ADVERTISEMENT

ಭಾರತ- ಚೀನಾ ಸಂಘರ್ಷ | ದುಃಸ್ಸಾಹಸಕ್ಕೆ ಕೈಹಾಕಿದರೆ ತಕ್ಕ ಉತ್ತರ: ಸೇನೆಗೆ ಅಧಿಕಾರ

ಚೀನಾ ಗಡಿಯಲ್ಲಿ ಕಾವಲು l ಸೇನೆ ಸರ್ವ ಸನ್ನದ್ಧ l ವಾಯುಪಡೆಯೂ ಕಾರ್ಯಾಚರಣೆಗೆ ಸಜ್ಜು

ಏಜೆನ್ಸೀಸ್
Published 22 ಜೂನ್ 2020, 0:41 IST
Last Updated 22 ಜೂನ್ 2020, 0:41 IST
ಅಂತರರಾಷ್ಟ್ರೀಯ ಯೋಗ ದಿನದ ಅಂಗವಾಗಿ ಲಡಾಖ್‌ನ ಖರ್ದುಂಗ್‌ ಲಾ ಸಮೀಪ ಐಟಿಬಿಪಿ ಸಿಬ್ಬಂದಿ ಭಾನುವಾರ ಯೋಗಾಭ್ಯಾಸ ನಡೆಸಿದರು
ಅಂತರರಾಷ್ಟ್ರೀಯ ಯೋಗ ದಿನದ ಅಂಗವಾಗಿ ಲಡಾಖ್‌ನ ಖರ್ದುಂಗ್‌ ಲಾ ಸಮೀಪ ಐಟಿಬಿಪಿ ಸಿಬ್ಬಂದಿ ಭಾನುವಾರ ಯೋಗಾಭ್ಯಾಸ ನಡೆಸಿದರು   

ನವದೆಹಲಿ: ಚೀನಾ ಯಾವುದೇ ರೀತಿಯ ದುಃಸ್ಸಾಹಸಕ್ಕೆ ಕೈಹಾಕಿದರೆ ತಕ್ಕ ಉತ್ತರ ನೀಡಿ ಎಂದು 3,500 ಕಿ.ಮೀ. ಗಡಿ ಉದ್ದಕ್ಕೂ ನಿಯೋಜಿಸಲಾಗಿರುವ ಯೋಧರಿಗೆ ಸೂಚಿಸಲಾಗಿದೆ.ಸಶಸ್ತ್ರ ಪಡೆಗಳಿಗೆ ಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಸೇನಾ ಪಡೆಗಳ ಮುಖ್ಯಸ್ಥ ಜ. ಬಿಪಿನ್‌ ರಾವತ್‌, ಸೇನಾ ಮುಖ್ಯಸ್ಥ ಜ. ಎಂ.ಎಂ. ನರವಣೆ, ನೌಕಾಪಡೆ ಮುಖ್ಯಸ್ಥ ಕರಮ್‌ವೀರ್‌ ಸಿಂಗ್‌ ಮತ್ತು ವಾಯುಪಡೆ ಮುಖ್ಯಸ್ಥ ಆರ್‌.ಕೆ.ಎಸ್‌. ಭದೌರಿಯಾ ಜತೆಗೆ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ಭಾನುವಾರ ಸಭೆ ನಡೆಸಿ, ಪೂರ್ವ ಲಡಾಖ್‌ನ ಪರಿಸ್ಥಿತಿಯ ಬಗ್ಗೆ ಚರ್ಚಿಸಿದರು.

ಪೂರ್ವ ಲಡಾಖ್‌ನಲ್ಲಿ ಜೂನ್‌ 15ರಂದು ನಡೆದ ಹಿಂಸಾತ್ಮಕ ಸಂಘರ್ಷದ ಬಳಿಕ ಗಡಿಯಲ್ಲಿನ ಪರಿಸ್ಥಿತಿ ಬದಲಾಗಿದೆ. ಮುಂಚೂಣಿ ಪ್ರದೇಶಗಳಿಗೆ ಸಾವಿರಾರು ಯೋಧರನ್ನು ಕಳುಹಿಸಲಾಗಿದೆ. ಯುದ್ಧ ವಿಮಾನಗಳು ಕೂಡ ಸಜ್ಜಾಗಿ ನಿಂತಿವೆ.

