ADVERTISEMENT

ಭಾರತ, ಯುರೋಪ್ ಒಕ್ಕೂಟದ ಮುಕ್ತ ವ್ಯಾಪಾರ ಒಪ್ಪಂದ ಮಾತುಕತೆ ತ್ವರಿತಕ್ಕೆ ನಿರ್ದೇಶನ

ಪಿಟಿಐ
Published 10 ಜನವರಿ 2026, 11:09 IST
Last Updated 10 ಜನವರಿ 2026, 11:09 IST
   

ನವದೆಹಲಿ: ಪ್ರಸ್ತಾಪಿತ ಮುಕ್ತ ವ್ಯಾಪಾರ ಒಪ್ಪಂದವನ್ನು ಅಂತಿಮಗೊಳಿಸಲು ಬಾಕಿ ಇರುವ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಮಾತುಕತೆಗಳನ್ನು ತ್ವರಿತಗೊಳಿಸಲು ಭಾರತ ಮತ್ತು ಯುರೋಪಿಯನ್ ಒಕ್ಕೂಟದ ವ್ಯಾಪಾರ ಸಂಬಂಧಿತ ಉಸ್ತುವಾರಿಗಳು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ ಎಂದು ಅಧಿಕೃತ ಹೇಳಿಕೆ ಶನಿವಾರ ತಿಳಿಸಿದೆ.

ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಮತ್ತು ಯುರೋಪಿಯನ್ ಒಕ್ಕೂಟದ ವ್ಯಾಪಾರ ಮತ್ತು ಆರ್ಥಿಕ ಭದ್ರತಾ ಆಯುಕ್ತ ಮಾರೋಸ್ ಸೆಫ್ಕೊವಿಕ್, ಬ್ರಸೆಲ್ಸ್‌ನಲ್ಲಿ ಭೇಟಿಯಾಗಿ ಮಾತುಕತೆಗಳ ಪ್ರಗತಿಯನ್ನು ಪರಿಶೀಲಿಸಿದರು.

ಗೋಯಲ್ ಅವರ ಎರಡು ದಿನಗಳ ಯುರೋಪ್ ಭೇಟಿ ಜನವರಿ 9ರಂದು ಮುಕ್ತಾಯಗೊಂಡಿತು.

ADVERTISEMENT

‘ಬಾಕಿ ಇರುವ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಒಪ್ಪಂದವನ್ನು ತ್ವರಿತಗೊಳಿಸಲು ಮಾತುಕತೆ ನಡೆಸುವ ತಂಡಗಳಿಗೆ ಉಭಯ ನಾಯಕರು ಮಾರ್ಗದರ್ಶನ ನೀಡಿದರು’ ಎಂದು ವಾಣಿಜ್ಯ ಸಚಿವಾಲಯ ತಿಳಿಸಿದೆ.

ಸರಕುಗಳಿಗೆ ಮಾರುಕಟ್ಟೆ ಪ್ರವೇಶ, ಮೂಲ ನಿಯಮಗಳು ಮತ್ತು ಸೇವೆಗಳು ಸೇರಿದಂತೆ ಮಾತುಕತೆ ಮಾರ್ಗಗಳಲ್ಲಿ ಸಾಧಿಸಿದ ಪ್ರಗತಿಯನ್ನು ಪರಿಶೀಲಿಸುವತ್ತ ಸಭೆಗಳು ಗಮನಹರಿಸಿದವು ಎಂದು ಪ್ರಕಟಣೆ ತಿಳಿಸಿದೆ.

ಸಚಿವರ ಭೇಟಿಗೂ ಮುನ್ನ ಜನವರಿ 6 ಮತ್ತು 7ರಂದು ವಾಣಿಜ್ಯ ಕಾರ್ಯದರ್ಶಿ ರಾಜೇಶ್ ಅಗರ್ವಾಲ್ ಮತ್ತು ಯುರೋಪಿಯನ್ ಆಯೋಗದ ವ್ಯಾಪಾರ ಮಹಾನಿರ್ದೇಶಕಿ ಸಬೈನ್ ವೆಯಾಂಡ್ ನಡುವೆ ಉನ್ನತ ಮಟ್ಟದ ಚರ್ಚೆಗಳು ನಡೆದವು.

‘ರಚನಾತ್ಮಕ ಮಾತುಕತೆ ಮೂಲಕ ಬಾಕಿ ಇರುವ ಸಮಸ್ಯೆಗಳನ್ನು ಪರಿಹರಿಸಲು ಎರಡೂ ಕಡೆಯ ಬಲವಾದ ರಾಜಕೀಯ ಸಂಕಲ್ಪವನ್ನು ಸಚಿವರ ಮಟ್ಟದ ಚರ್ಚೆಗಳು ಪುನರುಚ್ಚರಿಸಿದವು’ ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.