ADVERTISEMENT

ಪಥ ಸಂಚಲನಕ್ಕೆ ರಫೇಲ್ ಮೆರುಗು: ಸೇನೆ ಸಾಮರ್ಥ್ಯ ಪ್ರದರ್ಶನಕ್ಕೆ ಮ್ಯಾಕ್ರನ್ ಸಾಕ್ಷಿ

ಪಿಟಿಐ
Published 26 ಜನವರಿ 2024, 15:08 IST
Last Updated 26 ಜನವರಿ 2024, 15:08 IST
ನವದೆಹಲಿಯ ಕರ್ತವ್ಯಪಥದಲ್ಲಿ ಶುಕ್ರವಾರ ನಡೆದ ಗಣರಾಜ್ಯೋತ್ಸವ ಪಥಸಂಚಲನದ ವೇಳೆ ರಫೇಲ್‌ ಯುದ್ಧ ವಿಮಾನಗಳು ಆಕರ್ಷಕ ಹಾರಾಟ ನಡೆಸಿದವು –ಪಿಟಿಐ ಚಿತ್ರ 
ನವದೆಹಲಿಯ ಕರ್ತವ್ಯಪಥದಲ್ಲಿ ಶುಕ್ರವಾರ ನಡೆದ ಗಣರಾಜ್ಯೋತ್ಸವ ಪಥಸಂಚಲನದ ವೇಳೆ ರಫೇಲ್‌ ಯುದ್ಧ ವಿಮಾನಗಳು ಆಕರ್ಷಕ ಹಾರಾಟ ನಡೆಸಿದವು –ಪಿಟಿಐ ಚಿತ್ರ     

ನವದೆಹಲಿ: ಫ್ರಾನ್ಸ್‌ ನಿರ್ಮಿತ ಎರಡು ರಫೇಲ್‌ ಯುದ್ಧ ವಿಮಾನಗಳು ಚಿತ್ತಾರ ಮೂಡಿಸುತ್ತಾ ನೀಲಾಕಾಶದಲ್ಲಿ ಮಿಂಚಿಗಿಂತಲೂ ವೇಗವಾಗಿ ಹಾರಾಡಿದರೆ, ಬಹೂಪಯೋಗಿ ಟ್ಯಾಂಕ್‌ ಸಾಗಣೆ ಯುದ್ಧವಿಮಾನ ಇವುಗಳಿಗೆ ಸಾಥ್‌ ನೀಡಿತು...

ಇದು 75ನೇ ಗಣ ರಾಜ್ಯೋತ್ಸವದ ಅಂಗವಾಗಿ ಇಲ್ಲಿನ ಕರ್ತವ್ಯ ಪಥದಲ್ಲಿ ಶುಕ್ರವಾರ ನಡೆದ ಪಥಸಂಚಲನದ ವೇಳೆ ಕಂಡುಬಂದ ದೃಶ್ಯ. 

ಭಾರತದ ಸಶಸ್ತ್ರ ಪಡೆಗಳು ತಮ್ಮ ರಕ್ಷಣಾ ವ್ಯವಸ್ಥೆಗಳಿಗೆ ಆಧುನಿಕ ಸ್ಪರ್ಶ ನೀಡುವ ಜೊತೆಗೆ ಸಾಮರ್ಥ್ಯ ಹೆಚ್ಚಿಸಿಕೊಂಡಿದ್ದನ್ನು ಅನಾವರಣಗೊಳಿಸುವುದಕ್ಕೆ ಗಣರಾಜ್ಯೋತ್ಸವ ಕಾರ್ಯಕ್ರಮ ವೇದಿಕೆಯಾಗಿದ್ದರೆ, ಮುಖ್ಯ ಅತಿಥಿಯಾಗಿದ್ದ ಫ್ರಾನ್ಸ್‌ ಅಧ್ಯಕ್ಷ ಇಮ್ಯಾನುಯೆಲ್‌ ಮ್ಯಾಕ್ರನ್‌ ಈ ಪ್ರದರ್ಶನಕ್ಕೆ ಸಾಕ್ಷಿಯಾದರು.