ADVERTISEMENT

ಭೂಗಡಿ, ವಾಯುಪ್ರದೇಶ ಮತ್ತು ಪ್ರಮುಖ ಜಲಮಾರ್ಗಗಳಲ್ಲಿ ಚೀನಾದ ಚಟುವಟಿಕೆಗಳ ಮೇಲೆ ನಿಗಾ ಇರಿಸುವಂತೆ ರಾಜನಾಥ್‌ ಅವರು ಸೇನಾಧಿಕಾರಿಗಳಿಗೆ ಸೂಚಿಸಿದರು.

ಚೀನಾ ಜತೆಗಿನ ಗಡಿ ಕಾವಲು ವಿಚಾರದಲ್ಲಿ ‘ಕಠಿಣ’ ಧೋರಣೆ ಅನುಸರಿಸಲು ನಿರ್ಧರಿಸಲಾಗಿದೆ.

ರಾಜನಾಥ್‌ ಅವರು ಮೂರು ದಿನಗಳ ಭೇಟಿಗಾಗಿ ರಷ್ಯಾಕ್ಕೆ ಹೋಗುವ ಮೊದಲು ಸೇನಾಧಿಕಾರಿಗಳ ಜತೆಗೆ ಸಭೆ ನಡೆಸಿದರು. ಎರಡನೇ ಜಾಗತಿಕ ಯುದ್ಧದಲ್ಲಿ ಜರ್ಮನಿ ವಿರುದ್ಧ ಸೋವಿಯತ್‌ ಒಕ್ಕೂಟವು ಗೆಲುವು ಪಡೆದ 75ನೇ ವರ್ಷಾಚರಣೆಯ ಭವ್ಯ ಕವಾಯತಿನಲ್ಲಿ ರಾಜನಾಥ್‌ ಭಾಗವಹಿಸಲಿದ್ದಾರೆ.

ಚೀನಾ ಗಡಿಯಲ್ಲಿ ಯಾವುದೇ ಸನ್ನಿವೇಶ ಎದುರಿಸಲು ವಾಯುಪಡೆ ಸನ್ನದ್ಧವಾಗಿದೆ. ಎಷ್ಟು ಬೇಕೋ ಅಷ್ಟು ಪ್ರಮಾಣದಲ್ಲಿ ಯುದ್ಧ ವಿಮಾನಗಳು ಮತ್ತು ಯೋಧರನ್ನು ನಿಯೋಜಿಸಲಾಗಿದೆ ಎಂದು ಭದೌರಿಯಾ ತಿಳಿಸಿದರು. ಸನ್ನದ್ಧತೆಯ ಭಾಗವಾಗಿ, ಲಡಾಖ್‌ ಪ್ರದೇಶದಲ್ಲಿ ಯುದ್ಧ ವಿಮಾನಗಳ ಹಾರಾಟ ನಡೆಸಲಾಗಿದೆ ಎಂಬುದರ ಸುಳಿವನ್ನೂ ಅವರು ನೀಡಿದರು.

ಪೂರ್ಣ ಪ್ರಮಾಣದಲ್ಲಿ ಶಸ್ತ್ರ ಸಜ್ಜಿತವಾದ ಯುದ್ಧ ವಿಮಾನಗಳನ್ನು ಅಲ್ಪ ಅವಧಿಯಲ್ಲಿ ಕಾರ್ಯಾಚರಣೆಗೆ ಇಳಿಸಲು ಸಾಧ್ಯವಾಗುವಂತೆ ಸಜ್ಜಾಗಿ ಇರಿಸಲಾಗಿದೆ.

ಪಾಂಗಾಂಗ್‌ ಬಿಕ್ಕಟ್ಟು: ಇನ್ನೂ ಆಗಿಲ್ಲ ಶಮನ

ಜೂನ್‌ 15ರಂದು ನಡೆದ ಹಿಂಸಾತ್ಮಕ ಸಂಘರ್ಷದಿಂದಾಗಿ ಎಲ್ಲರ ಗಮನ ಈಗ ಗಾಲ್ವನ್‌ ಕಣಿವೆಯ ಮೇಲೆಯೇ ಇದೆ. ಆದರೆ, ಪಾಂಗಾಂಗ್‌ ಸರೋವರದ ಉತ್ತರ ದಂಡೆಯಲ್ಲಿ ಭಾರತ–ಚೀನಾ ಸೈನಿಕರ ನಡುವೆ ಆರು ವಾರಗಳ ಹಿಂದೆ ಉಂಟಾಗಿರುವ ಬಿಕ್ಕಟ್ಟು ಇನ್ನೂ ಶಮನ ಆಗಿಲ್ಲ.

