ADVERTISEMENT

ಸೇನಾಧಿಕಾರಿಗಳ ಮಾತುಕತೆ: ಭಾರತ–ಚೀನಾ ಗಡಿ ಸಂಘರ್ಷ ತಿಳಿಗೊಳಿಸುವ ಯತ್ನ

​ಪ್ರಜಾವಾಣಿ ವಾರ್ತೆ
Published 6 ಜೂನ್ 2020, 20:14 IST
Last Updated 6 ಜೂನ್ 2020, 20:14 IST
   

ನವದೆಹಲಿ: ಭಾರತ–ಚೀನಾ ಗಡಿಯ ಪೂರ್ವ ಲಡಾಖ್‌‌ ಪ್ರದೇಶದಲ್ಲಿ ನಿರ್ಮಾಣವಾಗಿರುವ ಪ್ರಕ್ಷುಬ್ಧ ಸ್ಥಿತಿಯನ್ನು ತಿಳಿಗೊಳಿಸುವ ಪ್ರಯತ್ನವಾಗಿ ಉಭಯ ರಾಷ್ಟ್ರಗಳ ಸೇನಾಧಿಕಾರಿಗಳು ಶನಿವಾರ ಸುದೀರ್ಘ ಮಾತುಕತೆ ನಡೆಸಿದ್ದಾರೆ.

ವಾಸ್ತವ ಗಡಿರೇಖೆಯ ಮೋಲ್ಡೊದಲ್ಲಿ ಮೂರು ಗಂಟೆಗೂ ಹೆಚ್ಚು ಕಾಲ ಸಭೆ ನಡೆದಿದೆ. ಮಾತುಕತೆಯ ವಿವರಗಳನ್ನು ಇನ್ನೂ ಬಹಿರಂಗಪಡಿಸಿಲ್ಲ. ಭಾರತೀಯ ಸೇನೆಯನ್ನು ಲೆಫ್ಟಿನೆಂಟ್‌‌ ಜನರಲ್‌ ಹರಿಂದರ್‌ ಸಿಂಗ್‌ ನೇತೃತ್ವದ ತಂಡವು ಪ್ರತಿನಿಧಿಸಿದ್ದರೆ, ಚೀನಾದ ಪೀಪಲ್ಸ್‌ ಲಿಬರೇಷನ್‌ ಆರ್ಮಿಯನ್ನು ಮೇಜರ್‌‌ ಜನರಲ್‌ ಲಿಯು ಲಿನ್‌ ನೇತೃತ್ವದ ತಂಡ ಪ್ರತಿನಿಧಿಸಿತ್ತು.

ಸಭೆಯ ಬಳಿಕ ಲೇಹ್‌ಗೆ ಮರಳಿದ ಭಾರತೀಯ ತಂಡವು ಸೇನಾ ಮುಖ್ಯಸ್ಥ ಎಂ.ಎಂ. ನರವಣೆ, ಉತ್ತರ ಕಮಾಂಡ್‌ನ ಮುಖ್ಯಸ್ಥ ಲೆ. ಜನರಲ್‌ ವೈ.ಕೆ. ಜೋಶಿ ಸೇರಿದಂತೆ ಹಿರಿಯ ಅಧಿಕಾರಿಗಳಿಗೆ ಮಾತುಕತೆಯ ವಿವರಗಳನ್ನು ನೀಡಿದೆ.

ADVERTISEMENT

ಪ್ರಸಕ್ತ ಈ ವಿಚಾರವು ಪ್ರಧಾನಿ ಕಚೇರಿ, ರಾಷ್ಟ್ರೀಯ ಭದ್ರತಾ ಸಲಹೆಗಾರ, ರಕ್ಷಣಾ ಸಚಿವಾಲಯ ಹಾಗೂ ವಿದೇಶಾಂಗ ಸಚಿವಾಲಯಗಳ ಮಟ್ಟದಲ್ಲಿ ಚರ್ಚಿಸಲಾಗುತ್ತಿದೆ. ಇಲ್ಲಿ ಕೈಗೊಳ್ಳುವ ತೀರ್ಮಾನಗಳನ್ನು ಅನುಸರಿಸಿ ಈ ವಿಚಾರವಾಗಿ ಸರ್ಕಾರವು ಹೇಳಿಕೆಯನ್ನು ಬಿಡುಗಡೆ ಮಾಡುವ ನಿರೀಕ್ಷೆ ಇದೆ.

‘ಊಹಾತ್ಮಕ ವರದಿ ಬೇಡ’
ಉಭಯರಾಷ್ಟ್ರಗಳ ಸೇನಾಧಿಕಾರಿ ಮಟ್ಟದ ಸಭೆ ಶನಿವಾರ ಬೆಳಿಗ್ಗೆ ಆರಂಭವಾಗುತ್ತಿದ್ದಂತೆಯೇ ಮಾಧ್ಯಮಗಳಿಗೆ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ ಭಾರತೀಯ ಸೇನೆಯು, ಗಡಿ ವಿಚಾರ ಇತ್ಯರ್ಥಕ್ಕೆ ಭಾರತ ಮತ್ತು ಚೀನಾ, ಸೇನೆ ಹಾಗೂ ರಾಜತಾಂತ್ರಿಕ ಮಟ್ಟದಲ್ಲಿ ಪ್ರಯತ್ನಗಳನ್ನು ಮಾಡುತ್ತಿದೆ. ಇಂಥ ಸಂದರ್ಭದಲ್ಲಿ ಊಹಾತ್ಮಕ ವರದಿಗಳನ್ನು ಪ್ರಸಾರ ಮಾಡದಂತೆ ಮನವಿ ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.