ADVERTISEMENT

ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಮಳೆ: ಕಾಶ್ಮೀರದಲ್ಲಿ ಮೃತರ ಸಂಖ್ಯೆ 41ಕ್ಕೇರಿಕೆ

ಪಿಟಿಐ
Published 28 ಆಗಸ್ಟ್ 2025, 2:27 IST
Last Updated 28 ಆಗಸ್ಟ್ 2025, 2:27 IST
<div class="paragraphs"><p>ಜಮ್ಮು ಮತ್ತು ಕಾಶ್ಮೀರದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ನದಿಗಳು ಉಕ್ಕಿ ಹರಿಯುತ್ತಿವೆ.</p></div>

ಜಮ್ಮು ಮತ್ತು ಕಾಶ್ಮೀರದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ನದಿಗಳು ಉಕ್ಕಿ ಹರಿಯುತ್ತಿವೆ.

   

–ಪಿಟಿಐ ಚಿತ್ರ

ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಧಾರಾಕಾರ ಮಳೆ ಮುಂದುವರಿದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಮಳೆ ಸಂಬಂಧಿತ ಅವಘಡಗಳಲ್ಲಿ ಮೃತಪಟ್ಟವರ ಸಂಖ್ಯೆ 41ಕ್ಕೆ ಏರಿಕೆಯಾಗಿದೆ.

ADVERTISEMENT

ಮಾತಾ ವೈಷ್ಣೋದೇವಿ ಯಾತ್ರೆ ಸಾಗುವ ರಿಯಾಸಿ ಜಿಲ್ಲೆಯ ಮಾರ್ಗದಲ್ಲಿ ಭೂ ಕುಸಿತ ಸಂಭವಿಸಿದ್ದರಿಂದ 34 ಮಂದಿ ಸಾವಿಗೀಡಾಗಿದ್ದು, 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಹಲವರು ಅವಶೇಷದಡಿ ಸಿಲುಕಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾಶ್ಮೀರದ ಉಧಂಪುರದಲ್ಲಿ 629 ಮಿ.ಮೀ ಮತ್ತು ಜಮ್ಮುವಿನಲ್ಲಿ 380 ಮಿ.ಮೀ ಮಳೆಯಾಗಿದೆ. ಅನಂತ್‌ನಾಗ್ ಮತ್ತು ಶ್ರೀನಗರದಲ್ಲಿ ಝೀಲಂ ಉಕ್ಕಿ ಹರಿಯುತ್ತಿರುವುದರಿಂದ ವಸತಿ ಮತ್ತು ವಾಣಿಜ್ಯ ಪ್ರದೇಶಗಳಿಗೆ ನೀರು ನುಗ್ಗಿದೆ.

ಭಾರಿ ಮಳೆಯಿಂದಾಗಿ ಕಳೆದ ಮೂರು ದಿನಗಳಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಹಠಾತ್ ಪ್ರವಾಹದಿಂದಾಗಿ ಹಲವು ಸೇತುವೆಗಳು, ಮನೆಗಳು ಸೇರಿದಂತೆ ಸಾರ್ವಜನಿಕ ಮೂಲಸೌಕರ್ಯಗಳಿಗೆ ಭಾರಿ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಮ್ಮುವಿನ ಅಖ್ನೂರ್ ಸೆಕ್ಟರ್‌ನಲ್ಲಿ ಪ್ರವಾಹಕ್ಕೆ ಸಿಲುಕಿ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಯೋಧರೊಬ್ಬರು ಕೊಚ್ಚಿ ಹೋಗಿದ್ದು, ಕೆಲವು ಕಿಲೋ ಮೀಟರ್ ದೂರದಲ್ಲಿ ಮೃತದೇಹ ಪತ್ತೆಯಾಗಿದೆ ಎಂದು ಅವರು ಹೇಳಿದ್ದಾರೆ.

ನಿರಂತರ ಮಳೆಯಿಂದಾಗಿ ಉತ್ತರ ಭಾರತದ ಪ್ರಮುಖ ನದಿಗಳು ಉಕ್ಕಿ ಹರಿಯುತ್ತಿವೆ. ಪಂಜಾಬ್‌ನಲ್ಲಿ ಅಧಿಕ ಪ್ರಮಾಣದ ಕೃಷಿ ಭೂಮಿ ಮುಳುಗಡೆಯಾಗಿದೆ. ರೈಲು ಸೇವೆ ಸೇರಿದಂತೆ ಶಾಲಾ–ಕಾಲೇಜುಗಳನ್ನು ಮುಚ್ಚಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಂಗಾಳಕೊಲ್ಲಿಯಲ್ಲಿ ಕಡಿಮೆ ಒತ್ತಡದಿಂದ ಉಂಟಾದ ನಿರಂತರ ಮಳೆಯಿಂದಾಗಿ ಕರಾವಳಿ ರಾಜ್ಯ ಒಡಿಶಾದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ದಕ್ಷಿಣದ ರಾಜ್ಯಗಳಾದ ಕರ್ನಾಟಕದ ಹಲವಾರು ಭಾಗಗಳಲ್ಲಿ ವ್ಯಾಪಕವಾದ ಮಳೆಯಾಗುತ್ತಿದೆ. ತೆಲಂಗಾಣದ ಹಲವೆಡೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ ಎಂದು ವರದಿಯಾಗಿದೆ.

ಆಗಸ್ಟ್ ತಿಂಗಳಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ದಾಖಲೆ ಪ್ರಮಾಣದಲ್ಲಿ ಮಳೆ ಸುರಿದಿದೆ. ಸಾಧಾರಣಕ್ಕಿಂತ ಶೇ 60ರಷ್ಟು ಹೆಚ್ಚಿನ ಮಳೆಯಾಗಿದೆ. ಯಮುನಾ ನದಿಯ ನೀರಿನ ಮಟ್ಟ 204.61 ಮೀಟರ್ ತಲುಪಿದೆ.

ಹಿಮಾಚಲ ಪ್ರದೇಶದಲ್ಲಿ ಈಗಾಗಲೇ ಹಲವು ಭಾರಿ ಭೂಕುಸಿತ ಮತ್ತು ಹಠಾತ್ ಪ್ರವಾಹ ಸಂಭವಿಸಿದ ಪರಿಣಾಮ ಜನಜೀವನ ಅಸ್ತವ್ಯಸ್ತವಾಗಿದೆ. ರಾಜ್ಯದ 12 ಜಿಲ್ಲೆಗಳ ಪೈಕಿ 10 ಜಿಲ್ಲೆಗಳಲ್ಲಿ ಒಟ್ಟು 584 ರಸ್ತೆಗಳು ಮುಚ್ಚಲ್ಪಟ್ಟಿವೆ ಎಂದು ತಿಳಿದುಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.