ಭಾರತೀಯ ಸೇನೆ ಮತ್ತು ಚೀನಾ ಸೇನೆಯ ಅಧಿಕಾರಿಗಳ ನಡುವಣ ಸಭೆಯಲ್ಲಿ ಯಾವುದೇ ಪರಿಹಾರ ಕಂಡುಕೊಳ್ಳುವುದು ಈವರೆಗೆ ಸಾಧ್ಯವಾಗಿಲ್ಲ. ಸರೋವರದ ದಂಡೆಯ ‘ಫಿಂಗರ್‌ 4’ ಪ್ರದೇಶದಲ್ಲಿ ಚೀನಾ ಸೈನಿಕರು ಬಂಕರ್‌ ನಿರ್ಮಿಸಿದ್ದಾರೆ. ಬೇರೆ ಸೌಕರ್ಯಗಳನ್ನೂ ಅವರು ನಿರ್ಮಿಸಿಕೊಂಡಿದ್ದಾರೆ. ಈ ಪ್ರದೇಶದಲ್ಲಿ ಮೇ 5ರಂದು ಎರಡೂ ದೇಶಗಳ ಸೈನಿಕರ ನಡುವೆ ಹೊಯ್‌ಕೈಆಗಿತ್ತು.

ಎರಡೂ ದೇಶಗಳ ರಾಜತಾಂತ್ರಿಕ ಅಧಿಕಾರಿಗಳ ನಡುವೆ ಮುಂದಿನ ಕೆಲ ದಿನಗಳಲ್ಲಿ ವಿಡಿಯೊ ಕಾನ್ಫರೆನ್ಸ್‌ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ಈ ಸಭೆಯಲ್ಲಿ ಪಾಂಗಾಂಗ್‌ ಸರೋವರ ಮತ್ತು ಗಾಲ್ವನ್‌ ಕಣಿವೆಯಲ್ಲಿ ಬಿಕ್ಕಟ್ಟು ಶಮನದ ಪ್ರಯತ್ನ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಬಂದೂಕು ಬಳಕೆ ಇಲ್ಲ ನೀತಿಗೆ ತಿಲಾಂಜಲಿ?

ಚೀನಾ ಗಡಿಯಲ್ಲಿನ ಸಂಘರ್ಷದ ಸಂದರ್ಭದಲ್ಲಿ ಬಂದೂಕು ಬಳಕೆ ಇಲ್ಲ ಎಂಬ ನೀತಿಯನ್ನು ಕೈಬಿಡಲು ಭಾರತ ನಿರ್ಧರಿಸಿದೆ ಎಂದು ಸೇನೆಯ ಮೂಲಗಳು ತಿಳಿಸಿವೆ.

ಭಾರತ ಮತ್ತು ಚೀನಾ ನಡುವೆ 1996 ಮತ್ತು 2005ರಲ್ಲಿ ಆಗಿರುವ ಒಪ್ಪಂದಗಳ ಪ್ರಕಾರ, ಗಡಿಯಲ್ಲಿ ಬಂದೂಕು ಮತ್ತು ಸ್ಫೋಟಕ ಬಳಸುವಂತಿಲ್ಲ. ಹಾಗಾಗಿಯೇ, ಜೂನ್‌ 15ರಂದು ನಡೆದ ಸಂಘರ್ಷದ ಸಂದರ್ಭದಲ್ಲಿ ಮುಳ್ಳು ತಂತಿ ಕಟ್ಟಿದ ಮತ್ತು ಮೊಳೆ ಹೊಡೆದ ದೊಣ್ಣೆ ಹಾಗೂ ಕಬ್ಬಿಣದ ರಾಡ್‌ ಮೂಲಕ ಬಡಿದಾಟ ನಡೆದಿತ್ತು.

