ನವದೆಹಲಿ: ‘ಅಹಮದಾಬಾದ್ ವಿಮಾನ ದುರಂತದ ಬೆನ್ನಲ್ಲೇ, ಸುರಕ್ಷತಾ ತಪಾಸಣೆಯ ದೃಷ್ಟಿಯಿಂದ ಬೋಯಿಂಗ್ ಕಂಪನಿಯ ಡ್ರೀಮ್‌ಲೈನರ್ ಸರಣಿಯ ವಿಮಾನಗಳ ಹಾರಾಟವನ್ನು ಏರ್ ಇಂಡಿಯಾ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಿದೆ’ ಎಂದು ಎನ್‌ಡಿಟಿವಿ ಶುಕ್ರವಾರ ವರದಿ ಮಾಡಿದೆ.
ಆದರೆ, ಈ ಬಗ್ಗೆ ನಾಗರಿಕ ವಿಮಾನಯಾನ ಸಚಿವಾಲಯವಾಗಲಿ, ಬೋಯಿಂಗ್ ಕಂಪನಿ ಅಥವಾ ಏರ್ ಇಂಡಿಯಾ ಆಗಲಿ ತಕ್ಷಣದ ಪ್ರತಿಕ್ರಿಯೆ ನೀಡಿಲ್ಲ. ‘ತಾತ್ಕಾಲಿಕವಾಗಿ ಬೋಯಿಂಗ್ ಹಾರಾಟ ನಿಲ್ಲಿಸುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಯಾವುದೇ ಸಂವಹನ ನಡೆದಿಲ್ಲ, ಇದುವರೆಗೆ ಯಾವುದೇ ಸೂಚನೆಯೂ ಬಂದಿಲ್ಲ’ ಎಂದು ಏರ್ ಇಂಡಿಯಾ ಮೂಲ ತಿಳಿಸಿದೆ.
‘ವಿಮಾನ ಟೇಕಾಫ್ ಆಗುವ ವೇಳೆ ಆಗಸಕ್ಕೆ ಚಿಮ್ಮಲು ಬೇಕಿರುವ ನೂಕುಬಲವನ್ನು ಬೋಯಿಂಗ್ ಡ್ರೀಮ್‌ಲೈನರ್ 787–8 ಕಳೆದುಕೊಂಡಿತ್ತೇ ಅಥವಾ ಎಂಜಿನ್ ಕಾರ್ಯಕ್ಷಮತೆ ಕಡಿಮೆಯಾಗಿತ್ತೇ’ ಎನ್ನುವುದನ್ನು ಕೇಂದ್ರೀಕರಿಸಿ ತನಿಖೆ ನಡೆಯುತ್ತಿದೆ’ ಎಂದು ವಾಲ್‌ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.
ಬ್ಲ್ಯಾಕ್ ಬಾಕ್ಸ್ ಪತ್ತೆ: ದುರಂತಕ್ಕೆ ಕಾರಣ ಏನು ಎಂಬುದನ್ನು ತಿಳಿಯುವಲ್ಲಿ ಪ್ರಮುಖ ಪಾತ್ರ ವಹಿಸುವ ವಿಮಾನದ ಬ್ಲ್ಯಾಕ್ ಬಾಕ್ಸ್ ಶುಕ್ರವಾರ ದುರಂತ ನಡೆದ ಸ್ಥಳದಲ್ಲಿ ಪತ್ತೆಯಾಗಿದೆ. ವಿಮಾನದಲ್ಲಿ ಎರಡು ಬ್ಲ್ಯಾಕ್ ಬಾಕ್ಸ್‌ಗಳಿದ್ದವು. ಅದರಲ್ಲಿ ಒಂದು ಪತ್ತೆಯಾಗಿದೆ. ಆದರೆ, ಪತ್ತೆಯಾಗಿರುವ ಬ್ಲ್ಯಾಕ್‌ಬಾಕ್ಸ್ ವಿಮಾನದ ಫ್ಲೈಟ್ ಡೇಟಾ ರೆಕಾರ್ಡರ್ ಅಥವಾ ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್‌ನಲ್ಲಿ ಯಾವುದು ಎಂಬುದು ಗೊತ್ತಾಗಿಲ್ಲ ಎಂದು ವಿಮಾನ ಪತನಗೊಂಡ ಸ್ಥಳದಲ್ಲಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದ ಪೊಲೀಸ್ ಮೂಲಗಳು ಹೇಳಿವೆ.
‘ಪ್ರಯಾಣಿಕರನ್ನೂ ಸೇರಿಸಿ ವಿಮಾನವು ಅಧಿಕ ಭಾರವನ್ನು ಹೊಂದಿತ್ತು ಮತ್ತು ಅದರಲ್ಲಿ ನಿರ್ದಿಷ್ಟ ಪ್ರಮಾಣಕ್ಕಿಂತ ಹೆಚ್ಚಿನ ಇಂಧನ ಇತ್ತು ಎನ್ನುವ ಸಾಧ್ಯತೆ ತೀರಾ ಕಡಿಮೆ. ಈ ವಿಮಾನವು ಒಂದೇ ಎಂಜಿನ್ ಬಲದಲ್ಲಿ ಹಾರಾಟ ನಡೆಸುವ ಸಾಮರ್ಥ್ಯ ಹೊಂದಿದೆ. ಎರಡೂ ಎಂಜಿನ್‌ಗಳ ವೈಫಲ್ಯದಿಂದ ದುರಂತ ಸಂಭವಿಸಿರಬಹುದು’ ಎಂದು ಪೋರ್ಟ್‌ಮೌತ್ ವಿಶ್ವವಿದ್ಯಾಲಯದ ಇಂಧನ ತಂತ್ರಜ್ಞ ಜಾಸನ್ ನೈಟ್ ಅಭಿಪ್ರಾಯಪಟ್ಟಿದ್ದಾರೆ.
