ADVERTISEMENT

ಆಳ ಸಮುದ್ರಯಾನಕ್ಕೆ ಭಾರತ ಸಜ್ಜು: ಕರಾವಳಿಯಲ್ಲಿ 500 ಮೀಟರ್ ಆಳಕ್ಕಿಳಿಯಲು ಸಿದ್ಧತೆ

ಚೆನ್ನೈ ಕರಾವಳಿಯಲ್ಲಿ 500 ಮೀಟರ್‌ ಆಳಕ್ಕಿಳಿಯಲು ವಿಜ್ಞಾನಿಗಳ ಸಿದ್ಧತೆ

ಪಿಟಿಐ
Published 20 ನವೆಂಬರ್ 2025, 23:30 IST
Last Updated 20 ನವೆಂಬರ್ 2025, 23:30 IST
ಮಾನವಸಹಿತ ಆಳ ಸಮುದ್ರಯಾನಕ್ಕೆ ಸಜ್ಜಾಗಿರುವ ಸಬ್‌ಮರ್ಸಿಬಲ್ ನೌಕೆ ಮತ್ಸ್ಯ–6000ರ ಪರೀಕ್ಷಾರ್ಥ ಪ್ರಯೋಗವನ್ನು ಚೆನ್ನೈನ ಬಂದರಿನಲ್ಲಿ ನಡೆಸಲಾಯಿತು– ಪಿಟಿಐ ಚಿತ್ರ
ಮಾನವಸಹಿತ ಆಳ ಸಮುದ್ರಯಾನಕ್ಕೆ ಸಜ್ಜಾಗಿರುವ ಸಬ್‌ಮರ್ಸಿಬಲ್ ನೌಕೆ ಮತ್ಸ್ಯ–6000ರ ಪರೀಕ್ಷಾರ್ಥ ಪ್ರಯೋಗವನ್ನು ಚೆನ್ನೈನ ಬಂದರಿನಲ್ಲಿ ನಡೆಸಲಾಯಿತು– ಪಿಟಿಐ ಚಿತ್ರ   

ಚೆನ್ನೈ: ಮಹತ್ವಾಕಾಂಕ್ಷೆಯ ಸಮುದ್ರಯಾನ ಯೋಜನೆಯ ಮೂಲಕ ಆಳ ಸಮುದ್ರದ ರಸಹ್ಯ ಭೇದಿಸಲು ಭಾರತ ಸಜ್ಜುಗೊಂಡಿದೆ. ಇದೇ ಯೋಜನೆಯ ಭಾಗವಾಗಿ ಮುಂದಿನ ವರ್ಷ ಚೆನ್ನೈ ಕರಾವಳಿಯಲ್ಲಿ ದೇಶದ ಉನ್ನತ ಸಾಗರ ಅಧ್ಯಯನ ಸಂಸ್ಥೆಯ ಇಬ್ಬರು ವಿಜ್ಞಾನಿಗಳು ಸಮುದ್ರದ 500 ಮೀಟರ್‌ ಆಳಕ್ಕಿಳಿಯಲಿದ್ದಾರೆ.

ರಾಷ್ಟ್ರೀಯ ಸಾಗರ ತಂತ್ರಜ್ಞಾನ ಸಂಸ್ಥೆಯ (ಎನ್‌ಐಒಟಿ) ವಿಜ್ಞಾನಿಗಳಾದ ರಮೇಶ್‌ ರಾಜು ಹಾಗೂ ಜಿತೇಂದ್ರ ಪಾಲ್‌ ಸಿಂಗ್‌ ಅವರು ಆಳ ಸಮುದ್ರಯಾನಕ್ಕೆಂದೇ ದೇಶಿಯವಾಗಿ ನಿರ್ಮಿಸಿರುವ 28 ಟನ್ ತೂಕದ ‘ಮತ್ಸ್ಯ–6000’ ಹೆಸರಿನ ಸಬ್‌ಮರ್ಸಿಬಲ್‌ (ಸಮುದ್ರದಡಿ ಸಂಚರಿಸುವ ನೌಕೆ) ನೌಕೆಯಲ್ಲಿ ಸಮುದ್ರದ 500 ಮೀಟರ್ ಆಳಕ್ಕೆ ತೆರಳಿ ಅನ್ವೇಷಣೆ ನಡೆಸಲಿದ್ದಾರೆ. 

