ADVERTISEMENT

ಗಡಿಯಲ್ಲಿ ಶಾಂತಿ: ಏರುಗತಿಯಲ್ಲಿ ಭಾರತ, ಚೀನಾ ಸಂಬಂಧ

ವಾಂಗ್‌ ಯಿ ಜೊತೆ ನಡೆದ ಸಭೆಯಲ್ಲಿ ಜೈಶಂಕರ್‌ ಪ್ರತಿಪಾದನೆ

ಪಿಟಿಐ
Published 19 ಆಗಸ್ಟ್ 2025, 15:39 IST
Last Updated 19 ಆಗಸ್ಟ್ 2025, 15:39 IST
ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ಡೊಭಾಲ್‌ ಹಾಗೂ ಚೀನಾ ವಿದೇಶಾಂಗ ಸಚಿವ ವಾಂಗ್‌ ಯಿ ನವದೆಹಲ್ಲಿ ಮಾತುಕತೆ ನಡೆಸಿದರು ಎಪಿ/ಪಿಟಿಐ ಚಿತ್ರ 
ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ಡೊಭಾಲ್‌ ಹಾಗೂ ಚೀನಾ ವಿದೇಶಾಂಗ ಸಚಿವ ವಾಂಗ್‌ ಯಿ ನವದೆಹಲ್ಲಿ ಮಾತುಕತೆ ನಡೆಸಿದರು ಎಪಿ/ಪಿಟಿಐ ಚಿತ್ರ    

ನವದೆಹಲಿ: ‘ವಾಸ್ತವ ನಿಯಂತ್ರಣ ರೇಖೆ(ಎಲ್‌ಎಸಿ) ಉದ್ದಕ್ಕೂ ಕಳೆದ ಒಂಬತ್ತು ತಿಂಗಳಿಂದ ಶಾಂತಿ ನೆಲಸಿದೆ. ಈ ಕಾರಣಕ್ಕೆ ಚೀನಾ ಮತ್ತು ಭಾರತ ನಡುವಿನ ಸಂಬಂಧದಲ್ಲಿ ‘ಏರುಗತಿ’ ಕಾಣಬಹುದಾಗಿದೆ’ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ಡೊಭಾಲ್‌ ಮಂಗಳವಾರ ಹೇಳಿದರು.

ಗಡಿ ಸಮಸ್ಯೆ ಕುರಿತಂತೆ ಚೀನಾ ವಿದೇಶಾಂಗ ಸಚಿವ ವಾಂಗ್‌ ಯಿ ಅವರೊಂದಿಗೆ ನಡೆದ ದ್ವಿಪಕ್ಷೀಯ ಮಾತುಕತೆ ವೇಳೆ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಶಾಂಘೈ ಸಹಕಾರ ಸಂಘಟನೆ(ಎಸ್‌ಸಿಒ) ಶೃಂಗಸಭೆಯಲ್ಲಿ ಪಾಲ್ಗೊಳ್ಳುವುದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಚೀನಾಕ್ಕೆ ಭೇಟಿ ನೀಡುತ್ತಿದ್ದು, ಈ ಸಂದರ್ಭದಲ್ಲಿ ಡೊಭಾಲ್‌ ಅವರ ಈ ಹೇಳಿಕೆಗೆ ಮಹತ್ವ ಬಂದಿದೆ.

ADVERTISEMENT

‘ವಿಶೇಷ ಪ್ರತಿನಿಧಿಗಳ’ ಕಾರ್ಯವಿಧಾನ ಚೌಕಟ್ಟಿನಡಿ ಆಯೋಜಿಸಿದ್ದ ಮಾತುಕತೆಯಲ್ಲಿ, ಜೈಶಂಕರ್‌ ಹಾಗೂ ವಾಂಗ್‌ ಯಿ ಅವರು ಗಡಿಗೆ ಸಂಬಂಧಿಸಿ ವಿವಿಧ ವಿಚಾರಗಳ ಕುರಿತು ಚರ್ಚೆ ನಡೆಸಿದರು.

ವಿಶೇಷ ಪ್ರತಿನಿಧಿಗಳ’ ಸಭೆಯಲ್ಲಿ ಪಾಲ್ಗೊಳ್ಳುವುದಕ್ಕಾಗಿ ಕಳೆದ ಡಿಸೆಂಬರ್‌ನಲ್ಲಿ ಬೀಜಿಂಗ್‌ಗೆ ಭೇಟಿ ನೀಡಿದ್ದನ್ನು ಪ್ರಸ್ತಾಪಿಸಿದ ಡೊಭಾಲ್‌,‘ಈ ಭೇಟಿ ವೇಳೆ ನಡೆದ ಮಾತುಕತೆ ನಂತರ, ಉಭಯ ದೇಶಗಳ ನಡುವಿನ ಸಂಬಂಧ ಮತ್ತಷ್ಟು ಗಟ್ಟಿಯಾಗಿದೆ’ ಎಂದರು.

