ADVERTISEMENT

ದೇಶದಲ್ಲಿ 5 ಲಕ್ಷ ದಾಟಿದ ಕೊರೊನಾ ಸೋಂಕು ಪ್ರಕರಣ

ಶುಕ್ರವಾರದ ಏರಿಕೆ ಗರಿಷ್ಠ: ಗುಣಮುಖ ಪ್ರಮಾಣ ಶೇ 58.24ಕ್ಕೆ ಏರಿಕೆ

ಏಜೆನ್ಸೀಸ್
Published 26 ಜೂನ್ 2020, 21:41 IST
Last Updated 26 ಜೂನ್ 2020, 21:41 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಕೋವಿಡ್‌ ಹರಡುವಿಕೆಯು ವೇಗ ಪಡೆದುಕೊಂಡಿದೆ. ಶುಕ್ರವಾರ ಬೆಳಗ್ಗೆ 8ರ ವರೆಗಿನ 24 ತಾಸುಗಳಲ್ಲಿ 17,296 ಹೊಸ ಪ್ರಕರಣಗಳು ವರದಿಯಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ. ಇದು ಒಂದು ದಿನದ ಗರಿಷ್ಠ ಏರಿಕೆ. ಇದರಿಂದಾಗಿ ಒಟ್ಟು ಪ್ರಕರಣಗಳ ಸಂಖ್ಯೆಯು 4.90 ಲಕ್ಷಕ್ಕೆ ಹೆಚ್ಚಿದೆ.

ದೇಶದಲ್ಲಿ ಸತತ ಏಳನೇ ದಿನವೂ 14 ಸಾವಿರಕ್ಕಿಂತ ಹೆಚ್ಚು ಹೊಸ ಪ್ರಕರಣಗಳು ದೃಢಪಟ್ಟಿವೆ. ಸಾವಿನ ಸಂಖ್ಯೆ 15,301ಕ್ಕೆ ಏರಿದೆ.

ವಿವಿಧ ರಾಜ್ಯಗಳು ನೀಡಿದ ಮಾಹಿತಿ ಪ್ರಕಾರ, ಶುಕ್ರವಾರ ಬೆಳಗ್ಗಿನಿಂದ ರಾತ್ರಿ 8.30ರ ಹೊತ್ತಿಗೆ 13,678 ಹೊಸ ಪ್ರಕರಣಗಳು ವರದಿಯಾಗಿವೆ. ಹಾಗಾಗಿ, ಒಟ್ಟು ಪ್ರಕರಣಗಳ ಸಂಖ್ಯೆಯು 5,04,079ಕ್ಕೆ ಏರಿದೆ.

ADVERTISEMENT

ಹತ್ತು ಪ್ರಮುಖ ನಗರಗಳಿಂದ ಅತಿ ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ. ದೆಹಲಿ, ಚೆನ್ನೈ, ಠಾಣೆ, ಮುಂಬೈ, ಪಾಲ್ಘರ್‌, ಪುಣೆ, ಹೈದರಾಬಾದ್‌, ರಂಗಾರೆಡ್ಡಿ, ಅಹಮದಾಬಾದ್‌ ಮತ್ತು ಫರೀದಾಬಾದ್‌ ಈ ನಗರಗಳು. ಗುರುವಾರದವರೆಗೆ ದೃಢಪಟ್ಟ ಒಟ್ಟು ಪ್ರಕರಣಗಳಲ್ಲಿ ಶೇ 54.47ರಷ್ಟು ಈ ನಗರಗಳಿಂದ ವರದಿಯಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.

ಜೂನ್‌ 1ರಿಂದ 26ರವರೆಗಿನ ಅವಧಿಯಲ್ಲಿ ದೃಢಪಟ್ಟ ಪ್ರಕರಣಗಳ ಸಂಖ್ಯೆ 2,99,866.

ಆಶಾಕಿರಣ: ಕೋವಿಡ್‌ ಬಾಧಿತರು ಗುಣಮುಖರಾಗುತ್ತಿರುವ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಶುಕ್ರವಾರ ಒಂದೇ ದಿನ 13,940 ರೋಗಿಗಳು ರೋಗಮುಕ್ತರಾಗಿದ್ದಾರೆ. ರೋಗ ಮುಕ್ತರಾಗಿರುವವರ ಒಟ್ಟು ಸಂಖ್ಯೆಯು 2,85,636ಕ್ಕೆ ಏರಿದೆ. ಹಾಗಾಗಿ, ಈಗ ದೇಶದಲ್ಲಿ ಬಾಧಿತರ ಸಂಖ್ಯೆ 1,89,463. ಗುಣಮುಖ ಪ್ರಮಾಣವು ಶೇ 58.24ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಪರೀಕ್ಷೆ ಹೆಚ್ಚಳ: ಕೋವಿಡ್‌ ಪರೀಕ್ಷೆ ಜಾಲವನ್ನು ವಿಸ್ತರಿಸುವ ಪ್ರಯತ್ನ ಮುಂದುವರಿದಿದೆ. ಶುಕ್ರವಾರ ಒಂದೇ ದಿನ 24 ಹೊಸ ಪ್ರಯೋಗಾಲಯಗಳನ್ನು ಆರಂಭಿಸಲಾಗಿದೆ. ಹೀಗಾಗಿ, ದೇಶದಲ್ಲೀಗ ಒಟ್ಟು 1,016 ಪ್ರಯೋಗಾಲಯಗಳು ಇವೆ.ಶುಕ್ರವಾರ 2,15,446 ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಈ ವರೆಗೆ ಪರೀಕ್ಷಿಸಲಾದ ಮಾದರಿಗಳ ಸಂಖ್ಯೆ 77.76 ಲಕ್ಷ.