ADVERTISEMENT

ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್‌ ಸಿಂಗ್, ಕೇಂದ್ರ ಮಂತ್ರಿಗಳು, ಸೇನೆಯ ಉನ್ನತ ಅಧಿಕಾರಿಗಳು, ವಿವಿಧ ದೇಶಗಳ ರಾಜತಾಂತ್ರಿಕರು ಹಾಗೂ ಇಲಾಖೆಗಳ ಹಿರಿಯ ಅಧಿಕಾರಿಗಳು, ಯುದ್ಧ ವಿಮಾನಗಳ ಹಾರಾಟ ಸೇರಿದಂತೆ ಸೇನೆಯ ಸಾಮರ್ಥ್ಯ ಪ್ರದರ್ಶನವನ್ನು ಕಣ್ತುಂಬಿಕೊಂಡರು.

ಫ್ರಾನ್ಸ್‌ ಸೇನೆಯ 95 ಸೈನಿಕರು ಕರ್ತವ್ಯ ಪಥದಲ್ಲಿ ಸಾಗಿ ಬರುತ್ತಿದ್ದಂತೆಯೇ, ಅಬ್ಬರಿಸುತ್ತಾ ರಾಜಧಾನಿ ಆಗಸದಲ್ಲಿ ರಫೇಲ್‌ ಯುದ್ಧ ವಿಮಾನಗಳು ಹಾರಾಟ ನಡೆಸಿದವು. ಅವುಗಳನ್ನು ಅಚ್ಚರಿಯಿಂದ ನೋಡುವ ಸರದಿ ಪ್ರೇಕ್ಷಕರದಾಗಿತ್ತು.

ಕ್ಷಣಮಾತ್ರದಲ್ಲಿ ಈ ವಿಮಾನಗಳು ಸಂಚರಿಸಿ, ಸಂಚಲನ ಮೂಡಿಸಿದ್ದನ್ನು ಕಣ್ತುಂಬಿಕೊಳ್ಳುತ್ತಿದ್ದ ಪ್ರೇಕ್ಷಕರಿಗೆ, 30 ಸದಸ್ಯರಿದ್ದ ಫ್ರಾನ್ಸ್‌ ಬ್ಯಾಂಡ್‌ ಕೂಡ ಮುದ ನೀಡಿತ್ತು. ಈ ಹಿಂದೆ, 2016ರಲ್ಲಿ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಫ್ರಾನ್ಸ್‌ ಪಡೆಗಳು ಪಾಲ್ಗೊಂಡಿದ್ದವು.

ಭಾರತೀಯ ಸೇನೆ ಶಕ್ತಿ ಪ್ರದರ್ಶನ: 

ಟಿ–90 ಭೀಷ್ಮ ಟ್ಯಾಂಕ್‌ಗಳು, ಎನ್‌ಎಜಿ ಕ್ಷಿಪಣಿ ವ್ಯವಸ್ಥೆಗಳು, ಸೈನಿಕರನ್ನು ಹೊತ್ತ ಭಾರಿ ವಾಹನಗಳು, ಎಲ್ಲ ರೀತಿಯ ಭೌಗೋಳಿಕ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸಬಲ್ಲ ವಾಹನಗಳು ‘ಕರ್ತವ್ಯ ಪಥ’ದಲ್ಲಿ ಸಾಗಿದಾಗ ಪ್ರೇಕ್ಷಕರು ಅಭಿಮಾನದಿಂದ ಕರತಾಡನ ಮಾಡಿದರು.

