ADVERTISEMENT

ಚೀನಾ ಗಡಿ ವಿವಾದವನ್ನು ಭಾರತ ದೃಢವಾಗಿ ಎದುರಿಸಿತು: ವಿದೇಶಾಂಗ ಕಾರ್ಯದರ್ಶಿ

ಪಿಟಿಐ
Published 30 ಅಕ್ಟೋಬರ್ 2020, 2:33 IST
Last Updated 30 ಅಕ್ಟೋಬರ್ 2020, 2:33 IST
ಹರ್ಷವರ್ಧನ್ ಶ್ರಿಂಗ್ಲಾ
ಹರ್ಷವರ್ಧನ್ ಶ್ರಿಂಗ್ಲಾ   

ನವದೆಹಲಿ: ಚೀನಾ ಗಡಿಯಲ್ಲಿ ಭಾರತವು ಈವರೆಗಿನ ಅತಿದೊಡ್ಡ ಬಿಕ್ಕಟ್ಟನ್ನು ಕೊರೊನಾ ಸಂಕಷ್ಟದ ನಡುವೆಯೂ ದೃಢವಾಗಿ ಮತ್ತು ಪ್ರಬುದ್ಧವಾಗಿ ಎದುರಿಸಿತು ಎಂದು ವಿದೇಶಾಂಗ ವ್ಯವಹಾರಗಳ ಇಲಾಖೆ ಕಾರ್ಯದರ್ಶಿ ಹರ್ಷವರ್ಧನ್ ಶ್ರಿಂಗ್ಲಾ ಹೇಳಿದರು.

ಪ್ಯಾರೀಸ್‌ನ ಚಿಂತಕರ ಚಾವಡಿಯ ವೇದಿಕೆಯಲ್ಲಿ ಮಾತನಾಡಿದ ಶ್ರಿಂಗ್ಲಾ, ಫ್ರಾನ್ಸ್‌ನಲ್ಲಿ ಈಚೆಗೆ ನಡೆದ ಎರಡು ಭಯೋತ್ಪಾದಕ ದಾಳಿಯ ಪ್ರಕರಣಗಳನ್ನು ಉಲ್ಲೇಖಿಸಿದರು. 'ಈ ಪೈಕಿ ಒಂದು ಘಟನೆಯ ಮೂಲಕ ಪಾಕಿಸ್ತಾನದಲ್ಲಿದೆ. ನಾಗರಿಕ ಜಗತ್ತು ಭಯೋತ್ಪಾದನೆ ನಿಗ್ರಹಿಸಲು ದೃಢ ಸಂಕಲ್ಪ ತೊಡಬೇಕಾಗಿದೆ' ಎಂದು ಹೇಳಿದರು.

ಜಾಗತಿಕ ಮಹತ್ವ ಪಡೆದಿರುವ ಮುಖ್ಯ ವಿಚಾರಗಳನ್ನು ಪ್ರಸ್ತಾಪಿಸಿದ ಅವರು, 'ಈಚಿನ ದಿನಗಳಲ್ಲಿ ಉದ್ಭವಿಸಿರುವ ಬಿಕ್ಕಟ್ಟುಗಳು ಭಾರತದ ದೂರಗಾಮಿ ಯೋಜನೆಗಳ ಅನುಷ್ಠಾನದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಇಂಡೊ-ಪೆಸಿಫಿಕ್ ವಲಯದಲ್ಲಿ ಮುಕ್ತ ಮತ್ತು ಎಲ್ಲರನ್ನೂ ಒಳಗೊಳ್ಳುವ ಪರಿಸ್ಥಿತಿ ರೂಪುಗೊಳ್ಳಬೇಕು ಎಂಬ ಬಗ್ಗೆ ಭಾರತದ ಬದ್ಧತೆಯೂ ಬದಲಾಗಿಲ್ಲ' ಎಂದು ಮಾಹಿತಿ ನೀಡಿದರು.

ADVERTISEMENT

ಒಂದು ವಾರದ ಯುರೋಪ್ ಪ್ರವಾಸಕ್ಕಾಗಿ ಶ್ರಿಂಗ್ಲಾಫ್ರಾನ್ಸ್‌ಗೆ ತೆರಳಿದ್ದಾರೆ. ಮುಂದಿನ ದಿನಗಳಲ್ಲಿ ಅವರುಜರ್ಮನಿ ಮತ್ತು ಬ್ರಿಟನ್‌ಗಳಿಗೂ ಭೇಟಿ ನೀಡಲಿದ್ದಾರೆ. ಭಯೋತ್ಪಾದಕ ದಾಳಿ ಎದುರಿಸಿದ ಸಂದರ್ಭದಲ್ಲಿಯೇ ಅವರು ಫ್ರಾನ್ಸ್‌ಗೆ ಭೇಟಿ ನೀಡಿರುವ ಹಿನ್ನೆಲೆಯಲ್ಲಿ ಅವರ ಹೇಳಿಕೆ ಮಹತ್ವ ಪಡೆದಿದೆ.

ಫ್ರಾನ್ಸ್‌ನ ನೈಸ್ ನಗರದ ಚರ್ಚ್‌ ಮೇಲೆ ಗುರುವಾರ (ಅ.29) ನಡೆದ ಭಯೋತ್ಪಾದಕ ದಾಳಿಯಲ್ಲಿ ಮೂವರು ಮೃತಪಟ್ಟಿದ್ದರು. ಫ್ರಾನ್ಸ್ ಅಧ್ಯಕ್ಷ ಎಮ್ಯಾನ್ಯುವಲ್ ಮಾರ್ಕೊನ್ ಇದು 'ಇಸ್ಲಾಮಿಕ್ ಭಯೋತ್ಪಾದಕರ ದಾಳಿ' ಎಂದು ವ್ಯಾಖ್ಯಾನಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.