ನವದೆಹಲಿ: ಭಾರತದ ನಿವ್ವಳ ಆಂತರಿಕ ಉತ್ಪನ್ನದ (ಜಿಡಿಪಿ) ಬೆಳವಣಿಗೆ ದರವು ಏಪ್ರಿಲ್–ಜೂನ್ ತ್ರೈಮಾಸಿಕದಲ್ಲಿ ನಿರೀಕ್ಷೆಗೂ ಮೀರಿ ಶೇಕಡ 7.8ಕ್ಕೆ ಏರಿಕೆ ಕಂಡಿದೆ. ಇದು ಕಳೆದ ಐದು ತ್ರೈಮಾಸಿಕಗಳಲ್ಲಿ (15 ತಿಂಗಳಲ್ಲಿ) ದಾಖಲಾಗಿರುವ ಗರಿಷ್ಠ ಮಟ್ಟದ ಜಿಡಿಪಿ ಬೆಳವಣಿಗೆಯಾಗಿದೆ.
2024ರ ಜನವರಿ –ಮಾರ್ಚ್ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆ ಶೇ 8.4ರಷ್ಟಾಗಿತ್ತು. ಇದು ಇದುವರೆಗಿನ ದಾಖಲೆಯಾಗಿತ್ತು.
ಚೀನಾದ ಜಿಡಿಪಿ ಬೆಳವಣಿಗೆಯು ಏಪ್ರಿಲ್– ಜೂನ್ ತ್ರೈಮಾಸಿಕದಲ್ಲಿ ಶೇ 5.2ರಷ್ಟಿದೆ. ಚೀನಾಕ್ಕೆ ಹೋಲಿಸಿದರೆ ಭಾರತವು ವಿಶ್ವದಲ್ಲೇ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಎನಿಸಿಸಿಕೊಂಡಿದೆ.
ಭಾರತದ ಮೇಲೆ ಅಮೆರಿಕ ಹೇರಿರುವ ಶೇ 50ರಷ್ಟು ಸುಂಕವು ಬುಧವಾರದಿಂದ ಜಾರಿಗೆ ಬಂದಿದೆ. ಈಗ ದಾಖಲಾಗಿರುವ ಜಿಡಿಪಿಯು ಅಮೆರಿಕ ಹೆಚ್ಚುವರಿ ಸುಂಕ ವಿಧಿಸುವ ಮೊದಲಿನ ಪ್ರಗತಿ ದರ. ಆದರೆ, ‘ಟ್ರಂಪ್ ಸುಂಕ’ದಿಂದ ದೇಶದ ಜವಳಿ, ವಜ್ರ, ಆಭರಣ ಮತ್ತು ಚರ್ಮದ ಉದ್ಯಮಗಳು ಹೆಚ್ಚು ಬಾಧಿತವಾಗಲಿವೆ. ಹೀಗಾಗಿ ಜುಲೈ–ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆ ದರದಲ್ಲಿ ಇಳಿಕೆಯಾಗುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.
ಕೃಷಿ, ವ್ಯಾಪಾರ, ಹೋಟೆಲ್, ಹಣಕಾಸು, ರಿಯಲ್ ಎಸ್ಟೇಟ್ ವಲಯಗಳಲ್ಲಿನ ಗಣನೀಯ ಪ್ರಗತಿಯಿಂದ ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಜಿಡಿಪಿ ಉತ್ತಮ ಬೆಳವಣಿಗೆ ಕಂಡಿದೆ ಎಂದು ರಾಷ್ಟ್ರೀಯ ಅಂಕಿಅಂಶಗಳ ಕಚೇರಿ (ಎನ್‌ಎಸ್ಒ) ಹೇಳಿದೆ.
‘ಎನ್‌ಎಸ್ಒ‘ ಪ್ರಕಟಣೆ ಪ್ರಕಾರ, 2025–26ರ ಮೊದಲ ತ್ರೈಮಾಸಿಕದಲ್ಲಿ ವಾಸ್ತವ ಜಿಡಿಪಿ ಸ್ಥಿರ ಬೆಲೆಯು ₹47.89 ಲಕ್ಷ ಕೋಟಿ ಆಗಿದೆ. 2024–25ರ ಮೊದಲ ತ್ರೈಮಾಸಿಕದಲ್ಲಿ ಇದು ₹44. 42 ಲಕ್ಷ ಕೋಟಿ ಇತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.