ADVERTISEMENT

ಭಾರತ, ಚೀನಾ ಮಿಲಿಟರಿ ಕಮಾಂಡರ್‌ಗಳ ಮಾತುಕತೆ ಮತ್ತೊಮ್ಮೆ

​ಪ್ರಜಾವಾಣಿ ವಾರ್ತೆ
Published 25 ಜುಲೈ 2020, 5:57 IST
Last Updated 25 ಜುಲೈ 2020, 5:57 IST
   

ನವದೆಹಲಿ: ಪೂರ್ವ ಲಡಾಖ್‌ನ ನೈಜ ನಿಯಂತ್ರಣ ರೇಖೆಯಲ್ಲಿ (ಎಲ್‌ಎಸಿ)ಉದ್ವಿಗ್ನತೆ ಕಡಿಮೆ ಮಾಡಲು ಮತ್ತು ಮಿಲಿಟರಿ ತುಕಡಿಗಳನ್ನು ಪರಸ್ಪರ ಹಿಂದಕ್ಕೆ ಕರೆಸಿಕೊಳ್ಳುವ ಒಪ್ಪಂದದ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಚರ್ಚಿಸಲು ಭಾರತ ಮತ್ತು ಚೀನಾ ದೇಶಗಳ ಸೇನೆಯ ಉನ್ನತ ಕಮಾಂಡರ್‌ಗಳು ಮತ್ತೊಮ್ಮೆ ಮಾತುಕತೆ ನಡೆಸಲಿದ್ದಾರೆ.

ಉದ್ವಿಗ್ನತೆ ಶಮನಗೊಳಿಸುವ ಸಂಬಂಧಭಾರತ ಮತ್ತು ಚೀನಾದ ರಾಜತಾಂತ್ರಿಕ ಅಧಿಕಾರಿಗಳು ಶುಕ್ರವಾರ ಮತ್ತೊಂದು ಸುತ್ತಿನ ವಿಡಿಯೊ ಕಾನ್ಫರೆನ್ಸ್ ನಡೆಸಿದರು.ಪಾಂಗೊಂಗ್ ತ್ಸೊ ಸರೋವರದ ಉತ್ತರ ದಂಡೆ ಸೇರಿದಂತೆ ಹಲವೆಡೆ ಚೀನಾ ಸೇನೆಯ ತುಕಡಿಗಳು ಒಪ್ಪಂದದಂತೆ ಹಿಂದಕ್ಕೆ ಸರಿದಿಲ್ಲ ಎಂಬ ಬಗ್ಗೆ ಭಾರತವು ಆಕ್ಷೇಪಿಸಿದೆ.

ಕಳೆದ ಕೆಲ ವಾರಗಳಿಂದಎಲ್‌ಎಸಿಆಸುಪಾಸಿನಲ್ಲಿ ಚೀನಾ ಗಣನೀಯ ಪ್ರಮಾಣದಲ್ಲಿ ಸೇನಾ ತುಕಡಿಗಳನ್ನು ನಿಯೋಜಿಸಿದೆ. ಈ ನಿಯೋಜನೆಯ ಗಾತ್ರ ಕಡಿಮೆ ಮಾಡುವ ಯಾವುದೇ ಲಕ್ಷಣ ಈವರೆಗೆ ಗೋಚರಿಸಿಲ್ಲ. ಈ ಅಂಶವನ್ನು ಭಾರತ ಗಂಭೀರವಾಗಿ ಪರಿಗಣಿಸಿದೆ.

ADVERTISEMENT

ಎರಡೂ ಸೇನೆಗಳು ಮುಖಾಮುಖಿಯಾಗಿ, ಉದ್ವಿಗ್ನತೆ ತಲೆದೋರಿರುವ ಸ್ಥಳಗಳ ಜೊತೆಗೆ ಒಳ ಪ್ರದೇಶಗಳಲ್ಲಿ ನಿಯೋಜಿಸಿರುವ ದೊಡ್ಡ ಸಂಖ್ಯೆಯ ಯೋಧರನ್ನೂ ಚೀನಾ ಸೇನೆ ಹಿಂದಕ್ಕೆ ಕರೆಸಿಕೊಳ್ಳಬೇಕು ಎಂದು ಭಾರತ ಸರ್ಕಾರ ಆಗ್ರಹಿಸಿದೆ.

ಭಾರತ-ಚೀನಾ ಗಡಿ ವಿದ್ಯಮಾನಿಗಳಿಗೆ ಸಂಬಂಧಿಸಿದ ಕಾರ್ಯಚಟುವಟಿಕೆಗಳನ್ನು ಗಮನಿಸಲೆಂದು 2013ರಿಂದ ಹಲವು ಬಾರಿ ಸಮಾಲೋಚನೆಗಳು ನಡೆದಿವೆ. ಶುಕ್ರವಾರ ಈ ಸಮಿತಿಯ 17ನೇ ಸಭೆ ನಡೆಯಿತು.

ಭಾರತದ ಪರವಾಗಿ ವಿದೇಶಾಂಗ ವ್ಯವಹಾರಗಳ ಇಲಾಖೆಯಲ್ಲಿ ಪೂರ್ವ ಏಷ್ಯಾ ವಿಭಾಗದ ಮುಖ್ಯಸ್ಥ ನವೀನ್ ಶ್ರೀವತ್ಸ ಪಾಲ್ಗೊಂಡಿದ್ದರು. ಚೀನಾ ಪರವಾಗಿ ಗಡಿ ಮತ್ತು ಸಾಗರ ವಿದ್ಯಮಾನಗಳ ಪ್ರಧಾನ ನಿರ್ದೇಶಕ ಹಾಂಗ್ ಲಿಯಾಂಗ್ ಪಾಲ್ಗೊಂಡಿದ್ದರು.

ಎರಡೂ ದೇಶಗಳ ಹಿರಿಯ ಮಿಲಿಟರಿ ಕಮಾಂಡರ್‌ಗಳ ಸಭೆ ನಡೆಸಿ, ಸೇನಾ ತುಕಡಿಗಳನ್ನು ಹಿಂದಕ್ಕೆ ಕರೆಸಿಕೊಳ್ಳುವ ಮತ್ತು ಶಾಂತಿ ಸ್ಥಾಪನೆಯ ಬಗ್ಗೆ ಸಭೆಯಲ್ಲಿ ಭಾರತ ಮತ್ತು ಚೀನಾ ದೇಶಗಳು ಒಪ್ಪಿಕೊಂಡವು.

ಭಾರತೀಯ ಸೇನೆ 14ನೇ ಕಾರ್ಪ್ಸ್‌ನ ಜನರಲ್ ಆಫೀಸರ್ ಕಮಾಂಡಿಂಗ್ ಲೆಫ್ಟಿನೆಂಟ್ ಜನರಲ್ ಹರಿಂದರ್ ಸಿಂಗ್ ಮತ್ತು ಚೀನಾ ಸೇನೆಯ ಮೇಜರ್ ಜನರಲ್ ಲ್ಯು ಲಿನ್ ಅವರೊಂದಿಗೆ ಜೂನ್ 6, ಜೂನ್ 22, ಜೂನ್ 30 ಮತ್ತು ಜುಲೈ 14ರಂದು ಸುದೀರ್ಘ ಸಭೆಗಳನ್ನು ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.