‘ಗಡಿಗಳಲ್ಲಿ ಶಾಂತಿ ನೆಲಸಿದೆ. ಹೀಗಾಗಿ, ದ್ವಿಪಕ್ಷೀಯ ಸಂಬಂಧ ವೃದ್ಧಿ ಕುರಿತಂತೆ ಉಭಯ ದೇಶಗಳ ನಡುವೆ ಗಮನಾರ್ಹ ಮಾತುಕತೆಗಳು ನಡೆಯುತ್ತಿವೆ’ ಎಂದು ಹೇಳಿದರು.

ವಾಂಗ್ ಸಂತಸ: ಚೀನಾ ವಿದೇಶಾಂಗ ಸಚಿವ ವಾಂಗ್‌ ಯಿ ಮಾತನಾಡಿ, ‘ಸಂವಹನ ಹಾಗೂ ಸಹಕಾರದದ ಮೂಲಕ ಎರಡೂ ದೇಶಗಳು ವಿಶ್ವಾಸ ವೃದ್ಧಿಗೆ ಒತ್ತು ನೀಡಬೇಕು. ಜೊತೆಗೆ, ಉಭಯ ದೇಶಗಳ ನಡುವಿನ ನಿರ್ದಿಷ್ಟ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು’ ಎಂದು ಹೇಳಿದರು.

‘ಸಂಬಂಧಗಳ ಸುಧಾರಣೆ ಮತ್ತು ಪ್ರಗತಿ ಕುರಿತಂತೆ ನಮ್ಮ ದ್ವಿಪಕ್ಷೀಯ ಬಾಂಧವ್ಯ ಸವಾಲು ಎದುರಿಸುತ್ತಿದೆ. ಈ ಕಾರಣಕ್ಕೆ, ಎಸ್‌ಸಿಒ ಶೃಂಗಸಭೆಯಲ್ಲಿ ಪಾಲ್ಗೊಳ್ಳುವುದಕ್ಕಾಗಿ ಪ್ರಧಾನಿ ಮೋದಿ ಅವರು ಚೀನಾಕ್ಕೆ ಭೇಟಿ ನೀಡುತ್ತಿರುವುದಕ್ಕೆ ಬಹಳ ಮಹತ್ವ ಇದೆ’ ಎಂದು ಯಿ ಹೇಳಿದರು.

ಗಡಿಗಳಲ್ಲಿ ಶಾಂತಿ ನೆಲಸಿರುವುದು ದ್ವಿಪಕ್ಷೀಯ ಸಂಬಂಧ ಮತ್ತಷ್ಟು ಗಟ್ಟಿಗೊಂಡ ಕಾರಣ ನಿರ್ಮಾಣವಾಗಿರುವ ಹೊಸ ಪರಿಸ್ಥಿತಿಯಿಂದಾಗಿ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿ ಉಭಯ ದೇಶಗಳ ನಡುವೆ ನಡೆಯುತ್ತಿರುವ ಮಾತುಕತೆಗಳಿಗೆ ಮತ್ತಷ್ಟು ಬಲಬಂದಿದೆ
ಅಜಿರ್‌ ಡೊಭಾಲ್‌ ರಾಷ್ಟ್ರೀಯ ಭದ್ರತಾ ಸಲಹೆಗಾರ

‘ಶೃಂಗಸಭೆಯಲ್ಲಿ ಮೋದಿ ಭಾಗಿ’

ಚೀನಾದ ತಿಯಾನ್‌ಜಿನ್‌ ನಗರದಲ್ಲಿ ಆಗಸ್ಟ್‌ 31 ಹಾಗೂ ಸೆಪ್ಟೆಂಬರ್ 1ರಂದು ಶಾಂಘೈ ಸಹಕಾರ ಸಂಘಟನೆ (ಎಸ್‌ಸಿಒ) ಶೃಂಗಸಭೆ ನಡೆಯಲಿದ್ದು ಪ್ರಧಾನಿ ಪಾಲ್ಗೊಳ್ಳುವರು ಎಂದು ಡೊಭಾಲ್‌ ಇದೇ ವೇಳೆ ಘೋಷಿಸಿದರು. ‘ಮೋದಿ ಅವರ ಚೀನಾ ಭೇಟಿ ಹಿನ್ನೆಲೆಯಲ್ಲಿ ಈ ವಿಶೇಷ ಪ್ರತಿನಿಧಿಗಳ ಮಾತುಕತೆ ಹೆಚ್ಚು ಮಹತ್ವ ಇದೆ. ರಷ್ಯಾದ ಕಜನ್‌ ನಗರದಲ್ಲಿ ಕಳೆದ ಅಕ್ಟೋಬರ್‌ನಲ್ಲಿ ನಡೆದ ಶೃಂಗಸಭೆ ಸಂದರ್ಭದಲ್ಲಿ ಮೋದಿ ಹಾಗೂ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌ ಮಾತುಕತೆ ನಡೆಸಿದ್ದರು. ಉಭಯ ನಾಯಕರ ಈ ಭೇಟಿಯಿಂದ ಎರಡೂ ದೇಶಗಳಿಗೆ ಪ್ರಯೋಜನವಾಗಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.