ADVERTISEMENT

ಭಾರತ–ಇಯು ನಡುವೆ ಮುಕ್ತ ವ್ಯಾಪಾರ ಒಪ್ಪಂದ: ಜಾಗತಿಕ ಸ್ಥಿರತೆಗೆ ಬಲ: ಮೋದಿ

​ಪ್ರಜಾವಾಣಿ ವಾರ್ತೆ
Published 27 ಜನವರಿ 2026, 16:17 IST
Last Updated 27 ಜನವರಿ 2026, 16:17 IST
   

ನವದೆಹಲಿ: ವಿಶ್ವದ ಎರಡನೆಯ ಅತಿದೊಡ್ಡ ಆರ್ಥಿಕತೆಯಾಗಿರುವ ಐರೋಪ್ಯ ಒಕ್ಕೂಟದೊಂದಿಗೆ, ವಿಶ್ವದ ನಾಲ್ಕನೆಯ ಅತಿ ದೊಡ್ಡ ಆರ್ಥಿಕ ಶಕ್ತಿಯಾದ ಭಾರತ ಮಾಡಿಕೊಂಡಿರುವ ಮುಕ್ತ ವ್ಯಾಪಾರ ಒಪ್ಪಂದವು(ಎಫ್‌ಟಿಎ) ಜಾಗತಿಕ ಸ್ಥಿರತೆಯನ್ನು ಮತ್ತಷ್ಟು ಬಲಪಡಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಹೇಳಿದ್ದಾರೆ. 

ಮುಕ್ತ ವ್ಯಾಪಾರ ಒಪ್ಪಂದ ಕುರಿತ ಮಾತುಕತೆ ಪೂರ್ಣಗೊಂಡ ಬಳಿಕ, ಐರೋಪ್ಯ ಪರಿಷತ್ತಿನ ಅಧ್ಯಕ್ಷ ಆ್ಯಂಟೊನಿಯೊ ಕೋಸ್ಟಾ, ಐರೋಪ್ಯ ಆಯೋಗದ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯೆನ್ ಅವರೊಂದಿಗೆ ನಡೆಸಿದ ಜಂಟಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಇದು ವ್ಯಾಪಾರ ಒಪ್ಪಂದ ಮಾತ್ರವಲ್ಲ. ಯುರೋಪ್‌ ರಾಷ್ಟ್ರಗಳು ಹಾಗೂ ಭಾರತ ಒಟ್ಟಿಗೆ ತಮ್ಮ ಭವಿಷ್ಯವನ್ನು ಉಜ್ವಲಗೊಳಿಸಲು ರೂಪಿಸಿರುವ ನೀಲನಕ್ಷೆ’ ಎಂದು ಮೋದಿ ಬಣ್ಣಿಸಿದರು.

ADVERTISEMENT

‘ಇದು ಐತಿಹಾಸಿಕ ಒಪ್ಪಂದವಾಗಿದ್ದು, ಭಾರತದ ರೈತರು, ಸಣ್ಣ ಉದ್ದಿಮೆದಾರರಿಗೆ ಯುರೋಪ್‌ ರಾಷ್ಟ್ರಗಳ ಮಾರುಕಟ್ಟೆ ತೆರೆದುಕೊಳ್ಳಲಿದೆ. ತಯಾರಿಕಾ ಕ್ಷೇತ್ರಕ್ಕೆ ಹೊಸ ಅವಕಾಶಗಳ ಸೃಷ್ಟಿಯಾಗಲಿದೆ, ಸೇವಾ ವಲಯದಲ್ಲಿನ ಸಹಕಾರವನ್ನು ಬಲಪಡಿಸಲಿದೆ’ ಎಂದು ಹೇಳಿದರು.

‘ಸದ್ಯದ ಜಾಗತಿಕ ಪ್ರಕ್ಷುಬ್ಧ ವಾತಾವರಣದಲ್ಲಿ, ಭಾರತ ಮತ್ತು ಐರೋಪ್ಯ ಒಕ್ಕೂಟದ ನಡುವಿನ ಐತಿಹಾಸಿಕ ಒಪ್ಪಂದವು, ಅಂತರರಾಷ್ಟ್ರೀಯ ಸುಸ್ಥಿರತೆಯನ್ನು ಬಲಪಡಿಸಲಿದೆ’ ಎಂದೂ ಮೋದಿ ವಿಶ್ವಾಸ ವ್ಯಕ್ತಪಡಿಸಿದರು.