ಶತ್ರು ಪಾಳೆಯದ ಆಯುಧಗಳನ್ನು ಪತ್ತೆಹಚ್ಚಬಲ್ಲ ರಾಡಾರ್‌ ವ್ಯವಸ್ಥೆ ‘ಸ್ವಾತಿ’, ಡ್ರೋನ್‌ಗೆ ತಡೆ ಒಡ್ಡಬಲ್ಲ ವ್ಯವಸ್ಥೆ, ನೆಲದಿಂದ ಆಕಾಶಕ್ಕೆ ಚಿಮ್ಮಿ ಗುರಿ ನಾಶ ಪಡಿಸಬಲ್ಲ ಮಧ್ಯಮ ವ್ಯಾಪ್ತಿಯ ಕ್ಷಿಪಣಿಗಳು ಸಹ ಗಮನಸೆಳೆದವು.

ಸೇನೆಯ ಪೊಲೀಸ್‌ ವಿಭಾಗದ ಕ್ಯಾಪ್ಟನ್‌ ಸಂಧ್ಯಾ ನೇತೃತ್ವದಲ್ಲಿ ಮೂರು ಪಡೆಗಳ ಮಹಿಳೆಯರನ್ನು ಒಳಗೊಂಡ ತುಕಡಿ ಆಕರ್ಷಕ ಪಥಸಂಚಲನ ನಡೆಸಿತು. ಕ್ಯಾಪ್ಟನ್‌ ಶರಣ್ಯ ರಾವ್‌, ಸಬ್‌ ಲೆಫ್ಟಿನೆಂಟ್‌ ಅಂಶು ಯಾದವ್‌ ಹಾಗೂ ಫ್ಳೈಟ್‌ ಲೆಫ್ಟಿನೆಂಟ್ ಸೃಷ್ಟಿ ರಾವ್‌ ಅವರೂ ಪಥಸಂಚಲನದ ಭಾಗವಾಗಿದ್ದರು.

ಮದ್ರಾಸ್‌ ರೆಜಿಮೆಂಟ್, ಗ್ರೆನೇಡಿಯರ್ಸ್‌, ರಜಪೂತಾನ್‌ ರೈಫಲ್ಸ್‌, ಸಿಖ್‌ ರೆಜಿಮೆಂಟ್‌, ನೌಕಾಪಡೆಯ ತುಕಡಿಗಳು ಸಹ ಇದ್ದವು.

ವಾಯುಪಡೆಯ 46 ವಿಮಾನಗಳು ಆಕಾಶದಲ್ಲಿ ವಿವಿಧ ಕಸರತ್ತು ಪ್ರದರ್ಶಿಸಿದವು. 29 ಯುದ್ಧ ವಿಮಾನಗಳು, 7 ಸರಕು ಸಾಗಣೆ ವಿಮಾನಗಳು, 9 ಹೆಲಿಕಾಪ್ಟರ್‌ಗಳು ಕೂಡ ಪ್ರದರ್ಶನದ ಭಾಗವಾಗಿದ್ದವು.

ದೇಶೀಯವಾಗಿ ತಯಾರಿಸಿರುವ ಅತ್ಯಾಧುನಿಕ ಯುದ್ಧವಿಮಾನ ‘ತೇಜಸ್‌’ ಪ್ರದರ್ಶನ ಪಥಸಂಚಲನದ ಮೆರುಗು ಹೆಚ್ಚಿಸಿತ್ತು.

New Delhi: Indian Army
ಪಥಸಂಚಲನದಲ್ಲಿ ಮಧ್ಯಮ ವ್ಯಾಪ್ತಿಯ ಕ್ಷಿಪಣಿ ವ್ಯವಸ್ಥೆ (ಎಂಆರ್‌ಎಸ್‌ಎಎಂ) ಭಾಗಿಯಾಗಿತ್ತು –ಪಿಟಿಐ ಚಿತ್ರ
ಪಥಸಂಚಲನದಲ್ಲಿ ಗಮನ ಸೆಳೆದ ಪಿನಾಕ ಕ್ಷಿಪಣಿ ವ್ಯವಸ್ಥೆ –ಪಿಟಿಐ ಚಿತ್ರ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.