ಎನ್‌ಐಒಟಿ ನಿರ್ದೇಶಕ ಬಾಲಾಜಿ ರಾಮಕೃಷ್ಣನ್‌ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ‘ರಿಮೋಟ್‌ ಆಧಾರಿತ ಮಾನವರಹಿತ ಸಾಧನಗಳ ಮೂಲಕ ಆಳ ಸಮುದ್ರ ಅನ್ವೇಷಣೆಯನ್ನು ನಾವು ನಡೆಸಿದ್ದೇವೆ. ಆದರೆ, ಇದೇ ಮೊದಲ ಬಾರಿಗೆ ಸಮುದ್ರದ 6000 ಮೀಟರ್‌ ಆಳಕ್ಕೆ ಮನುಷ್ಯರನ್ನು ಕಳುಹಿಸಿ ಅನ್ವೇಷಣೆ ನಡೆಸಲು ಉದ್ದೇಶಿಸಿದ್ದೇವೆ. ಇದರ ಮೊದಲ ಹಂತವಾಗಿ ತಜ್ಞರು 500 ಮೀಟರ್‌ ಆಳಕ್ಕೆ ತೆರಳುತ್ತಿದ್ದಾರೆ’ ಎಂದಿದ್ದಾರೆ. 

ADVERTISEMENT

ಅಲ್ಲದೇ, ‘2027ರಲ್ಲಿ ಇದಕ್ಕಿಂತ 10 ಪಟ್ಟು ಆಳಕ್ಕೆ ತೆರಳಲು ಸಾಧ್ಯವಾಗಲಿದೆ. 6000 ಮೀಟರ್‌ ಆಳಕ್ಕೆ ತೆರಳಲು ಮತ್ಸ್ಯದಲ್ಲಿ ಪ್ರಸಕ್ತ ಇರುವ ಬಾಯ್ಲರ್‌ ಸ್ಟೀಲ್‌ ನೌಕಾ ಕೋಶ (ವಿಜ್ಞಾನಿಗಳು ಇರುವ ಜಾಗ) ಬದಲಿಸಿ, ಟೈಟಾನಿಯಂ ಕೋಶವನ್ನು ಅಳವಡಿಸಬೇಕಿದೆ. ಸದ್ಯಕ್ಕೆ ಬೆಂಗಳೂರಿನಲ್ಲಿರುವ ಇಸ್ರೊದ ಲಿಕ್ವಿಡ್‌ ಪ್ರೊಪಲ್ಶನ್‌ ಸಿಸ್ಟಮ್‌ ಸೆಂಟರ್‌ನಲ್ಲಿ ಅದನ್ನು ಅಭಿವೃದ್ಧಿಪಡಿಸಲಾಗುತ್ತಿದೆ’ ಎಂದೂ ಬಾಲಾಜಿ ಹೇಳಿದ್ದಾರೆ. 

ಅತ್ಯಂತ ಆಳ ಸಮುದ್ರದಲ್ಲಿ ಮಾನವಸಹಿತ ಅನ್ವೇಷಣೆ ನಡೆಸುವ ಸಾಮರ್ಥ್ಯವು ಕೆಲವೇ ರಾಷ್ಟ್ರಗಳಲ್ಲಿದ್ದು, ಸಮುದ್ರಯಾನ ಯೋಜನೆ ಯಶಸ್ವಿಯಾದರೆ ಭಾರತವೂ ಈ ಸಾಲಿಗೆ ಸೇರ್ಪಡೆಯಾಗಲಿದೆ.

ಮತ್ಸ್ಯ–6000:
ಆಳ ಸಮುದ್ರಯಾನಕ್ಕೆಂದು ದೇಶಿಯವಾಗಿ ಅಭಿವೃದ್ಧಿಪಡಿಸಿರುವ ಈ ನೌಕೆಯು ಪ್ರತಿ ನಿಮಿಷಕ್ಕೆ 30 ಮೀಟರ್‌ ಆಳದವರೆಗೆ ಸಂಚರಿಸಲಿದೆ. ಸಮುದ್ರದ ಆಳದಲ್ಲಿರುವ ಕತ್ತಲೆ ಭಾಗದಲ್ಲೂ ಅನ್ವೇಷಣೆಗೆ ಅನುವಾಗುವಂತೆ ದೀಪಗಳನ್ನು ಇದರಲ್ಲಿ ಅಳವಡಿಸಲಾಗಿದೆ. ಜತೆಗೆ ಸಮುದ್ರದಲ್ಲಿ ಲಭ್ಯವಾಗುವ ಖನಿಜ ಸೇರಿದಂತೆ ಇತರೆ ವಸ್ತುಗಳ ಮಾದರಿಯನ್ನು ಸಂಗ್ರಹಿಸಲು ನೌಕೆಯಲ್ಲಿ ರೋಬೊಟಿಕ್‌ ಕೈಗಳೂ ಇವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.