ನಡೆಯುತ್ತಿದೆ. ಭಾರತದ ಜತೆಗಿನ ಗಡಿಯುದ್ದಕ್ಕೂ ತನ್ನ ನೆಲೆಯನ್ನು ಗಟ್ಟಿಮಾಡಿಕೊಳ್ಳುವುದರ ಹಿಂದಿನ ಉದ್ದೇಶ ಬೇರೆಯೇ ಇದೆ.

ಗಡಿಯನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವ ಗುರಿ ಇದೆ.ವಾಯುನೆಲೆಗಳಲ್ಲಿ ಹೊಸ ಏರ್‌ಸ್ಟ್ರಿಪ್‌ಗಳು, ಹ್ಯಾಂಗರ್‌ಗಳನ್ನು ನಿರ್ಮಿಸಲಾಗುತ್ತಿದೆ. ಇಲ್ಲಿ ಸುಖೋಯ್–30 ಚೀನಾ ಅವತರಣಿಕೆ, ಜೆ–11, ಜೆ–16 ಯುದ್ಧವಿಮಾನಗಳನ್ನು ನಿಲ್ಲಿಸಿರುವುದು ಉಪಗ್ರಹ ಚಿತ್ರಗಳಲ್ಲಿ ದಾಖಲಾಗಿದೆ’ ಎಂದು ವಿವರಿಸಲಾಗಿದೆ.

ADVERTISEMENT

ಸೇನೆ ಜಮೆ ನಿಲ್ಲಿಸಲು ನಿರ್ಧಾರ
ನವದೆಹಲಿ:
ಪೂರ್ವ ಲಡಾಖ್‌ನ ಗಡಿಗೆ ಹೆಚ್ಚುವರಿ ಸೈನಿಕರನ್ನು ಜಮೆ ಮಾಡುವುದನ್ನು ನಿಲ್ಲಿಸಲು ನಿರ್ಧರಿಸಲಾಗಿದೆ ಎಂದು ಭಾರತ ಮತ್ತು ಚೀನಾ ಸೇನೆಗಳು ಜಂಟಿ ಹೇಳಿಕೆ ಬಿಡುಗಡೆ ಮಾಡಿವೆ. ಎರಡೂ ಸೇನೆಗಳ ಕಮಾಂಡರ್ ಮಟ್ಟದ ಅಧಿಕಾರಿಗಳ 6ನೇ ಸುತ್ತಿನ ಮಾತುಕತೆಯ ನಂತರ ಈ ನಿರ್ಧಾರವನ್ನು ಪ್ರಕಟಿಸಲಾಗಿದೆ. ಎರಡೂ ಸೇನೆಗಳ ಮಧ್ಯೆ ಸಂವಹನವನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ. ಗಡಿ ಸಂಘರ್ಷವನ್ನು ಒನೆಗಾಣಿಸುವ ಉದ್ದೇಶದಿಂದ 7ನೇ ಸುತ್ತಿನ ಮಾತುಕತೆ ನಡೆಸಲೂ ನಿರ್ಧರಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

3 ವಾಯುನೆಲೆಗಳು
5 ಹೆಲಿಪೋರ್ಟ್‌ಗಳು
5 ಶಾಶ್ವತ ವಾಯುದಾಳಿ ಘಟಕಗಳು

2016ರಲ್ಲಿ ಎಲ್‌ಎಸಿಯ ಬಳಿ, ಚೀನಾ ನೆಲದಲ್ಲಿ ಒಂದು ಹೆಲಿಪೋರ್ಟ್‌ ಮತ್ತು ಒಂದು ವಾಯುದಾಳಿ ಘಟಕ ಮಾತ್ರ ಇತ್ತು. 2017ರ ದೋಕಲಾ ಸಂಘರ್ಷದ ನಂತರ ಇಂತಹ ಘಟಕಗಳ ನಿರ್ಮಾಣ ಆರಂಭವಾಯಿತು. 2019ರಲ್ಲಿ ನಾಲ್ಕು ವಾಯುನೆಲೆ, ನಾಲ್ಕು ವಾಯುದಾಳಿ ಘಟಕ ಮತ್ತು ಒಂದು ಹೆಲಿಪೋರ್ಟ್‌ ಹಾಗೂ ಕದನ ನಿಯಂತ್ರಣ ಕೇಂದ್ರವನ್ನು ನಿರ್ಮಿಸಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.