ಅತಿ ಹೆಚ್ಚು ಪ್ರಕರಣಗಳು ವರದಿಯಾಗುತ್ತಿರುವ ಮಹಾರಾಷ್ಟ್ರ, ಗುಜರಾತ್‌ ಮತ್ತು ತೆಲಂಗಾಣಕ್ಕೆ ಕೋವಿಡ್‌ ನಿರ್ವಹಣೆಯಲ್ಲಿನೆರವಾಗಲು ಕೇಂದ್ರದ ತಂಡವನ್ನು ಕಳುಹಿಸಲಾಗಿದೆ.

ರಾಜ್ಯದಲ್ಲಿ 11 ಸಾವಿರ ಸೋಂಕಿತರು

ರಾಜ್ಯದಲ್ಲಿ ಶುಕ್ರವಾರ 445 ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ ಸಂಖ್ಯೆ 11 ಸಾವಿರದ ಗಡಿ (11,005) ದಾಟಿದೆ.

ಕೇವಲ 48 ಗಂಟೆಗಳಲ್ಲಿ 887 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಬೆಂಗಳೂರಿನಲ್ಲಿ 3 ಮಂದಿ ಹಾಗೂ ಬಳ್ಳಾರಿ, ಕಲಬುರ್ಗಿ, ಬೀದರ್, ಬಾಗಲಕೋಟೆ, ಶಿವಮೊಗ್ಗ, ಧಾರವಾಡ, ಕೋಲಾರದಲ್ಲಿ ತಲಾ ಒಬ್ಬ ವ್ಯಕ್ತಿ ಮೃತಪಟ್ಟಿರುವುದು ದೃಢಪಟ್ಟಿದೆ. ಇದರಿಂದಾಗಿ ರಾಜ್ಯದಲ್ಲಿ ಸಾವಿಗೀಡಾದವರ ಸಂಖ್ಯೆ 180ಕ್ಕೆ ಏರಿಕೆಯಾಗಿದೆ. ತೀವ್ರ ನಿಗಾ ಘಟಕಕ್ಕೆ (ಐಸಿಯು) ದಾಖಲಾದ ರೋಗಿಗಳ ಸಂಖ್ಯೆ 178ಕ್ಕೆ ತಲುಪಿದೆ. ಕಲಬುರ್ಗಿಯಲ್ಲಿ 75 ಸೇರಿದಂತೆ 246 ಮಂದಿ ಚೇತರಿಸಿಕೊಂಡು ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ. ಶುಕ್ರವಾರ 14,733 ಮಂದಿಯ ಗಂಟಲ ದ್ರವದ ಮಾದರಿ ಪರೀಕ್ಷೆ ಮಾಡಲಾಗಿದೆ.

ಬೆಂಗಳೂರು ಲಾಕ್‌ಡೌನ್ ಇಲ್ಲ

‘ಎಂತಹ ಪರಿಸ್ಥಿತಿಯಲ್ಲೂ ಲಾಕ್‌ಡೌನ್‌ ಮಾಡುವುದಿಲ್ಲ. ಅದರ ಬದಲು ಸೀಲ್‌ಡೌನ್‌ ಮಾಡಲಾಗುವುದು’ ಎಂದು ಕಂದಾಯ ಸಚಿವ ಆರ್‌.ಅಶೋಕ ಹೇಳಿದರು.

ಬೆಂಗಳೂರು ನಗರದ ಸಂಸದರು ಹಾಗೂ ಶಾಸಕ ಜತೆ ಶುಕ್ರವಾರ ಸಭೆ ನಡೆಸಿದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪಅವರು ಕೋವಿಡ್ ನಿಯಂತ್ರಣಕ್ಕೆ ಬೇಕಾದ ಕ್ರಮಗಳ ಕುರಿತು ಅಭಿಪ್ರಾಯ ಸಂಗ್ರಹಿಸಿದರು.

ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಶೋಕ ಅವರು, ‘ಸಭೆಯಲ್ಲಿ ಶೇ 95 ರಷ್ಟು ಶಾಸಕರು ಲಾಕ್‌‌ಡೌನ್‌ ಬೇಡ, ಸೀಲ್‌ಡೌನ್‌ ಸಾಕು ಎಂದಿದ್ದಾರೆ. ಬಡವರಿಗೆ ಪರಿಹಾರ ನೀಡಿ ಲಾಕ್‌ಡೌನ್‌ ಮಾಡುವುದಾದರೆ ಮಾಡಿ ಎಂಬ ಸಲಹೆ ಸಭೆಯಲ್ಲಿ ಬಂದಿತು’ ಎಂದರು. ‘ಸೋಂಕು ಪ್ರಕರಣಗಳು ಬೆಳಕಿಗೆ ಬಂದಾಗ ಇಡೀ ಪ್ರದೇಶ ಸೀಲ್‌ಡೌನ್‌ ಮಾಡುವ ಬದಲು, ಸೋಂಕಿತರ ಮನೆಗಳನ್ನು ಮಾತ್ರ ಸೀಲ್‌ ಡೌನ್‌ ಮಾಡುತ್ತೇವೆ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.