‘ಮಾತುಕತೆ, ರಾಜತಾಂತ್ರಿಕ ಮಾರ್ಗದ ಮೂಲಕ ಉಕ್ರೇನ್‌ನಲ್ಲಿ ಶಾಂತಿ ನೆಲಸುವಂತಾಗಬೇಕು. ಇದಕ್ಕೆ ಪೂರಕವಾದ ವಾತಾವರಣ ಸೃಷ್ಟಿಗೆ ನೆರವು ನೀಡುವುದನ್ನು ನಾವು ನಿಮ್ಮಿಂದ ನಿರೀಕ್ಷಿಸುತ್ತೇವೆ’ ಎಂದು ಮೋದಿ ಅವರನ್ನು ಉದ್ದೇಶಿಸಿ ಐರೋಪ್ಯ ಪರಿಷತ್ತಿನ ಅಧ್ಯಕ್ಷ ಆ್ಯಂಟೊನಿಯೊ ಕೋಸ್ಟಾ ಹೇಳಿದರು.

ರಕ್ಷಣೆ ಮತ್ತು ಭದ್ರತೆ ವಿಚಾರದಲ್ಲಿ ಭಾರತ ಮತ್ತು ಐರೋಪ್ಯ ಒಕ್ಕೂಟ ಪಾಲುದಾರಿಕೆಗೆ ಮುಂದಾಗಲಿವೆ. ಭಯೋತ್ಪಾದನೆ ನಿಗ್ರಹ ಕಡಲಗಡಿ ಸುರಕ್ಷತೆ ಹಾಗೂ ಸೈಬರ್‌ ಭದ್ರತೆಯಲ್ಲಿ ಇದು ಸಹಕಾರ ಹೆಚ್ಚಿಸಲಿದೆ
ನರೇಂದ್ರ ಮೋದಿ ಪ್ರಧಾನಿ
ಈ ಮುಕ್ತ ವ್ಯಾಪಾರ ಒಪ್ಪಂದವು ಭಾರತ ಮತ್ತು ಐರೋಪ್ಯ ಒಕ್ಕೂಟವು ನಂಬಿಕಸ್ಥ ಪಾಲುದಾರರಾಗಿ ಒಟ್ಟಿಗೆ ಸಾಗಲಿವೆ ಎಂಬ ಸ್ಪಷ್ಟ ಸಂದೇಶವನ್ನು ಜಗತ್ತಿಗೆ ರವಾನಿಸಿದೆ
ಆ್ಯಂಟೊನಿಯೊ ಕೋಸ್ಟಾ ಐರೋಪ್ಯ ಪರಿಷತ್ತಿನ ಅಧ್ಯಕ್ಷ
ಭಾರತ–ಐರೋಪ್ಯ ಒಕ್ಕೂಟದ ನಡುವಿನ ಒಪ್ಪಂದವು ಜಾಗತಿಕ ಸವಾಲುಗಳಿಗೆ ಸಹಕಾರವೇ ಅತ್ಯುತ್ತಮ ಉತ್ತರ ಎಂಬ ಸಂದೇಶವನ್ನು ಬಲವಾಗಿ ಸಾರಿದೆ
ಉರ್ಸುಲಾ ವಾನ್ ಡೆರ್ ಲೇಯೆನ್ ಐರೋಪ್ಯ ಒಕ್ಕೂಟದ ಅಧ್ಯಕ್ಷೆ 
ಭಾರತ ಮತ್ತು ಇಟಲಿ ನಡುವಿನ ಸಂಬಂಧಗಳು ತ್ವರಿತ ವಿಸ್ತರಣೆಯ ಹಾದಿಯಲ್ಲಿವೆ. ಭಾರತ–ಇಯು ನಡುವಿನ ಒಪ್ಪಂದವು ಇದಕ್ಕೆ ಇನ್ನಷ್ಟು ಬಲ ನೀಡಲಿದೆ 
ಸೆರ್ಗಿಯೊ ಮ್ಯಾಟರೆಲ್ಲಾ ಇಟಲಿ ಅಧ್ಯಕ್ಷ

ಪ್ರಮುಖ ಅಂಶಗಳು

* ಈ ಒಪ್ಪಂದವು ಪ್ರಮುಖವಾಗಿ ಭಾರತೀಯ ರಫ್ತುದಾರರಿಗೆ ವಾರ್ಷಿಕವಾಗಿ  ₹43.71 ಸಾವಿರ ಕೋಟಿಯಷ್ಟು ಸುಂಕದ ಹೊರೆಯನ್ನು ಕಡಿಮೆ ಮಾಡುತ್ತದೆ  

* ಐರೋಪ್ಯ ಒಕ್ಕೂಟಕ್ಕೆ ಭಾರತವು ಅತಿದೊಡ್ಡ ವ್ಯಾಪಾರ ಪಾಲುದಾರ ದೇಶವಾಗಿದೆ.  2024–25ರಲ್ಲಿ ಭಾರತವು ಐರೋಪ್ಯ ಒಕ್ಕೂಟದೊಂದಿಗೆ 136 ಶತಕೋಟಿ ಡಾಲರ್‌(ಅಂದಾಜು 12.45 ಲಕ್ಷ ಕೋಟಿ) ಮೊತ್ತದ ವ್ಯಾಪಾರ ನಡೆಸಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.