‘ವಾಯ್ಸ್ ಆಫ್ ಗ್ಲೋಬಲ್ ಸೌತ್’ ಶೃಂಗಸಭೆಯ ಎರಡನೇ ಆವೃತ್ತಿಯನ್ನು ವರ್ಚುವಲ್ ಮೂಲಕ ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಮಾತನಾಡಿದರು
–ಪಿಟಿಐ ಚಿತ್ರ
ನವದೆಹಲಿ: ‘ಪಶ್ಚಿಮ ಏಷ್ಯಾದಲ್ಲಿನ ಬೆಳವಣಿಗೆಗಳಿಂದಾಗಿ ಜಗತ್ತು ಹೊಸ ಸವಾಲುಗಳನ್ನು ಎದುರಿಸುವಂತಾಗಿದೆ. ಇಸ್ರೇಲ್ ಹಾಗೂ ಹಮಾಸ್ ನಡುವಿನ ಸಂಘರ್ಷದಿಂದ ಉದ್ಭವಿಸಿರುವ ಬಿಕ್ಕಟ್ಟನ್ನು ಮಾತುಕತೆ ಮತ್ತು ರಾಜತಾಂತ್ರಿಕ ಮಾರ್ಗದ ಮೂಲಕ ಬಗೆಹರಿಸಿಕೊಳ್ಳಬೇಕು ’ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದ್ದಾರೆ.
‘ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ಹಮಾಸ್ ನಡೆಸಿದ್ದ ಬರ್ಬರ ದಾಳಿಯನ್ನು ಭಾರತ ಖಂಡಿಸಿತ್ತು. ಅದೇ ರೀತಿ, ಈ ಸಂಘರ್ಷದಲ್ಲಿ ನಾಗರಿಕರು ಸಾಯುತ್ತಿರುವುದನ್ನು ಸಹ ಭಾರತ ಬಲವಾಗಿ ಖಂಡಿಸುತ್ತದೆ’ ಎಂದೂ ಹೇಳಿದರು.
ಭೌಗೋಳಿಕವಾಗಿ ದಕ್ಷಿಣದಲ್ಲಿರುವ ದೇಶಗಳ ಶೃಂಗಸಭೆ ‘ವಾಯ್ಸ್ ಆಫ್ ಗ್ಲೋಬಲ್ ಸೌತ್’ನ ಎರಡನೇ ಆವೃತ್ತಿಯನ್ನು ವರ್ಚುವಲ್ ಮೂಲಕ ಉದ್ದೇಶಿಸಿ ಅವರು ಮಾತನಾಡಿದರು.
‘ಇಸ್ರೇಲ್–ಹಮಾಸ್ ಬಿಕ್ಕಟ್ಟು ಸೇರಿದಂತೆ ಜಾಗತಿಕ ವಿದ್ಯಮಾನಗಳ ಕುರಿತು ಹಾಗೂ ವಿಶ್ವದ ಒಳಿತಿಗಾಗಿ ದಕ್ಷಿಣದ ದೇಶಗಳು ಒಂದೇ ಧ್ವನಿಯಲ್ಲಿ ಮಾತನಾಡುವುದು ಅಗತ್ಯ. ಮಾತುಕತೆ–ರಾಜತಾಂತ್ರಿಕ ಮಾರ್ಗವಲ್ಲದೇ, ಇಸ್ರೇಲ್ ಮತ್ತು ಹಮಾಸ್ ಸಂಘರ್ಷದಿಂದಾಗಿ ಉದ್ಭವಿಸಿರುವ ಪರಿಸ್ಥಿತಿಯ ವೇಳೆ ಪ್ರತಿಯೊಬ್ಬರು ಸಂಯಮದಿಂದ ವರ್ತಿಸಬೇಕು ಎಂಬುದಾಗಿ ಭಾರತ ಪ್ರತಿಪಾದಿಸುತ್ತಲೇ ಬಂದಿದೆ’ ಎಂದು ವಿವರಿಸಿದರು.
‘ವಾಯ್ಸ್ ಆಫ್ ಗ್ಲೋಬಲ್ ಸೌತ್’ ಎಂಬುದು ವಿಶಿಷ್ಟ ವೇದಿಕೆ. ಇದು 21ನೇ ಶತಮಾನದ ಬದಲಾದ ವಿಶ್ವವನ್ನು ಪ್ರತಿಬಿಂಬಿಸುತ್ತದೆ. ಸಮಾಲೋಚನೆ, ಸಂವಹನ, ಸಹಕಾರ, ಸೃಜನಶೀಲತೆ ಹಾಗೂ ಸಾಮರ್ಥ್ಯ ವೃದ್ಧಿ ಎಂಬ ಚೌಕಟ್ಟನಡಿ ಎಲ್ಲ ಸದಸ್ಯ ರಾಷ್ಟ್ರಗಳು ಕಾರ್ಯ ನಿರ್ವಹಿಸಬೇಕು’ ಎಂದು ಮೋದಿ ಹೇಳಿದರು.
ಭಾರತವು ಜಿ20 ಅಧ್ಯಕ್ಷ ಸ್ಥಾನ ವಹಿಸಿಕೊಂಡ ನಂತರದ ಸಾಧನೆಗಳನ್ನು ಪಟ್ಟಿ ಮಾಡಿದ ಮೋದಿ, ಹವಾಮಾನ ಬದಲಾವಣೆ ಪರಿಣಾಮಗಳನ್ನು ತಡೆಯುವುದಕ್ಕೆ ಸಂಬಂಧಿಸಿದ ಹಣಕಾಸು ಮತ್ತು ತಂತ್ರಜ್ಞಾನ ನೆರವಿನ ಗಂಭೀರತೆಯನ್ನು ಜಿ20 ಶೃಂಗಸಭೆಯಲ್ಲಿ ಭಾರತ ಮನವರಿಕೆ ಮಾಡಿಕೊಟ್ಟಿತು ಎಂದು ಹೇಳಿದರು.
ಆದರೆ, ನೂತನ ತಂತ್ರಜ್ಞಾನವು ವಿಶ್ವದ ಉತ್ತರ ಮತ್ತು ದಕ್ಷಿಣ ರಾಷ್ಟ್ರಗಳ ನಡುವಿನ ಅಂತರವನ್ನು ಮತ್ತಷ್ಟು ಹೆಚ್ಚಿಸುವಂತಿರಬಾರದು ಎಂಬುದೇ ಭಾರತದ ನಿಲುವಾಗಿದೆ’ ಎಂದು ಮೋದಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.