ADVERTISEMENT

ಲಡಾಖ್: ಗೋಗ್ರಾದಿಂದ ಸೇನೆ ವಾಪಸು

ಭಾರತ –ಚೀನಾ ಗಡಿ: ಹಾಟ್‌ ಸ್ಪ್ರಿಂಗ್ಸ್, ಡೆಮ್‌ಚಾಕ್‌, ಡೆಪ್ಸಾಂಗ್‌ ಬಳಿ ಯಥಾಸ್ಥಿತಿ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2021, 20:11 IST
Last Updated 6 ಆಗಸ್ಟ್ 2021, 20:11 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಲಡಾಖ್‌ ಪೂರ್ವ ಭಾಗದ ಗೋಗ್ರಾ ಪೋಸ್ಟ್‌ ಬಳಿ ನಿಯೋಜಿಸಿದ್ದ ಸೇನೆಯನ್ನು ಭಾರತ ಮತ್ತು ಚೀನಾ ಮೂಲಸ್ಥಾನಕ್ಕೆ ವಾಪಸು ಕರೆಸಿಕೊಂಡಿವೆ. ಉಳಿದಂತೆ ವಾಸ್ತವ ಗಡಿರೇಖೆ (ಎಲ್ಎಸಿ) ಉದ್ದಕ್ಕೂ ಅನಿಶ್ಚಿತ ಸ್ಥಿತಿಯು ಮುಂದುವರಿದಿದೆ.

ಪರಿಸ್ಥಿತಿಯನ್ನು ತಿಳಿಗೊಳಿಸಲು ಉಭಯ ದೇಶಗಳ ಸೇನೆಗಳ ನಡುವೆ ನಡೆದಿದ್ದ ವಿವಿಧ ಹಂತದ ಮಾತುಕತೆ ಫಲಪ್ರದವಾಗದ ಕಾರಣ, ಗಡಿಯಲ್ಲಿ ನಿಯೋಜಿಸಿರುವ ಸೇನೆ ವಾಪಸಾತಿ ಕುರಿತು ಇನ್ನೂ ಒಪ್ಪಂದಕ್ಕೆ ಬರಲಾಗಿಲ್ಲ. ಈ ಹಿನ್ನೆಲೆಯಲ್ಲಿ ಗಡಿ ರೇಖೆಗೆ ಹೊಂದಿಕೊಂಡಿರುವ ಹಾಟ್‌ ಸ್ಪ್ರಿಂಗ್ಸ್, ಡೆಮ್‌ಚಾಕ್‌, ಡೆಪ್ಸಾಂಗ್‌ ಬಳಿ ಇನ್ನೂ ಸೇನೆ ಬೀಡುಬಿಟ್ಟಿದ್ದು, ಯಥಾಸ್ಥಿತಿಯೇ ಉಳಿದಿದೆ.

ಗೋಗ್ರಾ ಪೋಸ್ಟ್ ಬಳಿ ಬೀಡುಬಿಟ್ಟಿದ್ದ ಭಾರತೀಯ ಸೇನೆ ಮತ್ತು ಚೀನಾದ ಪೀಪಲ್ಸ್ ಲಿಬರೇಷನ್‌ ಆರ್ಮಿ (ಪಿಎಲ್‌ಎ) ತುಕಡಿಗಳು, ಆಯಾ ದೇಶಗಳ ಮೂಲಸ್ಥಾನಕ್ಕೆ ಮರಳಿವೆ. ಇದರಿಂದಾಗಿ ಅಲ್ಲಿ ಉಭಯ ಸೇನೆಗಳ ಮುಖಾಮುಖಿ ಸದ್ಯಕ್ಕೆ ಅಂತ್ಯಗೊಂಡಿದೆ.

ADVERTISEMENT

ಪಾಂಗಾಂಗ್ ಸರೋವರ ಭಾಗದಲ್ಲಿ ನಿಯೋಜಿಸಲಾಗಿದ್ದ ಸೇನೆ ತುಕಡಿಗಳು ಫೆಬ್ರುವರಿ 10 ಮತ್ತು 21ರ ನಡುವೆ ಮರಳಿದ್ದವು. ಅದರ ಆರು ತಿಂಗಳ ತರುವಾಯ ಈಗ ಗೋಗ್ರಾ ಪೋಸ್ಟ್‌ ಬಳಿಯಿಂದ ಸೇನಾ ತುಕಡಿಗಳು ತಮ್ಮ ಮೂಲಸ್ಥಾನಕ್ಕೆ ಮರಳಿವೆ.

ಭಾರತೀಯ ಸೇನೆ ಮತ್ತು ಪಿಎಲ್‌ಎ ತುಕಡಿಗಳು ಆಯಾ ಭಾಗದಲ್ಲಿ ಹಾಕಿಕೊಂಡಿದ್ದ ತಾತ್ಕಾಲಿಕ ಶೆಡ್, ನಿರ್ಮಾಣಗಳನ್ನು ಕಳೆದ ಎರಡು ದಿನಗಳಲ್ಲಿ ತೆರವುಗೊಳಿಸಿದ್ದವು ಎಂದು ರಕ್ಷಣಾ ಮತ್ತು ವಿದೇಶಾಂಗ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿವೆ. ಉಭಯ ದೇಶಗಳ ನಡುವೆ ಗಡಿಯಲ್ಲಿ ಅನಿಶ್ಚಿತತೆ ಶುರುವಾದ ಬಳಿಕ ಏಪ್ರಿಲ್‌ 2020ರಿಂದ ಇಲ್ಲಿ ಉದ್ವಿಗ್ನತೆ ಪರಿಸ್ಥಿತಿ ಇತ್ತು.

ಉಭಯ ದೇಶಗಳ ಸೇನೆಗಳ ವಾಪಸಾತಿ ಬಳಿಕ ಗೋಗ್ರಾ ಪೋಸ್ಟ್‌ ಬಳಿ ಪರಿಸ್ಥಿತಿಯು ಏಪ್ರಿಲ್‌ 2020ಕ್ಕೆ ಮೊದಲಿನ ಹಂತಕ್ಕೆ ತಲುಪಿದೆ ಎಂದು ರಾಜಧಾನಿಯಲ್ಲಿ ನೀಡಲಾದ ಹೇಳಿಕೆಯಲ್ಲಿ ಸರ್ಕಾರ ತಿಳಿಸಿದೆ.

ಗೋಗ್ರಾ ಪೋಸ್ಟ್‌ ಬಳಿಯಿಂದ ಸೇನೆ ವಾಪಸಾತಿ ನಂತರ, ಅಲ್ಲಿನ ಸ್ಥಿತಿಯನ್ನು ಬದಲಿಸುವ ಯಾವುದೇ ಪ್ರಯತ್ನಗಳು ನಡೆಯದಂತೆ ಉಭಯ ದೇಶಗಳು ಕಟ್ಟುನಿಟ್ಟಾಗಿ ಗಮನಹರಿಸಲಿವೆ ಎಂದು ಎಂದು ಹೇಳಿಕೆಯು
ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.