
ಪ್ರಧಾನಿ ನರೇಂದ್ರ ಮೋದಿ ಮತ್ತು ಫ್ರಾನ್ಸ್ ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರನ್
ನವದೆಹಲಿ: ಭೌಗೋಳಿಕ ರಾಜಕೀಯ ಪ್ರಕ್ಷುಬ್ಧತೆ ಹೆಚ್ಚುತ್ತಿರುವ ಸಂದರ್ಭದಲ್ಲಿ, ವ್ಯಾಪಾರ, ರಕ್ಷಣೆ, ಇಂಧನ ಸುರಕ್ಷತೆ, ಅತ್ಯಾಧುನಿಕ ತಂತ್ರಜ್ಞಾನ ವಲಯಗಳಿಗೆ ಸಂಬಂಧಿಸಿ ಭಾರತ ಮತ್ತು ಫ್ರಾನ್ಸ್ ನಡುವೆ ಸಹಕಾರ ವೃದ್ಧಿಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಫ್ರಾನ್ಸ್ ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರನ್ ಶಪಥ ಮಾಡಿದರು.
ಮೋದಿ ಅವರು ಮ್ಯಾಕ್ರನ್ ಅವರೊಂದಿಗೆ ಮುಂಬೈನ ಲೋಕಭವನ ದಲ್ಲಿ ಮಂಗಳವಾರ ದ್ವಿಪಕ್ಷೀಯ ಮಾತುಕತೆ ನಡೆಸಿದರು.
ಮಾತುಕತೆ ವೇಳೆ ರಕ್ಷಣಾ ಸಹಕಾರ ಮತ್ತು ಅತ್ಯಾಧುನಿಕ ತಂತ್ರಜ್ಞಾನ ವಲಯಗಳ ದ್ವಿಪಕ್ಷೀಯ ಒಪ್ಪಂದಕ್ಕೆ ಹೆಚ್ಚು ಒತ್ತು ನೀಡಲಾಗಿದೆ ಎಂದು ತಿಳಿದುಬಂದಿದೆ.
ಮೋದಿ ಅವರು ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿದ್ದು, ‘ಭಾರತ–ಫ್ರಾನ್ಸ್ ವಿಶೇಷ ಬಾಂಧವ್ಯ ಹಂಚಿಕೊಂಡಿವೆ’ ಎಂದಿದ್ದಾರೆ.
‘ಫ್ರಾನ್ಸ್ ಭಾರತದ ಅತ್ಯಂತ ಹಳೆಯ ಪಾಲುದಾರ ರಾಷ್ಟ್ರ. ಮ್ಯಾಕ್ರನ್ ಅವರೊಂದಿಗೆ ಸೇರಿ ಉಭಯ ದೇಶಗಳ ನಡುವಣ ಕಾರ್ಯತಂತ್ರದ ಸಹಭಾಗಿತ್ವವನ್ನು ಮತ್ತೊಂದು ಮಜಲಿಗೆ ಕೊಂಡೊ
ಯ್ಯುತ್ತೇವೆ’ ಎಂದು ಹೇಳಿದ್ದಾರೆ.
‘ಆಳವಾದ ನಂಬಿಕೆ ಮತ್ತು ದೂರದೃಷ್ಟಿಯ ಆಧಾರದ ಮೇಲೆ ಎರಡೂ ರಾಷ್ಟ್ರಗಳ ನಡುವೆ ‘ವಿಶೇಷ ಜಾಗತಿಕ ಕಾರ್ಯತಂತ್ರದ ಸಹಭಾಗಿತ್ವ’ಕ್ಕೆ ಮುಂದಡಿ ಇಟ್ಟಿದ್ದೇವೆ’ ಎಂದಿದ್ದಾರೆ.
‘ಭಾರತ ಮತ್ತು ಯುರೋಪ್ ನಡುವಣ ಸಂಬಂಧ ವೃದ್ಧಿಗೆ 2026 ಪರ್ವಕಾಲವಾಗಿದೆ. ಕೆಲವು ದಿನಗಳ ಹಿಂದಷ್ಟೇ ನಾವು ‘ಮುಕ್ತ ವ್ಯಾಪಾರ ಒಪ್ಪಂದ’ಕ್ಕೆ ಸಹಿ ಹಾಕಿದ್ದೇವೆ’ ಎಂದು ಹೇಳಿದ್ದಾರೆ.
‘ಜಗತ್ತು ಅನಿಶ್ಚಿತತೆಯಿಂದ ಸಾಗುತ್ತಿರುವ ಇಂಥ ಸಂದರ್ಭದಲ್ಲಿ ಭಾರತ–ಫ್ರಾನ್ಸ್ ಪಾಲುದಾರಿಕೆಯು ಜಾಗತಿಕ ಸ್ಥಿರತೆಗೂ ಶಕ್ತಿ ತುಂಬಲಿದೆ’ ಎಂದು ಬಣ್ಣಿಸಿದ್ದಾರೆ.
