ADVERTISEMENT

ಕೋವಿಡ್‌ ಸಂದರ್ಭದಲ್ಲಿ ಭಾರತ 150 ದೇಶಗಳಿಗೆ ಸಹಾಯ ಮಾಡಿದೆ: ಗೋಯಲ್‌

ಏಜೆನ್ಸೀಸ್
Published 13 ಮಾರ್ಚ್ 2021, 10:40 IST
Last Updated 13 ಮಾರ್ಚ್ 2021, 10:40 IST
ಪೀಯೂಷ್‌ ಗೋಯಲ್‌
ಪೀಯೂಷ್‌ ಗೋಯಲ್‌   

ತಿರುಪತಿ: ‘ಕೋವಿಡ್‌–19 ಬಿಕ್ಕಟ್ಟಿನ ಸಂದರ್ಭದಲ್ಲಿ ಭಾರತವು ಪ್ರಧಾನಿ ಮೋದಿ ಅವರ ನಾಯಕತ್ವದಲ್ಲಿ ಜಗತ್ತಿಗೆ ತನ್ನಿಂದಾದ ಎಲ್ಲ ರೀತಿಯ ನೆರವನ್ನು ನೀಡಿದೆ’ ಎಂದು ರೈಲ್ವೆ ಸಚಿವ ಪೀಯೂಷ್‌ ಗೋಯಲ್‌ ಶನಿವಾರ ಹೇಳಿದರು.

ತಿರುಮಲದಲ್ಲಿರುವ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ‍ಬಳಿಕ ಅವರು ಸುದ್ದಿಗಾರರ ಜತೆ ಮಾತನಾಡಿದರು.

‘130 ಕೋಟಿ ಜನಸಂಖ್ಯೆಯುಳ್ಳ ನಮ್ಮ ದೇಶವು ಕೋವಿಡ್‌ ಸೋಂಕಿನಿಂದ ಬೇಗ ಗುಣಮುಖರಾಗುವ ಮೂಲಕ ತನ್ನ ಶಕ್ತಿಯನ್ನು ಪ್ರದರ್ಶಿಸಿದೆ’ ಎಂದರು.

ADVERTISEMENT

‘ಭಾರತ ಸಾಂಕ್ರಾಮಿಕದ ಸಂದರ್ಭದಲ್ಲಿ ಬೇರೆ ದೇಶದ ಮೇಲೆ ಅವಲಂಬಿತವಾಗಿರಲಿಲ್ಲ. ಬದಲಿಗೆ ಬೇರೆ ದೇಶಗಳಿಗೆ ಸೋಂಕಿನ ವಿರುದ್ಧ ಹೋರಾಡಲು ಬೆಂಬಲವನ್ನು ನೀಡಿದೆ. ಪ್ರಧಾನಿ ಮೋದಿ ಅವರು ‘ವಸುಧೈವ ಕುಟುಂಬಕಂ’ ಎಂಬ ತತ್ವದೊಂದಿಗೆ 150 ದೇಶಗಳಿಗೆ ಔಷಧಿಯನ್ನು ಪೂರೈಸಿದರು. ಅಲ್ಲದೆ 75 ದೇಶಗಳಿಗೆ ಲಸಿಕೆಯನ್ನು ಕೂಡ ರವಾನಿಸಿದರು’ ಎಂದು ಗೋಯಲ್‌ ತಿಳಿಸಿದರು.

‘ಇದು ಭಾರತೀಯರ ಶಕ್ತಿ ಮತ್ತು ಮನೋಭಾವವನ್ನು ಪ್ರತಿಬಿಂಬಿಸುತ್ತದೆ. ಭಾರತೀಯರು ತಮ್ಮ ಸಂರಕ್ಷಣೆಯೊಂದಿಗೆ ವಿಶ್ವದ ಬಗ್ಗೆಯೂ ಕಾಳಜಿ ವಹಿಸಿದ್ದಾರೆ. ಬಾಲಾಜಿ ದೇವರು ಹೀಗೆಯೇ ವಿಶ್ವಕ್ಕೆ ನೆರವಾಗಲು ನಮಗೆ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಕೋವಿಡ್‌ ಇನ್ನೂ ಅಂತ್ಯವಾಗಿಲ್ಲ. ಹಾಗಾಗಿ ಜನರು ವೈಯಕ್ತಿಕ ಅಂತರ ಪಾಲಿಸಬೇಕು ಮತ್ತು ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು’ ಎಂದು ಮನವಿ ಮಾಡಿದರು.

‘ಲಾಕ್‌ಡೌನ್‌ ತೆರವುಗೊಳಿಸಿದ ಬಳಿಕ ಭಾರತದ ಆರ್ಥಿಕತೆ ಸರಿಯಾದ ಹಾದಿಗೆ ಬಂದಿದೆ. ಭಾರತೀಯ ರೈಲ್ವೆ ಇಲಾಖೆಯು ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚಿನ ಯೋಜನೆಗಳನ್ನು ಕೈಗೊಂಡಿದೆ. ತಿರುಪತಿಯಲ್ಲಿ ರೈಲ್ವೆ ವಿಸ್ತರಣೆ ಕಾರ್ಯವು ಮುಕ್ತಾಯದ ಹಂತ ತಲುಪಿದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.