‘ಇನ್ನು ಮುಂದೆ ನಮ್ಮ ಧೋರಣೆ ಬದಲಾಗಲಿದೆ. ಪರಿಸ್ಥಿತಿಗೆ ಅನುಗುಣವಾಗಿ ನಿರ್ಧಾರ ಕೈಗೊಳ್ಳುವ ಅಧಿಕಾರವನ್ನು ಕಮಾಂಡರ್‌ಗಳಿಗೆ ನೀಡಲಾಗಿದೆ’ ಎಂದು ಸೇನೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಂಸತ್‌ ಸಮಿತಿಗೆ ಮಾಹಿತಿ: ಆಡಳಿತ–ವಿರೋಧ ಪಕ್ಷಗಳ ಜಟಾಪಟಿ

ವಿದೇಶಾಂಗ ವ್ಯವಹಾರಗಳ ಸಂಸದೀಯ ಸಮಿತಿಯ ಸಭೆ ಕರೆದು, ಗಾಲ್ವನ್‌ ಕಣಿವೆಯಲ್ಲಿ ನಡೆದ ಸಂಘರ್ಷದ ಬಗ್ಗೆ ಮಾಹಿತಿ ನಿಡಬೇಕು. ವಿದೇಶಾಂಗ ಕಾರ್ಯದರ್ಶಿ, ರಕ್ಷಣಾ ಕಾರ್ಯದರ್ಶಿ ಮತ್ತುಇತರ ಹಿರಿಯ ಅಧಿಕಾರಿಗಳು ವಿವರಣೆ ಕೊಡಬೇಕು ಎಂದು ಸ್ಥಾಯಿ ಸಮಿತಿಯ ವಿರೋಧ ಪಕ್ಷಗಳ ಸದಸ್ಯರು ಆಗ್ರಹಿಸಿದ್ದಾರೆ.

ಆದರೆ, ಆಡಳಿತ ಪಕ್ಷದ ಸದಸ್ಯರು ಇದನ್ನು ವಿರೋಧಿಸಿದ್ದಾರೆ. ವಿರೋಧ ಪಕ್ಷಗಳ ಸದಸ್ಯರು ರಾಜಕೀಯ ಮಾಡುತ್ತಿದ್ದಾರೆ. ದೇಶವು ಕೋವಿಡ್‌ ವಿರುದ್ಧ ಹೋರಾಡುತ್ತಿರುವ ಈ ಸಂದರ್ಭದಲ್ಲಿ ಸಭೆ ನಡೆಸಲು ಸಾಧ್ಯವಿಲ್ಲ ಎಂದು ಅವರು ಅಭಿ‍ಪ್ರಾಯಪಟ್ಟಿದ್ದಾರೆ.

ಸಭೆ ನಡೆಸಬೇಕು ಎಂದು ಒತ್ತಾಯಿಸಿದವರಲ್ಲಿ ಕಾಂಗ್ರೆಸ್‌ ಸಂಸದ ಪಿ. ಚಿದಂಬರಂ, ಆರ್‌ಎಸ್‌ಪಿ ಸಂಸದ ಎನ್‌.ಕೆ. ಪ್ರೇಮಚಂದ್ರನ್‌ ಸೇರಿದ್ದಾರೆ. ಬಿಜೆಪಿ ಸಂಸದೆ ಮೀನಾಕ್ಷಿ ಲೇಖಿ, ಪೂನಂ ಮಹಾಜನ್‌ ಸಭೆ ನಡೆಸುವುದನ್ನು ವಿರೋಧಿಸಿದ್ದಾರೆ.

ವಿಡಿಯೊ ಕಾನ್ಫರೆನ್ಸ್‌ ಮೂಲಕ ಸಭೆ ನಡೆಸಲು ಸಾಧ್ಯವೇ ಎಂದು ಪರಿಶೀಲಿಸಲು ಲೋಕಸಭಾ ಸ್ಪೀಕರ್‌ ಓಂ ಬಿರ್ಲಾ ಮತ್ತು ರಾಜ್ಯಸಭೆ ಸಭಾಪತಿ ವೆಂಕಯ್ಯ ನಾಯ್ಡು ಅವರು ತಮ್ಮ ಕಾರ್ಯಾಲಯಗಳಿಗೆ ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.