ಒಂದೇ ಕಾರಲ್ಲಿ ಪ್ರಯಾಣ: ಪ್ರಧಾನಿ ಮೋದಿ ಮತ್ತು ಮ್ಯಾಕ್ರನ್ ಅವರು ಒಂದೇ ಕಾರಿನಲ್ಲಿ ಲೋಕಭವನದಿಂದ ತಾಜ್ ಮಹಲ್ ಪ್ಯಾಲೇಸ್‌ವರೆಗೆ ಪ್ರಯಾಣಿಸಿದರು. ಮರೀನ್ ಡ್ರೈವ್ ಮೂಲಕ ಸಾಗಿದ ಉಭಯ ನಾಯಕರು ಖಾಸಗಿ ಮಾತುಕತೆಯಲ್ಲಿ ತೊಡಗಿದ್ದರು.
ಮೋದಿ ಅವರ ಆಹ್ವಾನದ ಮೇರೆಗೆ ಮ್ಯಾಕ್ರನ್ ಅವರು ಭಾರತಕ್ಕೆ ಆಗಮಿಸಿದ್ದು, ಫೆಬ್ರುವರಿ 17ರಿಂದ 19ರವರೆಗೆ ಭಾರತದಲ್ಲಿ ಇರಲಿದ್ದಾರೆ. ಈ ಸಂದರ್ಭದಲ್ಲಿ ಎ.ಐ ಶೃಂಗದಲ್ಲೂ ಭಾಗವಹಿಸಲಿದ್ದಾರೆ.
114 ರಫೇಲ್ ಯುದ್ಧ ವಿಮಾನಗಳ ಖರೀದಿಗೆ ಭಾರತದ ರಕ್ಷಣಾ ಸಚಿವಾ
ಲಯ ಅನುಮೋದನೆ ನೀಡಿದ ಬೆನ್ನಲ್ಲೇ ಮ್ಯಾಕ್ರನ್ ಭಾರತಕ್ಕೆ ಭೇಟಿ ನೀಡಿದ್ದಾರೆ.
ಮರೀನ್ ಡ್ರೈವ್‌ನಲ್ಲಿ ಮ್ಯಾಕ್ರನ್ ವಿಹಾರ
ಮುಂಬೈ: ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುವೆಲ್ ಮ್ಯಾಕ್ರನ್ ಅವರು ಮಂಗಳವಾರ ಬೆಳಿಗ್ಗೆ ಮುಂಬೈಗೆ ಬಂದಿಳಿದರು.
ಐತಿಹಾಸಿಕ ಮರೀನಾ ಡ್ರೈವ್‌ನಲ್ಲಿ ವಿಹಾರ ಮಾಡುವ ಮೂಲಕ ದಿನವನ್ನು ಆರಂಭಿಸಿದರು. ಈ ಸಂದರ್ಭದಲ್ಲಿ ಅವರ ಭದ್ರತಾ ಸಿಬ್ಬಂದಿಯೂ ಜೊತೆಗಿದ್ದರು. ಮುಂಬೈ ಪೊಲೀಸರೂ ಬಿಗಿ ಭದ್ರತೆ ಒದಗಿಸಿದ್ದರು.
ಮುಂಬೈ ಮೇಲೆ 2008ರಲ್ಲಿ ನಡೆದ ಭಯೋತ್ಪಾದನಾ ದಾಳಿಯಲ್ಲಿ ಮೃತಪಟ್ಟ ಸಂತ್ರಸ್ತರಿಗೆ ಮ್ಯಾಕ್ರನ್ ಮತ್ತು ಅವರ ಪತ್ನಿ ಬ್ರಿಜಿಟ್ ಮ್ಯಾಕ್ರನ್ ಅವರು ನಮನ ಸಲ್ಲಿಸಿದರು.
ಭಾರತವು ಫ್ರಾನ್ಸ್‌ನ ನಂಬಿಕಸ್ಥ ಪಾಲುದಾರ. ರಫೇಲ್ ವಿಮಾನಗಳಿಂದ ಜಲಾಂತರ್ಗಾಮಿಗಳವರೆಗೆ ರಕ್ಷಣಾ ಸಹಕಾರವನ್ನು ವಿಸ್ತರಿಸಿದ್ದೇವೆಇಮ್ಯಾನುವೆಲ್ ಮ್ಯಾಕ್ರನ್,ಫ್ರಾನ್ಸ್ ಅಧ್ಯಕ್ಷ
ಫ್ರಾನ್ಸ್ ಜೊತೆಗೂಡಿ ಮೌಂಟ್ ಎವರೆಸ್ಟ್ ತುತ್ತತುದಿವರೆಗೆ ಹಾರುವ ಹೆಲಿಕಾಪ್ಟರ್‌ಗಳನ್ನು ಭಾರತದಲ್ಲಿ ತಯಾರಿಸುತ್ತೇವೆ, ರಫ್ತು ಮಾಡುತ್ತೇವೆ ಎಂಬುದು ಹೆಮ್ಮೆಯ ವಿಚಾರನರೇಂದ್ರ ಮೋದಿ, ಪ್ರಧಾನಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.