ADVERTISEMENT

ಸೌದಿ ನೋಟುಗಳಲ್ಲಿ ತಪ್ಪು ನಕಾಶೆ; ಪ್ರತಿಭಟನೆ ದಾಖಲಿಸಿದ ಭಾರತ

ಏಜೆನ್ಸೀಸ್
Published 30 ಅಕ್ಟೋಬರ್ 2020, 3:16 IST
Last Updated 30 ಅಕ್ಟೋಬರ್ 2020, 3:16 IST
ಬ್ಯೂನಸ್‌ ಐರಿಸ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಸೌದಿ ಅರೇಬಿಯಾದ ಯುವರಾಜ ಮೊಹಮ್ಮದ್‌ ಬಿನ್‌ ಸಲ್ಮಾನ್‌ ಮಾತುಕತೆ ನಡೆಸಿದ್ದ ಸಂದರ್ಭ –ರಾಯಿಟರ್ಸ್‌ ಚಿತ್ರ
ಬ್ಯೂನಸ್‌ ಐರಿಸ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಸೌದಿ ಅರೇಬಿಯಾದ ಯುವರಾಜ ಮೊಹಮ್ಮದ್‌ ಬಿನ್‌ ಸಲ್ಮಾನ್‌ ಮಾತುಕತೆ ನಡೆಸಿದ್ದ ಸಂದರ್ಭ –ರಾಯಿಟರ್ಸ್‌ ಚಿತ್ರ   

ನವದೆಹಲಿ: ಸೌದಿ ಅರೇಬಿಯಾ ಬ್ಯಾಂಕ್‌ ನೋಟುಗಳಲ್ಲಿ ಭಾರತದ ಬಾಹ್ಯ ಪ್ರಾದೇಶಿಕ ಗಡಿಗಳನ್ನು ತಪ್ಪಾಗಿ ಮುದ್ರಿಸಲಾಗಿದ್ದು,ಈ ಕುರಿತು ಭಾರತದ ವಿದೇಶಾಂಗ ಸಚಿವಾಲಯ ಪ್ರತಿಭಟನೆ ದಾಖಲಿಸಿದೆ.

ಮುದ್ರಿತ ನೋಟುಗಳಲ್ಲಿ ಜಮ್ಮು–ಕಾಶ್ಮೀರ ಮತ್ತು ಲಡಾಖ್‌ ಪ್ರದೇಶವನ್ನು ಭಾರತದಿಂದ ಬೇರ್ಪಡಿಸಿದಂತೆ ಕಾಣಿಸುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಸೌದಿ ಅರೇಬಿಯಾದ ಅಧಿಕೃತ ಮತ್ತು ಕಾನೂನುಬದ್ಧ ನೋಟಿನಲ್ಲಿ ಭಾರತದ ಬಾಹ್ಯ ಪ್ರಾದೇಶಿಕ ಗಡಿಗಳನ್ನು ಸಂಪೂರ್ಣವಾಗಿ ತಪ್ಪಾಗಿ ಚಿತ್ರಿಸಿರುವುದಕ್ಕೆ ನಾವು ನವದೆಹಲಿ ಮತ್ತು ರಿಯಾದ್‌ನಲ್ಲಿ ಸೌದಿಯ ರಾಯಭಾರಿ ಅಧಿಕಾರಿಗಳ ಬಳಿ ಪ್ರತಿಭಟನೆ ದಾಖಲಿಸಿದ್ದೇವೆ. ಜೊತೆಗೆ, ಸೌದಿ ಕಡೆಯಿಂದ ತುರ್ತು ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿದ್ದೇವೆ’ ಎಂದು ವಿದೇಶಾಂಗ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.

ADVERTISEMENT

‘ಜಮ್ಮು–ಕಾಶ್ಮೀರ ಮತ್ತು ಲಡಾಖ್‌ ಸಂಪೂರ್ಣ ಕೇಂದ್ರಾಡಳಿತ ಪ್ರದೇಶಗಳಾಗಿದ್ದು, ಭಾರತದ ಅವಿಭಾಜ್ಯ ಅಂಗಗಳಾಗಿವೆ. ಇದನ್ನು ನಾವು ಪುನರುಚ್ಚರಿಸಲು ಬಯಸುತ್ತೇವೆ’ ಎಂದು ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚಿನ ವರ್ಷಗಳಲ್ಲಿ ಸೌದಿ ಅರೇಬಿಯಾದ ಜೊತೆಗೆ ವ್ಯಾಪಾರ ಸಂಬಂಧಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಪ್ರಯತ್ನಿಸಿದ್ದಾರೆ. ಕಳೆದ ವರ್ಷ ಪ್ರಧಾನಿ ಮೋದಿ ಅವರು ನವದೆಹಲಿ ವಿಮಾನ ನಿಲ್ದಾಣದಲ್ಲಿ ಸೌದಿ ಅರೇಬಿಯಾದ ರಾಜ ಮೊಹಮ್ಮದ್‌ ಬಿನ್‌ ಸಲ್ಮಾನ್‌ ಅವರನ್ನು ವೈಯಕ್ತಿಕವಾಗಿ ಸ್ವಾಗತಿಸಿದ್ದರು. ಈ ಭೇಟಿಯನ್ನು ಅಂದಿನ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್‌ ಕುಮಾರ್‌ ‘ಇದೇ ಮೊದಲ ಬಾರಿಗೆ ಸೌದಿ ದೊರೆ ಸಲ್ಮಾನ್‌ ಭಾರತ ಭೇಟಿ ನೀಡುತ್ತಿದ್ದು, ಉಭಯ ರಾಷ್ಟ್ರಗಳ ನಡುವಿನ ಸಂಬಂಧದಲ್ಲಿ ಇದೊಂದು ಹೊಸ ಅಧ್ಯಾಯದ ಆರಂಭ’ ಎಂದು ಹೇಳಿಕೊಂಡಿದ್ದರು.

ಭಾರತ ಈಗಾಗಲೇ ಸೌದಿ ಅರೇಬಿಯಾದೊಂದಿಗೆ ಇಂಧನ ಒಪ್ಪಂದಗಳಿಗೆ ಸಹಿ ಹಾಕಿದೆ. ಭಾರತ ವಿಶ್ವದ ಮೂರನೇ ಅತಿದೊಡ್ಡ ತೈಲ ಗ್ರಾಹಕ ರಾಷ್ಟ್ರವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.