14 ವರ್ಷದಲ್ಲಿ ಮೊದಲ ದುರಂತ
ಬೋಯಿಂಗ್ ಕಂಪನಿಯ 787–8 ಮತ್ತು 787–9 ಮಾದರಿ ಸೇರಿ ‘ಡ್ರೀಮ್‌ಲೈನರ್’ ಸರಣಿಯ 30 ವಿಮಾನಗಳನ್ನು ಏರ್ ಇಂಡಿಯಾ ಹೊಂದಿದೆ. 2011ರಿಂದ ಡ್ರೀಮ್‌ಲೈನರ್ ಸರಣಿಯ ವಿಮಾನಗಳು ಕಾರ್ಯಾಚರಣೆ ಆರಂಭಿಸಿದ್ದು, ನಂತರದ 14 ವರ್ಷಗಳ ಅವಧಿಯಲ್ಲಿ ನಡೆದಿರುವ ಮೊದಲ ದುರಂತ ಇದಾಗಿದೆ.
ದುರಂತಕ್ಕೆ ಒಳಗಾದ ಬೋಯಿಂಗ್ 787–8 ವಿಮಾನವು 11.5 ವರ್ಷಗಳಷ್ಟು ಹಳೆಯದು. ಇದು 2014ರ ಜನವರಿ 28ರಂದು ಮೊದಲ ಹಾರಾಟ ನಡೆಸಿತ್ತು. ಇದುವರೆಗೆ 41 ಸಾವಿರ ಗಂಟೆಗಳ ಹಾರಾಟ ನಡೆಸಿದ್ದು, 8 ಸಾವಿರಕ್ಕಿಂತ ಹೆಚ್ಚಿನ ಟೇಕಾಫ್ ಮತ್ತು ಲ್ಯಾಡಿಂಗ್ ಮಾಡಿದೆ. ಈ ವಿಮಾನವು ಬಿಸಿನೆಸ್ ಕ್ಲಾಸ್‌ನ 18 ಸೀಟ್‌ಗಳು ಹಾಗೂ 238 ಎಕಾನಮಿ ಕ್ಲಾಸ್ ಸೀಟ್‌ಗಳನ್ನು ಹೊಂದಿದೆ.
ಬೋಯಿಂಗ್ 787 ಮಾದರಿಯ, ಸರಾಸರಿ 7.7 ವರ್ಷಗಳಷ್ಟು ಹಳೆಯದಾಗಿರುವ 1,148 ವಿಮಾನಗಳು ಸದ್ಯ ಪ್ರಪಂಚದಾದ್ಯಂತ ಕಾರ್ಯಾಚರಣೆ ನಡೆಸುತ್ತಿವೆ ಎಂದು ವಿಮಾನಯಾನ ವಿಶ್ಲೇಷಣಾ ಸಂಸ್ಥೆ ’ಸಿರಮ್’ ಹೇಳಿದೆ. ಬೋಯಿಂಗ್ ವೆಬ್‌ಸೈಟ್‌ನಲ್ಲಿರುವ ಅಂಕಿ ಅಂಶದಂತೆ ಡ್ರಿಮ್‌ಲೈನರ್ ಸರಣಿಯ ವಿಮಾನಗಳು ಮೂರು ಮಾದರಿಗಳಲ್ಲಿವೆ. 787–8, 787–9 ಮತ್ತು 787–10. ಈ ವಿಮಾನದ ಉದ್ದ 57 ಮೀಟರ್, ಎತ್ತರ 17 ಮೀಟರ್ ಹಾಗೂ ರೆಕ್ಕೆಗಳು 60 ಮೀಟರ್ ಉದ್ದವನ್ನು ಹೊಂದಿವೆ.
ಭಾರತದಲ್ಲಿ ಇಂಡಿಯನ್ ಏರ್‌ಲೈನ್ಸ್ ಮಾತ್ರವಲ್ಲದೆ ಇಂಡಿಗೊ ಕಂಪನಿ ಕೂಡ ಬೋಯಿಂಗ್ ಸರಣಿಯ ವಿಮಾನಗಳ ಕಾರ್ಯಾಚರಣೆ ನಡೆಸುತ್ತಿದೆ. ವಿಸ್ತಾರ ಏರ್‌ಲೈನ್ಸ್ ವಿಲೀನದ ನಂತರ ಕಳೆದ ವರ್ಷ ಜುಲೈನಲ್ಲಿ ಏರ್ ಇಂಡಿಯಾ ಬೋಯಿಂಗ್ 787–9 ಸರಣಿಯ 7 ವಿಮಾನಗಳನ್ನು ಸೇರ್ಪಡೆ ಮಾಡಿಕೊಂಡಿತ್ತು.
ಬ್ಯಾಟರಿ ದೋಷ: 2013ರಲ್ಲಿ ಡ್ರೀಮ್‌ಲೈನರ್ ಸರಣಿಯ ವಿಮಾನವೊಂದರಲ್ಲಿ ಬ್ಯಾಟರಿ ದೋಷ ಕಾಣಿಸಿಕೊಂಡಿದ್ದಾಗ ಏರ್ ಇಂಡಿಯಾ ಈ ಬಗ್ಗೆ ಬೋಯಿಂಗ್ ಕಂಪನಿಗೆ ವರದಿ ಮಾಡಿತ್ತು. ಆ ನಂತರ ಇನ್ನಿತರ ಯಾವುದೇ ತಾಂತ್ರಿಕ ಲೋಪದ ಕುರಿತು ವರದಿ ಮಾಡಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.