ADVERTISEMENT

ಕೋವಿಡ್‌ ಲಸಿಕೆಯಿಂದ ಸಾವು: ಮೊದಲ ಸಾವು ದೃಢಪಡಿಸಿದ ಸರ್ಕಾರ

ಪಿಟಿಐ
Published 15 ಜೂನ್ 2021, 12:33 IST
Last Updated 15 ಜೂನ್ 2021, 12:33 IST
ಕೋವಿಡ್‌ ಪರೀಕ್ಷೆ (ಸಾಂದರ್ಭಿಕ ಚಿತ್ರ)
ಕೋವಿಡ್‌ ಪರೀಕ್ಷೆ (ಸಾಂದರ್ಭಿಕ ಚಿತ್ರ)   

ನವದೆಹಲಿ: ಕೋವಿಡ್‌ ಲಸಿಕೆಯ ಅಡ್ಡ ಪರಿಣಾಮಗಳ ಕುರಿತು ಅಧ್ಯಯನ ನಡೆಸಲು ಸರ್ಕಾರ ನೇಮಿಸಿರುವ ಸಮಿತಿ, ದೇಶದಲ್ಲಿ ಕೋವಿಡ್‌–19 ಲಸಿಕೆಯ ಅಡ್ಡ ಪರಿಣಾಮದಿಂದ ಸಾವಿಗೀಡಾಗಿರುವ ಮೊದಲ ಪ್ರಕರಣವೊಂದನ್ನು ದೃಢಪಡಿಸಿದೆ.

ಕೋವಿಡ್‌ ಲಸಿಕೆ ಹಾಕಿಸಿಕೊಂಡ ನಂತರ ತೀವ್ರ ಅಲರ್ಜಿಯಿಂದ ಬಳಲುತ್ತಿದ್ದ 31 ಪ್ರಕರಣಗಳನ್ನು ‘ನ್ಯಾಷನಲ್ ಸೀರಿಯಸ್ ಅಡ್ವರ್ಸ್‌ ಈವೆಂಟ್ಸ್‌ ಫಾಲೋಯಿಂಗ್ ಇಮ್ಮುನೈಸೇಷನ್’ (ಎಇಎಫ್‌ಐ) ಸಮಿತಿ ಮೌಲ್ಯಮಾಪನ ಮಾಡಿ ವರದಿ ನೀಡಿದೆ.

ವರದಿ ಪ್ರಕಾರ, 68 ವರ್ಷದ ಹಿರಿಯರೊಬ್ಬರು 2021ರ ಮಾರ್ಚ್‌ 8ರಂದು, ಲಸಿಕೆ ಹಾಕಿಸಿಕೊಂಡ ನಂತರ ತೀವ್ರ ಅಲರ್ಜಿಯಿಂದ ಸಾವಿಗೀಡಾಗಿದ್ದಾರೆ. ಇದನ್ನು ಲಸಿಕೆಯ ಪಡೆದ ನಂತರ ತೀವ್ರ ಅಲರ್ಜಿಯಿಂದ ಉಂಟಾದ ಮೊದಲ ಸಾವು ಎಂದು ಸಮಿತಿ ದೃಢಪಡಿಸಿದೆ.

ADVERTISEMENT

‘ಕೋವಿಡ್‌ –19 ಲಸಿಕೆ ವಿಷಯಕ್ಕೆ ಸಂಬಂಧಿಸಿದಂತೆ, ಲಸಿಕೆ ಪಡೆದು ತೀವ್ರ ಅಲರ್ಜಿಗೊಳಗಾಗಿ (ಅನಾಫಿಲಕ್ಸಿಸ್‌) ಸಾವಿಗೀಡಾಗಿರುವ ಮೊದಲ ಪ್ರಕರಣ ಇದು. ಲಸಿಕೆ ಹಾಕಿಸಿಕೊಂಡವರು, ಲಸಿಕಾ ಕೇಂದ್ರದಲ್ಲಿ 30 ನಿಮಿಷಗಳ ಕಾಲ ಕಾಯಬೇಕು ಎಂಬುದನ್ನು ಈ ಪ್ರಕರಣ ಒತ್ತಿ ಹೇಳುತ್ತಿದೆ. ಈ ಅವಧಿಯಲ್ಲಿ ತೀವ್ರ ಅಲರ್ಜಿ ಕಾಣಿಸಿಕೊಳ್ಳುವ ಸಾಧ್ಯತೆ ಇದ್ದು, ಅದಕ್ಕೆ ತ್ವರಿತಗತಿಯಲ್ಲಿ ಚಿಕಿತ್ಸೆ ನೀಡಿದರೆ ಸಾವು ಸಂಭವಿಸುವುದನ್ನು ತಪ್ಪಿಸಬಹುದು‘ ಎಂದು ರಾಷ್ಟ್ರೀಯ ಎಇಎಫ್‌ಐ ಸಮಿತಿ ಅಧ್ಯಕ್ಷ ಡಾ. ಕೆ. ಅರೋರಾ ತಿಳಿಸಿದ್ದಾರೆ.

ಈ ಸಮಿತಿಯು ಇಂಥ ಐದು ಪ್ರಕರಣಗಳನ್ನು ಫೆಬ್ರುವರಿ 5ರಂದು, ಎಂಟು ಪ್ರಕರಣಗಳನ್ನು ಮಾರ್ಚ್‌ 9 ರಂದು ಮತ್ತು ಮಾರ್ಚ್‌ 31ರಂದು 18 ಪ್ರಕರಣಗಳನ್ನು ವಿಶ್ಲೇಷಣೆಗೆ ಒಳಪಡಿಸಿದೆ. ನಂತರದಲ್ಲಿ ಲಭ್ಯವಾದ ದತ್ತಾಂಶದ ಪ್ರಕಾರ, ಏಪ್ರಿಲ್ ಮೊದಲ ವಾರದಲ್ಲಿ ಲಸಿಕೆ ಪಡೆದು ತೀವ್ರ ಅಲರ್ಜಿಯಿಂದ ಸಾವಿಗೀಡಾದವರ ಪ್ರಮಾಣವು ಹತ್ತು ಲಕ್ಷಕ್ಕೆ ಇಬ್ಬರಂತೆ ಇದೆ. ನಾಲ್ವರು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಗಂಭೀರ ಪ್ರತಿಕೂಲ ಘಟನೆಗಳೆಂದಿಂದಾದ ಸಾವುಗಳನ್ನು ಮತ್ತು ಆಸ್ಪತ್ರೆಗೆ ದಾಖಲಾಗುವ ಘಟನೆಗಳನ್ನೆಲ್ಲ ಲಸಿಕೆಯಿಂದಲೇ ಸಾವು ಸಂಭವಿಸಿವೆ ಎಂದು ಸೂಚಿಸುವುದಿಲ್ಲ‘ ಎಂದು ಸಮಿತಿ ಹೇಳಿದೆ.

ಪ್ರಕರಣವನ್ನು ಸರಿಯಾಗಿ ಪರಿಶೀಲಿಸಿ, ಘಟನೆಯನ್ನು ಸರಿಯಾಗಿ ಮೌಲ್ಯಮಾಪನ ಮಾಡುವುದರಿಂದ ಲಸಿಕೆ ಮತ್ತು ಘಟನೆಯ ನಡುವೆ ಯಾವುದಾದರೂ ಸಂಬಂಧವಿದೆಯೇ ಎಂದು ಅರ್ಥ ಮಾಡಿಕೊಳ್ಳಲು ಸಹಾಯವಾಗುತ್ತದೆ ಎಂದು ಸಮಿತಿಯ ವರದಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.