ADVERTISEMENT

ಕೋವಿಡ್–19 ಲಸಿಕೆ ತುರ್ತು ಅನುಮೋದನೆ ಮನವಿ ತಿರಸ್ಕರಿಸಿಲ್ಲ: ಕೇಂದ್ರ ಸ್ಪಷ್ಟನೆ

ರಾಯಿಟರ್ಸ್
Published 9 ಡಿಸೆಂಬರ್ 2020, 15:40 IST
Last Updated 9 ಡಿಸೆಂಬರ್ 2020, 15:40 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಆಸ್ಟ್ರಾಜೆನೆಕಾ ಹಾಗೂ ಭಾರತ್ ಬಯೋಟೆಕ್ ಕೋವಿಡ್–19 ಲಸಿಕೆಯ ತುರ್ತು ಅನುಮೋದನೆ ಮನವಿಯನ್ನು ಡಿಸಿಜಿಐ (ಭಾರತೀಯ ಪ್ರಧಾನ ಔಷಧ ನಿಯಂತ್ರಕ) ತಿರಸ್ಕರಿಸಿದೆ ಎಂಬ ವರದಿಗಳನ್ನು ಕೇಂದ್ರ ಸರ್ಕಾರ ಅಲ್ಲಗಳೆದಿದೆ.

ಲಸಿಕೆಯ ಬಳಕೆಗೆ ತುರ್ತು ಅನುಮೋದನೆ ನೀಡುವಂತೆ ಮಾಡಿರುವ ಮನವಿಗೆ ಸಂಬಂಧಿಸಿ ಇನ್ನಷ್ಟು ದತ್ತಾಂಶ ಒದಗಿಸುವಂತೆ ಸಿಡಿಎಸ್‌ಸಿಒ (ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಘಟನೆ) ಸೂಚಿಸಿದೆ ಎಂದು ‘ಎನ್‌ಡಿಟಿವಿ’ ಮತ್ತು ‘ಸಿಎನ್‌ಬಿಸಿ–ಟಿವಿ18’ ಸುದ್ದಿವಾಹಿನಿಗಳು ವರದಿ ಮಾಡಿದ್ದವು. ಇದನ್ನು ನಿರಾಕರಿಸಿ ಆರೋಗ್ಯ ಸಚಿವಾಲಯ ಟ್ವೀಟ್ ಮಾಡಿದೆ.

ಮನವಿಯನ್ನು ಸ್ವೀಕರಿಸಲಾಗಿದೆ ಅಥವಾ ತಿರಸ್ಕರಿಸಲಾಗಿದೆ ಎಂದು ಈಗಲೇ ಹೇಳುವುದು ತುಂಬಾ ಅವಸರದ ಕಾರ್ಯವಾಗುತ್ತದೆ. ಸಂಪೂರ್ಣವಾಗಿ ಪರಿಶೀಲಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಮುಂಬರುವ ವಾರಗಳಲ್ಲಿ ಕೆಲವು ಲಸಿಕೆಗಳಿಗೆ ಅನುಮೋದನೆ ನೀಡುವ ಸಾಧ್ಯತೆ ಇದೆ ಎಂದು ಸರ್ಕಾರ ಮಂಗಳವಾರ ತಿಳಿಸಿತ್ತು.

ಭಾರತದಲ್ಲಿ ಆಸ್ಟ್ರಾಜೆನೆಕಾ ಲಸಿಕೆ ಉತ್ಪಾದಿಸುತ್ತಿರುವ ‘ಸೀರಮ್ ಇನ್‌ಸ್ಟಿಟ್ಯೂಟ್‌ ಆಫ್ ಇಂಡಿಯಾ’ವು ಲಸಿಕೆಯ ತುರ್ತು ಬಳಕೆಗೆ ಅನುಮೋದನೆ ನೀಡುವಂತೆ ಸೋಮವಾರ ಮನವಿ ಸಲ್ಲಿಸಿತ್ತು.

ಈ ವಿಚಾರವಾಗಿ ‘ಸೀರಮ್ ಇನ್‌ಸ್ಟಿಟ್ಯೂಟ್‌ ಆಫ್ ಇಂಡಿಯಾ’ ಪ್ರತಿಕ್ರಿಯೆಗೆ ಲಭ್ಯವಾಗಿಲ್ಲ. ಭಾರತ್ ಬಯೋಟೆಕ್ ಪ್ರತಿಕ್ರಿಯಿಸಲು ನಿರಾಕರಿಸಿದೆ. ಸಿಡಿಎಸ್‌ಸಿಒ ಸಹ ಪ್ರತಿಕ್ರಿಯೆ ನೀಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.